ಶನಿವಾರ, ಏಪ್ರಿಲ್ 1, 2023
23 °C
₹ 2.81 ಕೋಟಿ ಮೌಲ್ಯದ ಅಕ್ಕಿ, ವಾಹನ ವಶ

ಕಾಳಸಂತೆಗೆ ಪಡಿತರ ಅಕ್ಕಿ: 17 ಮಂದಿ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪಡಿತರ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ, ಪಾಲಿಶ್‌ ಮಾಡಿ ವಿವಿಧ ಬ್ರ್ಯಾಂಡುಗಳಲ್ಲಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಗಾರಪೇಟೆ–ಕೆ.ಜಿ.ಎಫ್‌ ರಸ್ತೆಯ ದಾಸರಹೊಸಹಳ್ಳಿ ಬಳಿ ಇರುವ ಪಿಆರ್‌ಎಸ್‌ ಆಗ್ರೋಟೆಕ್‌ ಅಕ್ಕಿ ಗಿರಣಿ ಮಾಲೀಕ ಸೇರಿ 17 ಮಂದಿಯ ವಿರುದ್ಧ ಬಂಗಾರಪೇಟೆ ಪೊಲೀಸ್‌ ಠಾಣೆಯಲ್ಲಿ ಆಹಾರ ಇಲಾಖೆಯ ರಾಜ್ಯ ಮಟ್ಟದ ತನಿಖಾ ದಳದ ಮುಖ್ಯಸ್ಥರೂ ಆಗಿರುವ ಜಂಟಿ ನಿರ್ದೇಶಕ (ಐಟಿ ವಿಭಾಗ) ಕೆ. ರಾಮೇಶ್ವರಪ್ಪ ಅವರು ಭಾನುವಾರ ದೂರು ನೀಡಿದ್ದಾರೆ.

ಅಕ್ಕಿ ಅಕ್ರಮ ಸಾಗಣೆಯ ಬಗ್ಗೆ ಮೇ 16ರಂದು ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಬಂದಿತ್ತು. ಅಂದೇ ಜಂಟಿ ಕಾರ್ಯಾಚರಣೆ ನಡೆಸಿ, ಅಕ್ಕಿ ಗಿರಣಿಯಲ್ಲಿ ದಾಸ್ತಾನು ಇಡಲಾಗಿದ್ದ ₹ 2.35 ಕೋಟಿ ಮೌಲ್ಯದ 8,497 ಕ್ವಿಂಟಲ್‌ ಅಕ್ಕಿ ಮತ್ತು 1,213.70 ಕ್ವಿಂಟಲ್‌ ಅಕ್ಕಿ ನುಚ್ಚು, ಸಾಗಣೆ ಬಳಸಿದ ₹ 49.50 ಲಕ್ಷ ಮೌಲ್ಯದ ಏಳು ವಾಹನಗಳನ್ನು ಸೇರಿ ಒಟ್ಟು 2.81 ಕೋಟಿಯ ವಸ್ತು ಮತ್ತು ವಾಹನವನ್ನು ವಶಪಡಿಸಿಕೊಳ್ಳಲಾಗಿತ್ತು.

ಅಕ್ಕಿ ಗಿರಣಿಯ ಮಾಲೀಕ ಆರ್‌. ರಘುನಾಥ ಶೆಟ್ಟಿ, ನೌಕರರರಾದ ಸಿ. ಮಂಜುನಾಥ್‌, ಬಿ.ಎಂ. ರಾಮು, ಚಿನ್ನಪ್ಪ, ವಾಹನಗಳ ಮಾಲೀಕರು ಮತ್ತು ಚಾಲಕರು ಕಾಳಸಂತೆಕೋರರ ಜೊತೆ ಶಾಮೀಲಾಗಿ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಸರ್ಕಾರಗಳು ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಬಿಡುಗಡೆ ಮಾಡಿರುವ ಅಕ್ಕಿಯನ್ನು ಅಕ್ರಮವಾಗಿ ಖರೀದಿಸಿ, ಪಾಲಿಶ್‌ ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿದ್ದರು ಎಂದು ದೂರಿನಲ್ಲಿ ಆರೋಪಿಸಲಾಗಿದೆ.

‘ಅಕ್ಕಿ ಗಿರಣಿ ಮಾಲೀಕರು ಮತ್ತು ಅದರ ಜೊತೆ ಇತರ ವ್ಯಾಪಾರಿಗಳು ಮತ್ತು ಮಧ್ಯವರ್ತಿಗಳು ಸೇರಿ ಅಗತ್ಯ ವಸ್ತುಗಳ ಅಕ್ರಮ ಸಾಗಣೆ, ಕಾಳಸಂತೆಯಲ್ಲಿ ಮಾರಾಟ ಮಾಡಿ ಸರ್ಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡಿದ್ದಾರೆ ಎಂದು ಆರೋಪಿಸಿ ದೂರು ನೀಡಲಾಗಿದ್ದು, ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ’ ಎಂದು ರಾಮೇಶ್ವರಪ್ಪ ತಿಳಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು