ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಂಚನೆ ಪ್ರಕರಣ: ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ ಮನವಿ ತಿರಸ್ಕರಿಸಿದ ಹೈಕೋರ್ಟ್‌

₹ 3.53 ಕೋಟಿ ವಂಚನೆ, ಸಿಬಿಐ ಪ್ರಕರಣ
Last Updated 31 ಮಾರ್ಚ್ 2023, 15:25 IST
ಅಕ್ಷರ ಗಾತ್ರ

ಬೆಂಗಳೂರು: ‘₹ 3.25 ಕೋಟಿ ಬ್ಯಾಂಕ್‌ ಸಾಲದ ವಂಚನೆ ಪ್ರಕರಣದ ದೋಷಾರೋಪಣಾ ಪಟ್ಟಿಯಿಂದ ನನ್ನನ್ನು ಕೈಬಿಡಬೇಕು’ ಎಂಬ ಮಾಲೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಮಾಜಿ ಸಚಿವ ಎಸ್‌.ಎನ್‌.ಕೃಷ್ಣಯ್ಯ ಶೆಟ್ಟಿ ಸಲ್ಲಿಸಿದ್ದ ಮನವಿಯನ್ನು ಹೈಕೋರ್ಟ್‌ ತಿರಸ್ಕರಿಸಿದೆ.

ಈ ಕುರಿತಂತೆ ಎಸ್.ಎನ್‌.ಕೃಷ್ಣಯ್ಯ ಶೆಟ್ಟಿ ಸಲ್ಲಿಸಿದ್ದ ಕ್ರಿಮಿನಲ್‌ ಪುನರ್ ಪುನರಾವಲೋಕನಾ ಅರ್ಜಿಯ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ನ್ಯಾಯಮೂರ್ತಿ ರಾಮಚಂದ್ರ ಡಿ.ಹುದ್ದಾರ ಅವರು ಕಲಬುರಗಿ ಪೀಠದಿಂದ ಶುಕ್ರವಾರ ವಿಡಿಯೊ ಕಾನ್ಫರೆನ್ಸ್‌ ಮೂಲಕ ಪ್ರಕಟಿಸಿದರು.

‘ಮೆಸರ್ಸ್‌ ಬಾಲಾಜಿ ಕೃಪ ಎಂಟರ್‌ಪ್ರೈಸಸ್‌ ಮಾಲೀಕತ್ವ ಹೊಂದಿದ್ದ ಕೃಷ್ಣಯ್ಯ ಶೆಟ್ಟಿ ನಾಲ್ಕು ವರ್ಷಗಳ ಅವಧಿಯಲ್ಲಿ ಲೇ ಔಟ್‌ ನಿರ್ಮಾಣಕ್ಕಾಗಿ ಬ್ಯಾಂಕ್‌ನಿಂದ ಪಡೆದಿದ್ದ ಸಾಲ ₹ 7.17 ಕೋಟಿಗೂ ಹೆಚ್ಚಿದ್ದು, ಇದರಲ್ಲಿ ಅವರು ₹ 3.25 ಕೋಟಿ ಸಾಲವನ್ನು ಇನ್ನೂ ತೀರಿಸಿಲ್ಲ’ ಎಂದು ಸಿಬಿಐ ಈ ಪ್ರಕರಣ ದಾಖಲಿಸಿತ್ತು. ಹೈಕೋರ್ಟ್‌ನ ಈ ತೀರ್ಪಿನಿಂದಾಗಿ, ಕೃಷ್ಣಯ್ಯ ಶೆಟ್ಟಿ ಸಿಬಿಐ ವಿಚಾರಣಾ ನ್ಯಾಯಾಲಯದಲ್ಲಿ ಖುದ್ದು ಹಾಜರಾಗಿ ವಿಚಾರಣೆ ಎದುರಿಸಬೇಕಾಗಿದೆ.

ಪ್ರಕರಣವೇನು?: ‘ಬೆಂಗಳೂರು ಉತ್ತರ ತಾಲ್ಲೂಕಿನ ನಾಗವಾರ ಗ್ರಾಮದ ಸರ್ವೇ ನಂಬರ್‌ 98ರಲ್ಲಿ 3 ಎಕರೆಗೂ ಹೆಚ್ಚಿನ ಜಾಗದಲ್ಲಿ ಲೇ ಔಟ್‌ ನಿರ್ಮಾಣಕ್ಕಾಗಿ ಸಾಲ ಪಡೆಯಲಾಗಿತ್ತು. ಈ ಪ್ರದೇಶದಲ್ಲಿ ಗೃಹ ನಿರ್ಮಾಣ ಯೋಜನೆಗೆ ಕೃಷ್ಣಯ್ಯ ಶೆಟ್ಟಿ ಬಾಲಾಜಿ ಎಂಟರ್‌ಪ್ರೈಸಸ್‌ ಹೆಸರಿನಲ್ಲಿ 2003ರಿಂದ 2008ರವರೆಗೆ ಚಾಲ್ತಿ ಖಾತೆಯಲ್ಲಿ ಎಸ್‌ಬಿಎಂನಿಂದ ಸಾಲ ಪಡೆದಿದ್ದಾರೆ. ಇದಕ್ಕಾಗಿ ಅವರು ಖೊಟ್ಟಿ ದಾಖಲೆ ಸೃಷ್ಟಿಸಿದ್ದಾರೆ‘ ಎಂದು ಸಿಬಿಐ ಆರೋಪಿಸಿತ್ತು.

‘ಲೇ ಔಟ್‌ ನಿರ್ಮಾಣಕ್ಕೆ ಇವರು ಬಯಾಪದಿಂದ (ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ) ಯೋಜನಾ ಮಂಜೂರಾತಿ ಪಡೆದಿಲ್ಲ. ಬೆಸ್ಕಾಂ ಮತ್ತು ಬೆಂಗಳೂರು ಜಲಮಂಡಳಿಯಿಂದ ನಿರಾಕ್ಷೇಪಣಾ ಪತ್ರವನ್ನೂ ಪಡೆದಿಲ್ಲ. ಅಂತೆಯೇ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅಭಿವೃದ್ಧಿ ಶುಲ್ಕವನ್ನೂ ಪಾವತಿ ಮಾಡಿರುವುದಿಲ್ಲ’ ಎಂದು ಸಿಬಿಐ ಬಲವಾಗಿ ಆಕ್ಷೇಪಿಸಿತ್ತು. ಸಿಬಿಐ ಪರ ಪಿ.ಪ್ರಸನ್ನಕುಮಾರ್ ವಾದ ಮಂಡಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT