ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾತೆ ಬದಲಾವಣೆ ಪ್ರಕ್ರಿಯೆ: ತಿಂಗಳೊಳಗೆ ಪೂರ್ಣಗೊಳಿಸಲು ಹೈಕೋರ್ಟ್ ನಿರ್ದೇಶನ

ರಾಜ್ಯ ನೀರಾವರಿ ನಿಗಮ
Last Updated 30 ಜೂನ್ 2021, 15:40 IST
ಅಕ್ಷರ ಗಾತ್ರ

ಧಾರವಾಡ: ರಾಜ್ಯ ನೀರಾವರಿ ನಿಗಮಕ್ಕಾಗಿ ಸ್ವಾಧೀನಪಡಿಸಿಕೊಂಡ ಭೂಮಿಯ ಬಾಕಿ ಇರುವ ಖಾತೆ ಬದಲಾವಣೆ ಪ್ರಕ್ರಿಯೆಯನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ಇಲ್ಲಿನ ಹೈಕೋರ್ಟ್ ನಿರ್ದೇಶನ ನೀಡಿದೆ.

ನಿಗಮಕ್ಕೆ ಸ್ವಾಧೀನಪಡಿಸಿಕೊಂಡ ಒಟ್ಟು ಜಮೀನು, ರೈತರು ಹೆಸರು ಕಡಿಮೆಗೊಳಿಸಿ ಖಾತೆ ಬದಲಾವಣೆಯಾದ ಪ್ರಮಾಣ ಕುರಿತು ನೀರಾವರಿ ನಿಗಮದ ಸಿಎಒ, ಐದು ವಲಯಗಳ ಮುಖ್ಯ ಎಂಜನೀಯರ್‌ಗಳು ಬುಧವಾರ ನ್ಯಾಯಪೀಠದ ಎದುರು ಖುದ್ದು ಹಾಜರಾಗಿ ವಿವರ ನೀಡಿದರು.

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಡ್ಯಾಂ ನಿರ್ಮಾಣಕ್ಕೆ 2008ರಲ್ಲಿ ಸ್ವಾಧೀನಪಡಿಸಿಕೊಂಡ ಜಮೀನಿಗೆ ಸಂಬಂಧಿಸಿದಂತೆ ರಾಜ್ಯ ನೀರಾವರಿ ನಿಗಮ ಸಲ್ಲಿಸಿದ್ದ ಮೇಲ್ಮನವಿಯ ಮುಂದುವರಿದ ವಿಚಾರಣೆಯಲ್ಲಿ ನ್ಯಾಯಮೂರ್ತಿ ಕೃಷ್ಣ ದಿಕ್ಷೀತ್ ಮತ್ತು ಪ್ರದೀಪಸಿಂಗ್ ಯರೂರ ಅವರಿದ್ದ ವಿಭಾಗೀಯ ಪೀಠ, ‘ಸಾರ್ವಜನಿಕ ಸ್ವತ್ತಿನ ರಕ್ಷಣೆ ಮಾಡುವುದು ನ್ಯಾಯಾಲಯಗಳ ಜವಾಬ್ದಾರಿ. ನೀರಾವರಿ ನಿಗಮಕ್ಕಾಗಿ ಸಾವಿರಾರು ಎಕರೆ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಅದಕ್ಕಾಗಿ ಪರಿಹಾರವೂ ನೀಡಲಾಗಿದೆ. ಇಷ್ಟು ವರ್ಷಗಳಾದರೂ ಮೂಲ ಮಾಲೀಕರ ಹೆಸರು ಕಡಿಮೆ ಮಾಡಿ, ನಿಮಗದ ಹೆಸರು ದಾಖಲಿಸದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದ್ದು, ಇದೊಂದು ಗಂಭೀರ ಪ್ರಕರಣ’ ಎಂದು ಅಭಿಪ್ರಾಯಪಟ್ಟಿತು.

ಒಟ್ಟು ಸ್ವಾಧೀಪಡಿಸಿಕೊಂಡ ಜಮೀನು, ನೀಡಲಾದ ಪರಿಹಾರದ ಮೊತ್ತ, ಸ್ವಾಧೀನ ಪಡೆದ ಜಾಗದ ಪ್ರಮಾಣ, ಅತಿಕ್ರಮಣವಾಗಿದ್ದರೆ ಅದನ್ನು ತೆರವುಗೊಳಿಸಲು ಕೈಗೊಂಡ ಕ್ರಮಗಳ ಕುರಿತು ದತ್ತಾಂಶವನ್ನು ಡಿಜಿಟಲ್ ರೂಪದಲ್ಲಿ ರಿಜಿಸ್ಟ್ರಾರ್ ಜನರಲ್ ಕಚೇರಿಗೆ ಮುಂದಿನ ವಿಚಾರಣೆ ಸಂದರ್ಭದಲ್ಲಿ ಸಲ್ಲಿಸಬೇಕು ಎಂದು ನಿಗಮದ ಸಿಎಒ ಅವರಿಗೆ ಸೂಚನೆ ನೀಡಿತು.

ಈ ಪ್ರಕ್ರಿಯೆಗೆ ಅಗತ್ಯವಿರುವ ಕಂಪ್ಯೂಟರ್, ತಂತ್ರಜ್ಞರು ಮತ್ತು ಇತರ ಸೌಲಭ್ಯಗಳನ್ನು ನಿಮಗದ ಆಡಳಿತಾಧಿಕಾರಿ ಒದಗಿಸಬೇಕು. ಕಂದಾಯ ಇಲಾಖೆ ಅಧಿಕಾರಿಗಳ ಸಮನ್ವಯದೊಂದಿಗೆ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಇದಕ್ಕಾಗಿ ಹಿರಿಯ ಅಧಿಕಾರಿಗಳ ಅನುಮತಿ ಅಥವಾ ಟೆಂಡರ್ ಪ್ರಕ್ರಿಯೆ ನಡೆಸುವ ಅಗತ್ಯವಿಲ್ಲ. ಸಿಎಒ ಇವುಗಳನ್ನು ನೇರವಾಗಿ ಖರೀದಿಸಿ ಒದಗಿಸಲು ನ್ಯಾಯಪೀಠ ಅನುಮತಿ ನೀಡಿತು. ಈ ಆದೇಶದ ಪ್ರತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಕಳುಹಿಸುವಂತೆ ನ್ಯಾಯಪೀಠ ಸೂಚನೆ ನೀಡಿ, ವಿಚಾರಣೆಯನ್ನು ಆಗಸ್ಟ್ 13ಕ್ಕೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT