ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಸರಕ್ಕೆ ಹಾನಿ: ಅದಾನಿ ಕಂಪನಿಗೆ ₹50 ಕೋಟಿ ದಂಡ

Last Updated 1 ಜೂನ್ 2022, 20:11 IST
ಅಕ್ಷರ ಗಾತ್ರ

ಬೆಂಗಳೂರು: ಉಡುಪಿ ಸಮೀಪದ ನಂದಿಕೂರಿನಲ್ಲಿರುವ ಅದಾನಿ ಒಡೆತನದ ಯುಪಿಸಿಎಲ್‌ ಶಾಖೋತ್ಪನ್ನ ಘಟಕವು ಪರಿಸರ ಮತ್ತು ಸುತ್ತಮುತ್ತಲಿನ ಗ್ರಾಮಗಳ ಜನರ ಆರೋಗ್ಯಕ್ಕೂ ಹಾನಿ ಉಂಟು ಮಾಡಿರುವುದರಿಂದ ₹50.02 ಕೋಟಿ ಪರಿಹಾರ ನೀಡಬೇಕು ಎಂದು ದಕ್ಷಿಣ ವಲಯದ ರಾಷ್ಟ್ರೀಯ ಹಸಿರು ಪೀಠ (ಎನ್‌ಜಿಟಿ) ಆದೇಶ ನೀಡಿದೆ.

ಅಲ್ಲದೆ, ಮಾಲಿನ್ಯ ಉಸ್ತುವಾರಿ ವ್ಯವಸ್ಥೆಯನ್ನು ತಿದ್ದಿರುವುದರಿಂದ ಕಂಪನಿ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದೂ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿ ಕೆ.ರಾಮಕೃಷ್ಣನ್ ಮತ್ತು ಇಬ್ಬರು ತಜ್ಞರನ್ನು ಒಳಗೊಂಡಿದ್ದ ದಕ್ಷಿಣ ವಲಯ ಹಸಿರು ಪೀಠವು ಜನಜಾಗೃತಿ ಸಮಿತಿ ಸಲ್ಲಿಸಿದ್ದ ಅರ್ಜಿಯನ್ನು ಮೇ 31 ರಂದು ವಿಲೇವಾರಿ ಮಾಡಿತು.

ಪರಿಹಾರದ ಶೇ 50 ರಷ್ಟು ಮೊತ್ತವನ್ನು ಪರಿಸರ ಮೂಲಸೌಕರ್ಯ ಸುಧಾರಣೆಗೆ ಬಳಸಬೇಕು. ಮುಖ್ಯವಾಗಿ ನೀರು ಪೂರೈಕೆ, ಚರಂಡಿ, ಎಸ್‌ಟಿಪಿ, ಘನತ್ಯಾಜ್ಯ ವಿಲೇವಾರಿ ನಿರ್ವಹಣೆ, ಆರೋಗ್ಯ ಸೌಲಭ್ಯ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬಳಸಬೇಕು. ಮಧ್ಯಂತರ ಆದೇಶದ ಅನ್ವಯ ಯುಪಿಸಿಎಲ್‌ ಈಗಾಗಲೇ ₹5 ಕೋಟಿ ಠೇವಣಿ ಇರಿಸಿದೆ. ಉಳಿದ ಮೊತ್ತವನ್ನು ಮುಂದಿನ ಮೂರು ತಿಂಗಳಲ್ಲಿ ಪಾವತಿಸಬೇಕು ಎಂದು ಹಸಿರು ಪೀಠ ಸೂಚಿಸಿದೆ. ಉಷ್ಣ ವಿದ್ಯುತ್ ಸ್ಥಾವರದ 10 ಕಿ.ಮೀ ವ್ಯಾಪ್ತಿಯ ಕೃಷಿ ಭೂಮಿಯಲ್ಲಿ ಯುಪಿಸಿಎಲ್‌ ಚಟುವಟಿಕೆಯಿಂದ ಆಗಿರುವ ಹಾನಿಯ ಬಗ್ಗೆ ವಿಸ್ತೃತ ಅಧ್ಯಯನ ನಡೆಸಲು ನ್ಯಾಯಪೀಠ ಜಂಟಿ ಸಮಿತಿಯನ್ನೂ ನೇಮಿಸಿದೆ. ಅದರಲ್ಲಿ ಜಿಲ್ಲಾಧಿಕಾರಿ, ಕೃಷಿ ಮತ್ತು ತೋಟಗಾರಿಕೆ ಇಲಾಖೆ ನಿರ್ದೇಶಕರು ಹಾಗೂ ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ
ವಿಜ್ಞಾನಿಯೊಬ್ಬರು ಇರಲಿದ್ದಾರೆ.

ಮಾಲಿನ್ಯ ಉಸ್ತುವಾರಿ ವ್ಯವಸ್ಥೆಯನ್ನು ತಿದ್ದಿರುವುದರಿಂದ ರಾಜ್ಯ ಮತ್ತು ಕೇಂದ್ರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಗಳು ಯುಪಿಸಿಎಲ್‌ಗೆ ಹೆಚ್ಚುವರಿ ದಂಡ ವಿಧಿಸಬೇಕು ಅಥವಾ ಕಾನೂನು ಕ್ರಮ ಜರುಗಿಸಬೇಕು. ಕಡಲ ಪರಿಸರವನ್ನು ರಕ್ಷಿಸಲು ದ್ರವರೂಪದ ತ್ಯಾಜ್ಯವನ್ನು ಹೊರ ಬಿಡದಂತೆ ಯುಪಿಸಿಎಲ್‌ಗೆ ಸೂಚಿಸುವಂತೆ ಎರಡೂ ಮಂಡಳಿಗೆ ಹಸಿರು ಪೀಠ ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT