ಬುಧವಾರ, ಮೇ 12, 2021
27 °C
ವಿಧಾನ ಪರಿಷತ್‌ನಲ್ಲಿ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌

ಎಫ್‌ಡಿಐ ಆಕರ್ಷಣೆ: ಮೂರನೇ ಸ್ಥಾನದಲ್ಲಿ ರಾಜ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ವಿದೇಶಿ ನೇರ ಬಂಡವಾಳ (ಎಫ್‌ಡಿಐ) ಆಕರ್ಷಣೆಯಲ್ಲಿ ಕರ್ನಾಟಕವು ದೇಶದಲ್ಲಿ ಮೂರನೇ ಸ್ಥಾನವನ್ನು ಉಳಿಸಿಕೊಂಡಿದೆ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಅವರು ಮಂಗಳವಾರ ವಿಧಾನ ಪರಿಷತ್‌ನಲ್ಲಿ ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಜೆಡಿಎFdಸ್‌ನ ಕೆ.ಎ. ತಿಪ್ಪೇಸ್ವಾಮಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ‘2017–18ರಲ್ಲಿ ರಾಜ್ಯಕ್ಕೆ ₹55,334 ಕೋಟಿ ಎಫ್‌ಡಿಐ ಬಂದಿದ್ದು, ದೇಶದಲ್ಲಿ ಮೂರನೇ ಸ್ಥಾನದಲ್ಲಿತ್ತು. 2018–19ರಲ್ಲಿ ₹46,963 ಕೋಟಿ ಹೂಡಿಕೆ ಮತ್ತು 2019–20ರಲ್ಲಿ ₹ 63,177 ಕೋಟಿ ಹೂಡಿಕೆಯೊಂದಿಗೆ ಎರಡನೇ ಸ್ಥಾನ ಪಡೆದಿತ್ತು. 2020–21ರಲ್ಲಿ ಕಳೆದ ಡಿಸೆಂಬರ್‌ವರೆಗೆ ₹ 47,173 ಕೋಟಿ ಹೂಡಿಕೆಯೊಂದಿಗೆ ಮೂರನೇ ಸ್ಥಾನದಲ್ಲಿದೆ’ ಎಂದು ಮಾಹಿತಿ ನೀಡಿದರು.

ಕೋವಿಡ್‌ ಲಾಕ್‌ಡೌನ್‌ನಿಂದ ಎಫ್‌ಡಿಐ ಹರಿವಿಗೆ ಯಾವುದೇ ತೊಂದರೆ ಆಗಿಲ್ಲ. ಅಮೆರಿಕ, ಬ್ರಿಟನ್, ಮಾರಿಷಿಯಸ್, ಕೆನಡಾ, ಜಪಾನ್‌ ಸೇರಿದಂತೆ ಹಲವು ದೇಶಗಳ ಹೂಡಿಕೆದಾರರು ಆಸಕ್ತಿ ತೋರಿದ್ದಾರೆ. ಚೀನಾ ತೊರೆಯಲು ಇಚ್ಛಿಸುತ್ತಿರುವ ದೊಡ್ಡ ಹೂಡಿಕೆದಾರರನ್ನು ಸೆಳೆಯಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಕಾರ್ಯಪಡೆ ರಚಿಸಲಾಗಿದೆ. ಸದ್ಯ ವಿದೇಶಿ ಹೂಡಿಕೆಯ ಪ್ರಸ್ತಾವಗಳ ಸ್ವೀಕಾರದಲ್ಲಿ ರಾಜ್ಯ ಒಂದನೇ ಸ್ಥಾನದಲ್ಲಿದೆ ಎಂದರು.

ಉದ್ಯೋಗ ನೀಡದಿದ್ದರೆ ಕ್ರಮ: ಕಾಂಗ್ರೆಸ್‌ನ ಎಂ.ನಾರಾಯಣಸ್ವಾಮಿ ಪ್ರಶ್ನೆಗೆ ಉತ್ತರಿಸಿದ ಕೈಗಾರಿಕಾ ಸಚಿವರು, ‘ರಾಜ್ಯದಲ್ಲಿನ ಎಲ್ಲ ಕೈಗಾರಿಕೆಗಳೂ ‘ಡಿ’ ದರ್ಜೆಯಲ್ಲಿ ಶೇ 100ರಷ್ಟು ಮತ್ತು ಇತರ ದರ್ಜೆಗಳಲ್ಲಿ ಶೇ 70ರಷ್ಟು ಹುದ್ದೆಗಳನ್ನು ಸ್ಥಳೀಯರಿಗೆ ನೀಡುವುದು ಕಡ್ಡಾಯ. ನಿಯಮ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು