ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ರಸಗೊಬ್ಬರ: ರೈತರಿಗೆ ತಪ್ಪದ ಪರದಾಟ

Last Updated 1 ಜನವರಿ 2023, 1:03 IST
ಅಕ್ಷರ ಗಾತ್ರ

ಬೆಂಗಳೂರು: ಸದಾ ಕಾಲ ಮುಂಗಾರಿನ ಜೊತೆ ಜೂಜಾಡುವ ರೈತ, ಆಡಳಿತ ವ್ಯವಸ್ಥೆಯಲ್ಲಿನ ವೈಫಲ್ಯಗಳಿಂದಾಗಿ ರಸಗೊಬ್ಬರಕ್ಕೂ ಪರದಾಡುವ ಪರಿಸ್ಥಿತಿ ಇದೆ. ಪೂರೈಕೆ ಮತ್ತು ದಾಸ್ತಾನು ವ್ಯವಸ್ಥೆಯಲ್ಲಿನ ಲೋಪ, ಅಕ್ರಮ ದಾಸ್ತಾನು, ಕಾಳಸಂತೆಯಲ್ಲಿ ಮಾರಾಟ, ಅನಧಿಕೃತ ‘ಲಿಂಕ್‌ ವ್ಯವಸ್ಥೆ‘, ಖಾಸಗಿಯವರ 'ಕೈಚಳಕ' ಇತ್ಯಾದಿಗಳಿಂದಾಗಿ ಬಹುತೇಕ ಕಡೆ ರೈತರಿಗೆ ಬೇಕಾದ ರಸಗೊಬ್ಬರ ಸಕಾಲಕ್ಕೆ ಸಿಗುತ್ತಿಲ್ಲ.

ದೇಶದ ಬೆನ್ನೆಲುಬಾದ ರೈತರು ಪ್ರತಿ ವರ್ಷ ಉಂಟಾಗುತ್ತಿರುವ ಅತಿವೃಷ್ಟಿ, ಅನಾವೃಷ್ಟಿ, ಬೆಳೆದ ಉತ್ಪನ್ನಗಳಿಗೆ ವೈಜ್ಞಾನಿಕ ಬೆಲೆ ಸಿಗದೆ ಇರುವುದು ಸೇರಿದಂತೆ ನಾನಾ ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿದ್ದು, ಅದರ ಸಾಲಿಗೆ ರಸಗೊಬ್ಬರ ಸಮಸ್ಯೆಯೂ ಇದೀಗ ಸೇರಿದೆ.

‘ಎರಡು-ಮೂರು ವರ್ಷಗಳಿಂದ ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಮುಂಗಾರು, ಹಿಂಗಾರು ಮತ್ತು ಬೇಸಿಗೆಯಲ್ಲಿ ಒಟ್ಟು 114.54 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ರೈತರು ಬಿತ್ತನೆ ಮಾಡುತ್ತಾರೆ. ಇದಕ್ಕಾಗಿ ವಾರ್ಷಿಕ ಅಂದಾಜು 43.76 ಲಕ್ಷ ಟನ್‌ ರಸಗೊಬ್ಬರ ಬೇಕಾಗುತ್ತದೆ. ಆದರೆ, ಬಿತ್ತನೆ ಕಾಲಕ್ಕೆ ಬೇಕಾದ ರಸಗೊಬ್ಬರ ರೈತರಿಗೆ ಲಭ್ಯವಾಗುತ್ತಿಲ್ಲ.

ರಾಜ್ಯದಲ್ಲಿ ಒಟ್ಟು 3,500 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು (ಸೊಸೈಟಿಗಳು) ಇವುಗಳ ಮೂಲಕ ರೈತರಿಗೆ ರಸಗೊಬ್ಬರ ಮಾರಾಟ ಮಾಡಲಾಗುತ್ತದೆ. ಸಹಕಾರ ಸಂಘಗಳು ಇಲ್ಲದ ಕಡೆ ಏಳು ಸಾವಿರಕ್ಕೂ ಅಧಿಕ ಖಾಸಗಿ ಚಿಲ್ಲರೆ ಡೀಲರ್‌ಗಳಿಗೆ ಪರವಾನಗಿ ನೀಡಿ, ರೈತರಿಗೆ ರಸಗೊಬ್ಬರ ಪೂರೈಕೆ ಮಾಡುವ ಜವಾಬ್ದಾರಿ ನೀಡಲಾಗಿದೆ.

ಸಹಕಾರ ಚಳವಳಿಯ ಪ್ರಭಾವ ಇರುವ ಜಿಲ್ಲೆಗಳಲ್ಲಿ ಉದಾಹರಣೆಗೆ ಮಂಡ್ಯ, ಬೀದರ್‌, ಧಾರವಾಡ, ಗದಗ ಮೊದಲಾದ ಕಡೆ ಸಹಕಾರ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ ಸಂಘಗಳ ಮೂಲಕವೇ ರಸಗೊಬ್ಬರ ಪೂರೈಕೆ ಮಾಡಲಾಗುತ್ತಿದೆ. ಆದರೆ, ಸಹಕಾರ ಸಂಘಗಳು ಎಲ್ಲಾ ಕಡೆ ಇಲ್ಲ. ಹೀಗಾಗಿ ರೈತರು ಖಾಸಗಿಯವರ ಮೇಲೆ ಅವಲಂಬಿತರಾಗಿದ್ದಾರೆ.

ಸೊಸೈಟಿಯವರು ಅಗತ್ಯವಿರುವ ರಸಗೊಬ್ಬರದ ಬೇಡಿಕೆಯ ಪಟ್ಟಿಯೊಂದಿಗೆ, ಅದರ ಮೊತ್ತವನ್ನು ಡಿ.ಡಿ ಅಥವಾ ಆರ್‌ಟಿಜಿಎಸ್‌ ಮುಖಾಂತರ ಡೀಲರ್‌ಗಳಿಗೆ ಪಾವತಿಸಬೇಕು. ಒಂದು ವೇಳೆ ಮೊದಲೇ ಹಣ ಪಾವತಿಸದಿದ್ದರೆ ಡೀಲರ್‌ಗಳು ಸೊಸೈಟಿಗಳಿಗೆ ರಸಗೊಬ್ಬರ ಸರಬರಾಜು ಮಾಡುವುದಿಲ್ಲ. ಬೆರಳೆಣಿಕೆಯಷ್ಟು ಸಹಕಾರ ಸಂಘಗಳು ಆರ್ಥಿಕವಾಗಿ ಪ್ರಬಲವಾಗಿದ್ದು, ಅವುಗಳಿಗೆ ಡಿಸಿಸಿ ಬ್ಯಾಂಕ್‌ನಿಂದ ಸಾಲ ದೊರೆಯುತ್ತದೆ. ಅಂತಹ ಕಡೆ ಡೀಲರ್‌ಗಳಿಗೆ ಮೊದಲೇ ಹಣ ನೀಡಿ, ಅಗತ್ಯವಿರುವ ರಸಗೊಬ್ಬರವನ್ನು ತರಿಸಿಕೊಳ್ಳಲಾಗುತ್ತಿದೆ.

ಆದರೆ, ಬಹುತೇಕ ಸಹಕಾರ ಸಂಘಗಳು ಆರ್ಥಿಕವಾಗಿ ಸಂಕಷ್ಟದಲ್ಲಿವೆ. ಸಾಮಾನ್ಯ ಸಭೆಯಲ್ಲಿ ನಿರ್ಧಾರ ತೆಗೆದುಕೊಂಡು ಮೊದಲೇ ಹಣ ನೀಡಿ ರಸಗೊಬ್ಬರ ತರಿಸುವ ಸ್ಥಿತಿಯಲ್ಲಿ ಇಲ್ಲ. ಅಲ್ಲದೆ ದಿವಾಳಿ ಸ್ಥಿತಿಯಲ್ಲಿರುವ ಸಂಘಗಳಿಗೆ ಸಾಲ ನೀಡಲು ಯಾವ ಬ್ಯಾಂಕ್‌ಗಳೂ ಮುಂದೆ ಬರುತ್ತಿಲ್ಲ. ಇದರಿಂದಾಗಿ ಪೂರ್ಣ ಪ್ರಮಾಣದಲ್ಲಿ ರಸಗೊಬ್ಬರ ತರಿಸಲು ಸೊಸೈಟಿಗಳಿಗೆ ಕಷ್ಟವಾಗುತ್ತಿದೆ.

ಸ್ಥಳೀಯವಾಗಿ ಸೊಸೈಟಿಗಳಲ್ಲಿ ರಸಗೊಬ್ಬರ ಸಿಗದ ಕಾರಣ, ರೈತರು ಕೃಷಿ ಕೆಲಸ ಬಿಟ್ಟು ತಾಲ್ಲೂಕು ಕೇಂದ್ರಗಳಿಗೆ ಅಲೆಯಬೇಕು. ಅಲ್ಲಿ ಮೊದಲೇ ದರ ಜಾಸ್ತಿ. ಇದರೊಂದಿಗೆ ಅಲ್ಲಿಂದ ಊರಿಗೆ ತರಲು ಆಗುವ ವೆಚ್ಚವನ್ನೂ ಅವರೇ ಭರಿಸಬೇಕು. ಹೀಗಾಗಿ ರೈತರಿಗೆ ನೆಮ್ಮದಿಯೇ ಇಲ್ಲದಂತಾಗಿದೆ.

ಸೊಸೈಟಿಗಳ ಮೂಲಕ ಈ ವರ್ಷ ಸಕಾಲಕ್ಕೆ ರೈತರಿಗೆ ಅಗತ್ಯವಿರುವ ರಸಗೊಬ್ಬರ ಪೂರೈಕೆಯಾಗದ ಕಾರಣ ಹಲವು ಕಡೆ ರೈತರು ಖಾಸಗಿಯವರ ಬಳಿ ನಿಗದಿಗಿಂತ ಅಧಿಕ ಹಣ ನೀಡಿ ಖರೀದಿಸಿರುವ ಹಲವು ನಿದರ್ಶನಗಳಿವೆ. ’ಸೊಸೈಟಿಯಲ್ಲಿ ಯೂರಿಯಾ ಕೇಳಿದಾಗ ಸ್ಟಾಕ್‌ ಇಲ್ಲ ಅಂದರು. ಬೇರೆ ದಾರಿ ಇಲ್ಲದೆ ಖಾಸಗಿಯವರ ಬಳಿ ಖರೀದಿಸಿದೆ‘ ಎನ್ನುತ್ತಾರೆ ಗುಂಡ್ಲುಪೇಟೆ ತಾಲ್ಲೂಕು ಮಗುವಿನಹಳ್ಳಿಯ ರೈತ ಚಿನ್ನಸ್ವಾಮಿ.

’ಈ ವರ್ಷ ಯೂರಿಯಾ, ಡಿಎಪಿಗೆ ಕೊರತೆ ಇತ್ತು. ಶಿವಪುರದ ಸೊಸೈಟಿಯಲ್ಲಿ ನಮಗೆ ಬೇಕಾದ ಗೊಬ್ಬರವೇ ಸಿಗಲಿಲ್ಲ. ಹೀಗಾಗಿ 10.ಕಿ.ಮೀ. ದೂರದಲ್ಲಿರುವ ಗುಂಡ್ಲುಪೇಟೆಯಿಂದ ತರಿಸಿಕೊಂಡೆ. 45 ಕೆ.ಜಿ. ತೂಕದ ಯೂರಿಯೂ ಚೀಲದ ನಿಗದಿತ ಬೆಲೆ ₹266. ಆದರೆ, ಚೀಲಕ್ಕೆ ₹285–290 ತೆಗೆದುಕೊಳ್ಳುತ್ತಾರೆ‘ ಎಂದು ಮತ್ತೊಬ್ಬ ರೈತ ಮಹದೇವಪ್ಪ ಅಳಲು ತೋಡಿಕೊಂಡರು.

‘ಡಿಎಪಿ ಕೇಳಿದರೆ ಪೊಟ್ಯಾಷ್‌ ಕೊಡುತ್ತಾರೆ. ನಾವು ಕೇಳಿದ ಗೊಬ್ಬರ ದಾಸ್ತಾನು ಇಲ್ಲ ಎನ್ನುತ್ತಾರೆ. ಖಾಸಗಿಯವರ ಬಳಿ ಹೋದರೆ ಒಂದು ಚೀಲಕ್ಕೆ ₹50, ₹100 ಜಾಸ್ತಿ ತೆಗೆದುಕೊಳ್ಳುತ್ತಾರೆ‘ ಎಂಬುದು ದೊಡ್ಡ ತುಮಕೂರಿನ ರೈತ ವಸಂತ್‌ ಅವರ ಅಳಲು.

ಕಾಳಸಂತೆಯಲ್ಲಿ ಮಾರಾಟ: ‘ಸೊಸೈಟಿಯಲ್ಲಿ ಸ್ಟಾಕ್‌ ಇಲ್ಲ ಎನ್ನುತ್ತಾರೆ. ಆದರೆ, ಕಾಳಸಂತೆಯಲ್ಲಿ ರಸಗೊಬ್ಬರ ಸಿಗುತ್ತದೆ. ಸೊಸೈಟಿಗಳಿಗೆ ಪೂರೈಕೆಯಾಗಬೇಕಿದ್ದ ಗೊಬ್ಬರವನ್ನು ಅಕ್ರಮವಾಗಿ ದಾಸ್ತಾನು ಮಾಡಿ, ಕೇರಳ, ತಮಿಳುನಾಡಿಗೆ ಕಳುಹಿಸಲಾಗುತ್ತಿದೆ. ಅಲ್ಲದೆ ವಾಮಮಾರ್ಗದ ಮೂಲಕ ಅಧಿಕ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಇಷ್ಟಾದರೂ ಯಾರಿಗೂ ಶಿಕ್ಷೆಯಾಗಿಲ್ಲ’ ಎನ್ನುತ್ತಾರೆ ರೈತ ಮುಖಂಡ ಶ್ರೀನಿವಾಸ್‌.

ಗುಂಡ್ಲುಪೇಟೆ ತಾಲ್ಲೂಕಿನ ಶಿವಪುರದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ 510 ಚೀಲ, ಶಿರಹಟ್ಟಿ ತಾಲ್ಲೂಕಿನ ಹೆಬ್ಬಾಳ ಗ್ರಾಮದಲ್ಲಿ 100 ಟನ್ ಗೊಬ್ಬರ, ಹಾವೇರಿಯಲ್ಲಿ 696 ಚೀಲಗಳ ಯೂರಿಯಾ ಗೊಬ್ಬರ, ಅರಸೀಕೆರೆ ತಾಲ್ಲೂಕಿನ ಗ್ರಾಮವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿ ಇಟ್ಟಿದ್ದ 97 ಚೀಲಗಳ ರಸಗೊಬ್ಬರ ಹಾಗೂ ಕಾಳಗಿ ತಾಲ್ಲೂಕಿನ ಕೋರವಾರ ಗ್ರಾಮದ ಮನೆಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿದ್ದ ರಸಗೊಬ್ಬರವನ್ನು ಅಧಿಕಾರಿಗಳು ದಾಳಿ ಮಾಡಿ ವಶಪಡಿಸಿಕೊಂಡಿದ್ದಾರೆ.

ಖಾಸಗಿಯವರಿಗೆ ಆದ್ಯತೆ: ‘ಸೊಸೈಟಿಗಳ ಬಗ್ಗೆ ಡೀಲರ್‌ಗಳು ಮಲತಾಯಿ ಧೋರಣೆ ಅನುಸರಿಸುತ್ತಾರೆ. ಯಾವ ರೂಪದಲ್ಲಾದರೂ ಹಣದ ವ್ಯವಸ್ಥೆ ಮಾಡಿಕೊಂಡು ಮೊದಲೇ ಪಾವತಿಸಿದರೂ, ಕೆಲವೊಮ್ಮೆ ಮೂರು ತಿಂಗಳಾದರೂ ಸೊಸೈಟಿಗಳಿಗೆ ರಸಗೊಬ್ಬರ ಪೂರೈಕೆ ಆಗುವುದಿಲ್ಲ’ ಎನ್ನುತ್ತಾರೆ ಸೊಸೈಟಿಯೊಂದರ ಕಾರ್ಯದರ್ಶಿ ರಾಮಕೃಷ್ಣ. ‘ರೈತರು ಡೀಲರ್‌ಗಳಿಗೆ ಸಾಗಣೆ ವೆಚ್ಚ ನೀಡುವುದಿಲ್ಲ. ಆದರೆ, ಖಾಸಗಿಯವರು ನೀಡುತ್ತಾರೆ. ಹೀಗಾಗಿ ಅವರಿಗೆ ಮೊದಲು ಗೊಬ್ಬರ ನೀಡುತ್ತಾರೆ. ನಾವು ಎಂಆರ್‌ಪಿ ದರದಲ್ಲೇ ಮಾರಾಟ ಮಾಡಬೇಕಾಗಿರುವ ಕಾರಣ ಸಾಗಣೆ ವೆಚ್ಚವನ್ನು ರೈತರಿಗೆ ವರ್ಗಾಯಿಸಲು ಆಗುವುದಿಲ್ಲ. ಆದರೆ, ಖಾಸಗಿಯವರು ರೈತರಿಂದ ಸಾಗಣೆ ವೆಚ್ಚ ಎಂದು ಹೆಚ್ಚುವರಿಯಾಗಿ ₹30 ವಸೂಲಿ ಮಾಡುತ್ತಾರೆ’ ಎನ್ನುತ್ತಾರೆ ಅವರು.

‘ಸರ್ಕಾರ ನಿಗದಿಪಡಿಸಿದ ದರದಲ್ಲೇ ನಾವು ಬಿಲ್‌ ಮಾಡಬೇಕಾಗಿರುವುದರಿಂದ ನಿಗದಿಗಿಂತ ಹೆಚ್ಚಿನ ಹಣವನ್ನು ಡೀಲರ್‌ಗಳಿಗೆ ನೀಡಲು ಸಾಧ್ಯವಿಲ್ಲ. ಆದರೆ, ಖಾಸಗಿಯವರು ಸಗಟು ಡೀಲರ್‌ಗಳ ’ಕೈಬಿಸಿ‘ ಮಾಡುತ್ತಾರೆ. ಹೀಗಾಗಿ ಅವರಿಗೇ ಮೊದಲು ಸರಬರಾಜು ಮಾಡಲಾಗುತ್ತಿದೆ ಎಂದು ದೂರುತ್ತಾರೆ ಕೋಲಾರ ಜಿಲ್ಲೆಯ ಸೊಸೈಟಿಯೊಂದರ ಕಾರ್ಯದರ್ಶಿ ಅನಿಲ್‌ಕುಮಾರ್‌.

ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳದವರು ಗೋದಾಮುಗಳಲ್ಲಿ ರಸಗೊಬ್ಬರ ಸಂಗ್ರಹ ಮಾಡಿ, ಅಲ್ಲಿಂದ ಸೊಟೈಟಿಗಳಿಗೆ ಕಳುಹಿಸಿಕೊಡುವ ವ್ಯವಸ್ಥೆ ಮುಂಚೆ ಇತ್ತು. ಆದರೆ, ಎರಡು ವರ್ಷಗಳಿಂದ ಈ ವ್ಯವಸ್ಥೆ ಬದಲಾಗಿದೆ. ಸೊಸೈಟಿಯವರು ಅಗತ್ಯವಿರುವ ರಸಗೊಬ್ಬರದ ಹಣವನ್ನು ಮೊದಲೇ ಡಿಡಿ ಅಥವಾ ಆರ್‌ಟಿಜಿಎಸ್‌ ಮೂಲಕ ಪಾವತಿಸಿ, ಬೇಡಿಕೆ ಸಲ್ಲಿಸಬೇಕು. ಅದಾದ ಬಳಿಕ ದಾಸ್ತಾನು ನೋಡಿಕೊಂಡು ಸರಬರಾಜು ಮಾಡಲಾಗುತ್ತಿದೆ.

ಪರಿಹಾರ ಏನು?: ‘ಮೊದಲಿನ ಹಾಗೆ ಏಪ್ರಿಲ್‌ ವೇಳೆಗೆ ಗೋದಾಮುಗಳಲ್ಲಿ ಬೇಡಿಕೆಗೆ ತಕ್ಕಂತೆ ದಾಸ್ತಾನು ಮಾಡಬೇಕು. ಸೊಸೈಟಿಯವರು ಮೊದಲೇ ಹಣ ಕೊಟ್ಟು ತರಿಸುವ ವ್ಯವಸ್ಥೆ ರದ್ದಾಗಬೇಕು. ಅಲ್ಲದೆ ಸೊಸೈಟಿಗಳ ಸಂಖ್ಯೆಯನ್ನು ಹೆಚ್ಚಿಸಿ, ಅವುಗಳ ಮೊಲಕವೇ ಗೊಬ್ಬರ ಪೂರೈಸಬೇಕು. ಇದು ಸಾಧ್ಯವಿಲ್ಲ ಎನ್ನುವುದಾದರೆ, ಖಾಸಗಿಯವರ ಮೇಲೆ ನಿಗಾ ವಹಿಸಿ ನಿಗದಿತ ಬೆಲೆಗೆ ಮಾರಾಟ ಮಾಡುವಂತೆ ಕೃಷಿ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಬೇಕು’ ಎನ್ನುತ್ತಾರೆ ಸೊಸೈಟಿಯೊಂದರ ಕಾರ್ಯದರ್ಶಿ ನಾರಾಯಣಸ್ವಾಮಿ

ಕೆಲವು ಸೊಸೈಟಿಗಳಲ್ಲಿ ಆಡಳಿತ ಮಂಡಳಿಯವರು ತಮ್ಮದೇ ಆದ ಸಿಂಡಿಕೇಟ್‌ ಮಾಡಿಕೊಂಡು, ತಮಗೆ ಬೇಕಾದವರಿಗೆ ಮೊದಲು ಗೊಬ್ಬರ ಸಿಗುವಂತೆ ನೋಡಿಕೊಳ್ಳುತ್ತಾರೆ. ಇದನ್ನು ತಪ್ಪಿಸಬೇಕು. ಸೊಸೈಟಿಗಳನ್ನು ಇನ್ನಷ್ಟು ಬಲಪಡಿಸಿ, ಅವುಗಳ ಮೂಲಕವೇ ಸಕಾಲಕ್ಕೆ ರಸಗೊಬ್ಬರ ನೀಡುವ ಕೆಲಸ ಆಗಬೇಕು. ಇದರಿಂದ ಖಾಸಗಿಯವರ ಪ್ರಾಬಲ್ಯ ತಡೆಯಬಹುದು ಎಂಬುದು ಅವರ ಸಲಹೆ.

ರೈತರು ಎದುರಿಸುತ್ತಿರುವ ಮತ್ತೊಂದು ಸಮಸ್ಯೆಯೆಂದರೆ ತಮಗೆ ಬೇಕಾದ ಗೊಬ್ಬರದ ಜೊತೆ ಬೇಡದ ಗೊಬ್ಬರವನ್ನೂ ತೆಗೆದುಕೊಳ್ಳಬೇಕು ಎನ್ನುವ ಡೀಲರ್‌ಗಳು ಸೃಷ್ಟಿಸಿರುವ ಲಿಂಕ್‌ ವ್ಯವಸ್ಥೆ. ಬಹುತೇಕ ಕಡೆ ಲಿಂಕ್‌ ವ್ಯವಸ್ಥೆ ಇದೆ. ಡಿಎಪಿ ಕೇಳಿದರೆ ಅದರೊಂದಿಗೆ ಕಡ್ಡಾಯವಾಗಿ ಯೂರಿಯಾ ತೆಗೆದುಕೊಳ್ಳಬೇಕು ಎನ್ನುತ್ತಾರೆ. ಕೆಲವು ಕಡೆ ಯೂರಿಯಾ ಕೇಳಿದರೆ ಡಿಎಪಿ ತೆಗೆದುಕೊಳ್ಳಿ ಎಂಬ ಉತ್ತರ ಬರುತ್ತದೆ. ಅಲ್ಲದೆ ರಸಗೊಬ್ಬರದ ಜೊತೆ ಬಿತ್ತನೆ ಬೀಜ, ಔಷಧಿಗಳನ್ನು ಖರೀದಿಸಿ ಎನ್ನುತ್ತಾರೆ. ಈ ರೀತಿ ಒಂದಕ್ಕೊಂದು ಲಿಂಕ್‌ ಮಾಡಿರುವುದರಿಂದ ರೈತರಿಗೆ ತೊಂದರೆ ಆಗುತ್ತಿದೆ.

ಒಂದು ಗೊಬ್ಬರ ಖರೀದಿಗೇ ರೈತರ ಬಳಿ ಹಣ ಇರುವುದಿಲ್ಲ. ಮತ್ತೊಂದು ತೆಗೆದುಕೊಳ್ಳಿ ಎಂದರೆ, ಅವರು ಎಲ್ಲಿಂದ ಹಣ ತರುವುದು? ಈ ರೀತಿಯ ಲಿಂಕ್‌ ವ್ಯವಸ್ಥೆಯಿಂದ ರೈತರಿಗೆ ತೊಂದರೆ ಆಗುತ್ತಿದ್ದರೂ, ಇದಕ್ಕೆ ಕಡಿವಾಣ ಹಾಕುವ ಕೆಲಸ ಆಗಿಲ್ಲ. ಮಾರಾಟವಾಗದೇ ಉಳಿದಿರುವ ರಸಗೊಬ್ಬರ ಖಾಲಿಯಾಗಲಿ ಎಂಬ ಉದ್ದೇಶದಿಂದ ಈ ರೀತಿಯ ಲಿಂಕ್‌ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಅಧಿಕಾರಿಗಳು ಈ ವಿಷಯದಲ್ಲಿ ಮೌನವಾಗಿರುವುದು ನೋಡಿದರೆ, ಪರೋಕ್ಷವಾಗಿ ಅವರೂ ಇದಕ್ಕೆ ಕುಮ್ಮಕ್ಕು ನೀಡುತ್ತಿರಬಹುದು ಎಂಬ ಅನುಮಾನ ಬರುತ್ತದೆ.

ಲಿಂಕ್‌ ವ್ಯವಸ್ಥೆ ಮೂಲಕ ರಸಗೊಬ್ಬರ ಮಾರಾಟ ಮಾಡುತ್ತಿರುವುದನ್ನು ಪತ್ತೆಹಚ್ಚಿ ಕ್ರಮಕೈಗೊಂಡಿರುವ ಉದಾಹರಣೆ ಇಲ್ಲ. ಅಂತಹ ಮಳಿಗೆಗಳ ಮೇಲೆ ದಾಳಿ ಮಾಡಿ ಪರವಾನಗಿ ರದ್ದುಪಡಿಸಲು ಅವಕಾಶ ಇದ್ದರೂ, ಆ ಕೆಲಸವನ್ನು ಅಧಿಕಾರಿಗಳು ಮಾಡುತ್ತಿಲ್ಲ ಎನ್ನುತ್ತಾರೆ ರೈತರು.

ದಾಳಿ ಮಾಡಲು ಸೂಚನೆ:

‘ಲಿಂಕ್‌ ವ್ಯವಸ್ಥೆಯಿಂದ ರೈತರಿಗೆ ತೊಂದರೆ ಆಗುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಇದಕ್ಕೆ ಕಡಿವಾಣ ಹಾಕಲು ಅನಿರೀಕ್ಷಿತವಾಗಿ ದಾಳಿ ಮಾಡಿ ಪ್ರಕರಣ ದಾಖಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದಲ್ಲದೆ ಖಾಸಗಿ ಮಳಿಗೆಗಳ ಮಾಲೀಕರಿಗೆ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇವೆ’ ಎನ್ನುತ್ತಾರೆ ಕೃಷಿ ಇಲಾಖೆಯ ಕಾರ್ಯದರ್ಶಿ ಶಿವಯೋಗಿ ಕಳಸದ.

ಸೊಸೈಟಿಗಳ ಆಧುನೀಕರಣ, ಗಣಕೀಕರಣ ಕಾರ್ಯ ನಡೆಯುತ್ತಿದೆ. ಇದಲ್ಲದೆ ಪಾರದರ್ಶಕವಾಗಿ, ವೈಜ್ಞಾನಿಕವಾಗಿ ಮಾರಾಟ ವ್ಯವಸ್ಥೆ ಇರಬೇಕು ಎಂಬ ಉದ್ದೇಶದಿಂದ ಆಧಾರ್‌ಗೆ ಲಿಂಕ್‌ ಮಾಡಿ ರೈತರು ಹೊಂದಿರುವ ಜಮೀನಿಗೆ ಅನುಗುಣವಾಗಿ ಅಗತ್ಯವಿರುವ ಪ್ರಮಾಣದಲ್ಲಿ ರಸಗೊಬ್ಬರ ನೀಡುವ ವ್ಯವಸ್ಥೆ ಪ್ರಾಯೋಗಿಕವಾಗಿ ಸದ್ಯದಲ್ಲೇ ಆರಂಭವಾಗಲಿದೆ. ಸೊಸೈಟಿಗಳು ದುರ್ಬಲವಾಗಿರುವ ಕಡೆ ಸಮಸ್ಯೆಗಳು ಇರುವುದು ನಿಜ. ಹೀಗಾಗಿ ಅವುಗಳಿಗೆ ಸಾಲ ಪಡೆಯಲು ಅನುಕೂಲವಾಗುವಂತೆ ಸರ್ಕಾರವೇ ಖಾತರಿ ನೀಡುವುದು, ಸಹಾಯಧನ ನೀಡುವುದು ಮೊದಲಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎನ್ನುತ್ತಾರೆ ಅವರು.

ಒಟ್ಟಾರೆ ರಸಗೊಬ್ಬರ ವಿತರಿಸುವಲ್ಲಿ ಸಹಕಾರ ಸಂಘಗಳ ವಿಫಲತೆ, ಲಿಂಕ್‌ ವ್ಯವಸ್ಥೆ ಮೇಲೆ ಕಡಿವಾಣ ಬೀಳದಿರುವುದು, ಕಾಳಸಂತೆಯಲ್ಲಿ ಗೊಬ್ಬರದ ಮಾರಾಟವು ಕೃಷಿ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದೆ.

ಇನ್ನೂ ಜಾರಿಯಾಗದ ನೇರ ಸಬ್ಸಿಡಿ ಯೋಜನೆ

ರಸಗೊಬ್ಬರ ಖರೀದಿಸುವ ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಸಬ್ಸಿಡಿ ಜಮಾ ಮಾಡುವ ಯೋಜನೆಗೆ 2018ರ ಜನವರಿ 1ರಂದು ಚಾಲನೆ ನೀಡಲಾಗಿತ್ತು. ಆದರೆ, ಇದುವರೆಗೂ ಇದು ಅನುಷ್ಠಾನಕ್ಕೆ ಬಂದಿಲ್ಲ.

ರೈತರು ಖರೀದಿಸುವ ರಸಗೊಬ್ಬರಕ್ಕೆ ಅನುಗುಣವಾಗಿ ಕಂಪನಿಗಳಿಗೆ ನೇರವಾಗಿ ಸಬ್ಸಿಡಿ ನೀಡುವ ವ್ಯವಸ್ಥೆ ಸದ್ಯ ಜಾರಿಯಲ್ಲಿದೆ. ರೈತರ ಬ್ಯಾಂಕ್‌ ಖಾತೆಗೆ ನೇರವಾಗಿ ಸಬ್ಸಿಡಿ ನೀಡುವ ವ್ಯವಸ್ಥೆ ಜಾರಿಯಾದರೆ, ಜಮೀನಿನ ಖಾತಾ ಕೇಳುತ್ತಾರೆ. ಹಲವರ ಬಳಿ ಖಾತಾ ಇಲ್ಲ. ಅಲ್ಲದೆ ಸ್ವಂತ ಜಮೀನು ಇಲ್ಲದವರು ಜಮೀನು ಗುತ್ತಿಗೆ ಪಡೆದು ಕೃಷಿ ಮಾಡುತ್ತಾರೆ. ಖಾತಾ ಕಡ್ಡಾಯ ಮಾಡಿದರೆ ಅಂತಹ ರೈತರಿಗೆ ರಸಗೊಬ್ಬರವೇ ಸಿಗುವುದಿಲ್ಲ. ಖಾತಾ ಇಲ್ಲ ಎಂದಾಗ ವಾಮಮಾರ್ಗದ ಮೂಲಕ ಅಧಿಕ ಹಣಕ್ಕೆ ಮಾರಾಟ ಮಾಡುವ ಸಾಧ್ಯತೆ ಇರುವುದರಿಂದ ಇದು ಭ್ರಷ್ಟಾಚಾರಕ್ಕೆ ಆಸ್ಪದವಾಗಬಹುದು ಎಂಬ ಆತಂಕವಿದೆ. ಅಡುಗೆ ಅನಿಲ ಸಿಲಿಂಡರ್‌ಗಳನ್ನು ಮೊದಲು ಸಬ್ಸಿಡಿ ದರದಲ್ಲಿ ನೀಡಲಾಗುತ್ತಿತ್ತು. ಬಳಿಕ ಗ್ರಾಹಕರ ಬ್ಯಾಂಕ್‌ ಖಾತೆಗೆ ಸಬ್ಸಿಡಿ ಹಣ ವರ್ಗಾಯಿಸಲು ಶುರು ಮಾಡಿದರು. ಇದಾದ ಕೆಲವೇ ವರ್ಷಗಳಲ್ಲಿ ಸಬ್ಸಿಡಿ ನಿಲ್ಲಿಸಿದರು. ರಸಗೊಬ್ಬರಕ್ಕೆ ನೀಡುವ ಸಬ್ಸಿಡಿಗೂ ಆ ಸ್ಥಿತಿ ಬರಬಾರದು. ಹಾಗಾಗಿ ಈಗಿರುವ ಪದ್ಧತಿಯನ್ನೇ ಮುಂದುವರಿಸಬೇಕು ಎಂಬ ಆಗ್ರಹ ಕೇಳಿಬರುತ್ತಿದೆ.

ರಸಗೊಬ್ಬರದ ಗರಿಷ್ಠ ಮಾರಾಟ ಮತ್ತು ಸಹಾಯಧನ

ರಸಗೊಬ್ಬರದ ಹೆಸರು ಮಾರಾಟ ಬೆಲೆ (50ಕೆ.ಜಿ.ಚೀಲಕ್ಕೆ) ಸಹಾಯಧನ ಒಟ್ಟು ಮೊತ್ತ

ಡಿಎಪಿ 1350 2422 3772

ಎಂಓಪಿ 1700 709 2409

ಎಸ್‌ಎಸ್‌ಪಿ 450 376 826

ಎನ್‌ಪಿಎಸ್‌ 20:20:0:13 1490 1689 3179

ಎನ್‌ಪಿಕೆ 10:26:26 1470 1668 3138

ಎನ್‌ಪಿಕೆ 15:15:15 1500 1415 2915

ಎನ್‌ಪಿಎಸ್‌ 16:20:0:13 1400 1493 2893

ಎನ್‌ಪಿಕೆ 12:32:16 1470 1848 3318

ಯೂರಿಯಾ (45 ಕೆ.ಜಿ*) 266 2029 2295

(* ಜಿಎಸ್‌ಟಿ ಸೇರಿ)

2022ರಲ್ಲಿ ಆಗಿರುವ ಬಿತ್ತನೆ ಮಾಹಿತಿ(ಲಕ್ಷ ಹೆಕ್ಟೇರ್‌ಗಳಲ್ಲಿ)

ಹಂಗಾಮು ಗುರಿ ಸಾಧನೆ

ಮುಂಗಾರು 83.67 80.40

ಹಿಂಗಾರು 26.68 25.67

ಬೇಸಿಗೆ 05.20 –

ಒಟ್ಟು 114.54 106.07

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT