ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಆರ್‌ಟಿಸಿಯಿಂದ 50 ಹಾಸಿಗೆಗಳ ಕೋವಿಡ್ ಆಸ್ಪತ್ರೆ

₹99 ಲಕ್ಷ ವೆಚ್ಚದಲ್ಲಿ ಆಸ್ಪತ್ರೆ ನವೀಕರಣ; ಸೆ.12ರಂದು ಉದ್ಘಾಟನೆ
Last Updated 9 ಸೆಪ್ಟೆಂಬರ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಜಯನಗರದಲ್ಲಿನ ಕೆಎಸ್‌ಆರ್‌ಟಿಸಿ ಆಸ್ಪತ್ರೆ ಈಗ ಸುಸಜ್ಜಿತ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟಿದೆ. ₹ 99 ಲಕ್ಷ ವೆಚ್ಚದಲ್ಲಿ ಆಸ್ಪತ್ರೆಯನ್ನು ನವೀಕರಿಸಿರುವ ಕೆಎಸ್‌ಆರ್‌ಟಿಸಿ, ಸಂಭಾವ್ಯ ಕೋವಿಡ್‌ ಮೂರನೇ ಅಲೆ ಎದುರಿಸಲು ಸಿದ್ಧವಾಗಿದೆ.

ನವೀಕರಣಗೊಂಡಿರುವ ಈ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರಣ ವ್ಯವಸ್ಥೆ ಇರುವ 50 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಲಾಗಿದೆ. ಇದೇ 12ರಂದು (ಭಾನುವಾರ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಆಸ್ಪತ್ರೆಯನ್ನು ಲೋಕಾರ್ಪಣೆ ಮಾಡಲಿದ್ದಾರೆ.

ಆಮ್ಲಜನಕ ಪುರೈಕೆಗೆ ಹೈ–ನೇಸಲ್ ಫ್ಲೋ ವ್ಯವಸ್ಥೆ, ಆಮ್ಲಜನಕ ಘಟಕವನ್ನೂ ಈ ಆಸ್ಪತ್ರೆ ಒಳಗೊಂಡಿದೆ. ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯ ಇರುವ ಎಲ್ಲಾ ರೀತಿಯ ಯಂತ್ರೋಪಕರಣಗಳನ್ನೂ ಅಳವಡಿಸಲಾಗಿದೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ವಿವರಿಸಿದರು.

ಸೋಂಕಿತರ ದೇಹಸ್ಥಿತಿ ಗಂಭೀರ ಹಂತವನ್ನು ತಲುಪಿದರೆ, ಅವರಿಗೆ ಉನ್ನತ ಚಿಕಿತ್ಸೆ ಕೊಡಿಸಲು ಪಕ್ಕದಲ್ಲೇ ಇರುವ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರ ಮಾಡಬಹುದು ಎಂದು ಅವರು ಹೇಳಿದರು.

‘ಮೂರನೇ ಅಲೆ ಕಾಣಿಸಿಕೊಂಡರೆ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಆದ್ದರಿಂದ ಮಕ್ಕಳ ಚಿಕಿತ್ಸೆಗೂ ಈ ಆಸ್ಪತ್ರೆಯಲ್ಲಿ ವಿಶೇಷ ವ್ಯವಸ್ಥೆ ಕಲ್ಪಿಸಿದ್ದೇವೆ. ಸಾರಿಗೆ ಸಂಸ್ಥೆ ನೌಕರರ ಕೋವಿಡ್‌ ಚಿಕಿತ್ಸೆಗೆ ಆದ್ಯತೆ ನೀಡಲಿದ್ದೇವೆ. ನಗರದ ನಾಗರಿಕರೂ ಇದರ ಪ್ರಯೋಜನ ಪಡೆಯಬಹುದು’ ಎಂದು ತಿಳಿಸಿದರು.

‘ಆಸ್ಪತ್ರೆ ನವೀಕರಣಕ್ಕೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ಸಂಸದರ ನಿಧಿಯಿಂದ ₹35 ಲಕ್ಷ ಅನುದಾನ ಒದಗಿಸಿದ್ದಾರೆ. ಕರ್ನಾಟಕ ರಾಜ್ಯ ವಿಪತ್ತು ಪರಿಹಾರ ನಿಧಿ, ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕಾ ನಿಧಿಯಿಂದಲೂ ನೆರವು ಪಡೆಯಲಾಗಿದೆ. ಅಗತ್ಯ ಇರುವ ಯಂತ್ರೋಪಕರಣಗಳನ್ನು ಈ ಹಣದಲ್ಲಿ ಖರೀದಿಸಲಾಗಿದೆ’ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT