ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿ ಅಂತರ್ಯುದ್ಧ: ಬಿ.ಎಲ್‌. ಸಂತೋಷ್‌ ನಿಷ್ಠರ ಸಮರ

ಬಿ.ಎಲ್‌. ಸಂತೋಷ್‌ ನಿಷ್ಠರ ಸಮರ
Last Updated 5 ಮೇ 2021, 21:30 IST
ಅಕ್ಷರ ಗಾತ್ರ

ಬೆಂಗಳೂರು: ಕೋವಿಡ್‌ ಎರಡನೇ ಅಲೆ ಸಮಯದಲ್ಲೇ ಬಿಜೆಪಿಯಲ್ಲಿ ಅಂತರ್ಯುದ್ಧ ಆರಂಭವಾಗಿದ್ದು, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆಡಳಿತದ ವಿರುದ್ಧ ಸ್ವಪಕ್ಷೀಯರೇ ಕಿಡಿ ಕಾರಲಾರಂಭಿಸಿದ್ದಾರೆ.

ಚಾಮರಾಜನಗರದ ದುರ್ಘಟನೆ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ’ದುರಂತಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ. ತಪ್ಪಿತಸ್ಥರಾದರೆ ಆರೋಗ್ಯ ಸಚಿವರ ವಿರುದ್ಧವೇ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ’ ಎಂದು ಹೇಳಿದ್ದರು.

ಮತ್ತೊಂದೆಡೆ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಬಿಬಿಎಂಪಿ ವ್ಯಾಪ್ತಿಯಲ್ಲಿ ನಡೆದಿರುವ ದುಡ್ಡಿಗಾಗಿ ಹಾಸಿಗೆ ಕಾಯ್ದಿರಿಸುವ ಹಗರಣವನ್ನು ಬಯಲಿಗೆಳೆದು ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸಿದ್ದಾರೆ. ಈ ಮೂಲಕ ಆಡಳಿತ ಎಷ್ಟು ಹದಗೆಟ್ಟಿದೆ ಎಂಬುದನ್ನು ಬಯಲಿಗೆಳೆದಿದ್ದಾರೆ.

ಯಡಿಯೂರಪ್ಪ ರಕ್ಷಣೆಗೆ ಧಾವಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌, ‘ದುಡ್ದಿಗಾಗಿ ಹಾಸಿಗೆ ಹಗರಣಕ್ಕೆ ಸರ್ಕಾರವನ್ನು ಹೊಣೆ ಮಾಡಲು ಸಾಧ್ಯವಿಲ್ಲ. ಬಿಬಿಎಂಪಿ ಕಾರ್ಯದಲ್ಲಿ ರಾಜಕೀಯ ಹಸ್ತಕ್ಷೇಪ ಆಗಿಲ್ಲ. ಯಾವುದೇ ಹಗರಣ ನಡೆಯದಂತೆ ನೋಡಿಕೊಳ್ಳುವ ಜವಾಬ್ದಾರಿ ಅಧಿಕಾರಿಗಳದ್ದು. ಯಡಿಯೂರಪ್ಪ ಅವರನ್ನು ಅಭದ್ರಗೊಳಿಸುವ ಉದ್ದೇಶ
ದಿಂದ ಹಗರಣ ಬಯಲಿಗೆಳೆಯಲಾಗಿದೆ ಎಂಬುದರಲ್ಲಿ ಸತ್ಯಾಂಶವಿಲ್ಲ’ ಎಂದರು.

‘ಆಡಳಿತವನ್ನು ಟೀಕಿಸುತ್ತಿರುವವರೆಲ್ಲ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್‌.ಸಂತೋಷ್‌ ಅವರಿಗೆ ನಿಷ್ಠರಾದವರು. ಇವರೇ ಆಡಳಿತದ ವಿರುದ್ಧ ಧ್ವನಿ ಎತ್ತುತ್ತಿರುವ ಕಾರಣ ಯಡಿಯೂರಪ್ಪ ಅವರನ್ನು ಅಭದ್ರಗೊಳಿಸುವ ಪ್ರಯತ್ನವೂ ಸದ್ದಿಲ್ಲದೇ ನಡೆದಿದೆ’ ಎಂಬ ಚರ್ಚೆ ನಡೆದಿದೆ.

ಬೆಂಗಳೂರು ಅಭಿವೃದ್ಧಿ ಖಾತೆ ಯಡಿಯೂರಪ್ಪ ಬಳಿ ಇದೆ. ಸಿ.ಟಿ.ರವಿ ವಾಗ್ದಾಳಿ ಮತ್ತು ತೇಜಸ್ವಿ ಸೂರ್ಯ ಅವರ ದಿಢೀರ್‌ ದಾಳಿಯು ಮುಖ್ಯಮಂತ್ರಿಯವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಕೋವಿಡ್‌ ಮೊದಲ ಅಲೆಯ ಸಂದರ್ಭದಲ್ಲೂ ಯಡಿಯೂರಪ್ಪ ಆಡಳಿತದ ಬಗ್ಗೆ ಪಕ್ಷದ ಒಂದು ವರ್ಗದಿಂದ ಟೀಕೆ ವ್ಯಕ್ತವಾಗಿತ್ತು ಎಂದು ಪಕ್ಷದ ಮೂಲಗಳು ತಿಳಿಸಿವೆ.

‘ತೇಜಸ್ವಿ ಸೂರ್ಯ ಮತ್ತು ಬಿಜೆಪಿಯ ಇತರ ಶಾಸಕರು ಹಗರಣವನ್ನು ಬಯಲಿಗೆಳೆಯುವ ಮೂಲಕ ವಿರೋಧ ಪಕ್ಷ ಮಾಡಬೇಕಾದ ಕೆಲಸ ಮಾಡಿದ್ದಾರೆ. ಇದು ಸರ್ಕಾರಕ್ಕೆ ಮುಜುಗರ ಉಂಟು ಮಾಡಿದ್ದರೂ ಇದರ ಹಿಂದೆ ಗುಪ್ತಕಾರ್ಯಸೂಚಿಗಳಿವೆ ಎಂದು ಹೇಳುವುದು ಸರಿಯಲ್ಲ. ವ್ಯವಸ್ಥೆ ಹೇಗಿದೆ ಎಂಬುದನ್ನು ಬಯಲಿಗೆಳೆದಿದ್ದಾರೆ’ ಎಂದು ರಾಜಕೀಯ ವಿಶ್ಲೇಷಕ ಚಂಬಿ ಪುರಾಣಿಕ್‌ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT