ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಶರಣರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ಪ್ರಭಾವಿಯಿಂದ ಸಂಧಾನ ಯತ್ನ!

ಮಠದ ಆಡಳಿತಾಧಿಕಾರಿ ಬಸವರಾಜನ್‌ ವಿರುದ್ಧವೂ ಆರೋಪ
Last Updated 27 ಆಗಸ್ಟ್ 2022, 19:45 IST
ಅಕ್ಷರ ಗಾತ್ರ

ಮೈಸೂರು/ಚಿತ್ರದುರ್ಗ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಶರಣರು, ಇತರ ಮೂವರ ವಿರುದ್ಧ ಇಲ್ಲಿ ಪೋಕ್ಸೊ ಕಾಯ್ದೆಯಡಿ ಎಫ್‌ಐಆರ್‌ ದಾಖಲಾಗಿದೆ. ಅತ್ತ, ಚಿತ್ರದುರ್ಗದಲ್ಲಿ ಮಠದ ಆಡಳಿತಾಧಿಕಾರಿ ಎಸ್‌.ಕೆ. ಬಸವರಾಜನ್ ದಂಪತಿ ವಿರುದ್ಧವೂ ಮಹಿಳೆಗೆ ಲೈಂಗಿಕ ಕಿರುಕುಳ ಬಗ್ಗೆ ದೂರು ದಾಖಲಾಗಿದೆ.

ದೂರು ದಾಖಲಾಗುತ್ತಿದ್ದಂತೆ ಚಿತ್ರ ದುರ್ಗದ ಮಠದ ಆವರಣ ದಲ್ಲಿ ಆತಂಕ ನೆಲೆಸಿದೆ. ರಾಜ ಕೀಯ ಮುಖಂಡರು, ವಿವಿಧ ಮಠಾಧೀಶರುಶರಣರನ್ನು ಭೇಟಿಯಾಗಿದ್ದಾರೆ. ಶರಣರು ಮಠ ದಲ್ಲಿಯೇ ಇದ್ದು ಸರಣಿ ಸಭೆಗಳನ್ನು ನಡೆ ಸಿದರು. ಪ್ರಕರಣ ರಾಜ್ಯವ್ಯಾಪಿ ಚರ್ಚೆಗೆ ಆಸ್ಪದವಾಗುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ, ‘ಎರಡು ದೂರಿನ ಬಗ್ಗೆ ತನಿಖೆ ನಡೆದಿದೆ’ ಎಂದು ತಿಳಿಸಿದ್ದಾರೆ.

ಪ್ರೌಢಶಾಲಾ ವಿದ್ಯಾರ್ಥಿನಿಯರಿಗೆ ನಿರಂತರ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿ ಮೈಸೂರಿನ ನಜರಬಾದ್‌ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಶಿವಮೂರ್ತಿ ಮುರುಘಾ ಶರಣರು ಪ್ರಥಮ ಆರೋಪಿ. ವಿದ್ಯಾರ್ಥಿ ನಿಯರಿದ್ದ ವಸತಿ ನಿಲಯದ ವಾರ್ಡನ್‌ ಎರಡನೇ ಆರೋಪಿಯಾಗಿದ್ದರೆ, ಮಠದಲ್ಲಿರುವ ಕಾನೂನು ಸಂಘರ್ಷಕ್ಕೊಳಗಾದವ ರೊಬ್ಬರು ಮೂರನೇ ಆರೋಪಿ, ಮಠದ ಭಕ್ತರು ಎನ್ನಲಾದ ಮೈಸೂರಿನ ಪರಮಶಿವಯ್ಯ ಮತ್ತು ವಕೀಲ ಗಂಗಾಧರಯ್ಯ ಕ್ರಮವಾಗಿ ನಾಲ್ಕು ಮತ್ತು ಐದನೇ ಆರೋಪಿಗಳಾಗಿದ್ದಾರೆ.

ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಕಾನೂನು ಮತ್ತು ಪರಿವೀಕ್ಷಣಾಧಿಕಾರಿ ಸಿ.ಚಂದ್ರಕುಮಾರ್‌ ದೂರು ನೀಡಿದ್ದು, ‘ಇಬ್ಬರು ವಿದ್ಯಾರ್ಥಿನಿಯರ ಪೈಕಿ ಒಬ್ಬರನ್ನು ಮುರುಘಾ ಶರಣರು ಮೂರೂವರೆ ವರ್ಷಗಳಿಂದ, ಮತ್ತೊಬ್ಬರನ್ನು ಒಂದೂವರೆ ವರ್ಷದಿಂದ ಲೈಂಗಿಕವಾಗಿ ದೌರ್ಜನ್ಯ ಮಾಡುತ್ತಿದ್ದರು. ಈ ಕೃತ್ಯಕ್ಕೆ ಉಳಿದ ಆರೋಪಿಗಳು ಸಹಕರಿಸಿರುವುದಾಗಿ ವಿದ್ಯಾರ್ಥಿನಿಯರು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಆಪ್ತಸಮಾಲೋಚನೆ ವೇಳೆ ಹೇಳಿಕೆ ನೀಡಿದ್ದಾರೆ‘ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಧ್ಯಾಹ್ನ 3 ಗಂಟೆಯಿಂದ 9ರವರೆಗೂ ಮಕ್ಕಳೊಂದಿಗೆ ಆಪ್ತ ಸಮಾಲೋಚನೆ ನಡೆಸಿದ ಸಮಿತಿಯು, ರಾತ್ರಿ 10ರ ವೇಳೆಗೆ ದೂರು ದಾಖಲಿಸಲು ಅಧಿಕಾರಿಗೆ ಸೂಚಿಸಿತ್ತು. ಅದರಂತೆ ಶುಕ್ರವಾರ ರಾತ್ರಿ 10.30ರ ವೇಳೆಗೆ ದೂರು ದಾಖಲಾಗಿದೆ.

ಇತರೆ ಪೋಷಕರಿಂದಲೂ ದೂರು: ಪ್ರಭಾವಿಯಿಂದ ಸಂಧಾನ ಯತ್ನ!

‘ಲೈಂಗಿಕ ಕಿರುಕುಳ ಪ್ರಕರಣ ಬಯಲಾಗುತ್ತಿದ್ದಂತೆಯೇ ಬೇರೆ ಕೆಲ ಮಕ್ಕಳ ಪೋಷಕರು ಒಡನಾಡಿ ಸಂಸ್ಥೆಯನ್ನು ಸಂಪರ್ಕಿಸಿದ್ದು, ತಾವು ಕಿರುಕುಳ ಎದುರಿಸಿರುವುದಾಗಿ ಹೇಳಿದ್ದಾರೆ’ ಎಂದು‘ಒಡನಾಡಿ’ ಸಂಚಾಲಕ ಪರಶುರಾಂ ತಿಳಿಸಿದ್ದಾರೆ.

‘ನೆರವು ಕೋರಿರುವ ಬೇರೆ ಮಕ್ಕಳ ಪೋಷಕರಿಗೆ ಸಾಧ್ಯವಾದರೆ, ಚಿತ್ರದುರ್ಗದಲ್ಲಿಯೇ ದೂರು ನೀಡಿ, ಇಲ್ಲವಾದರೆ ಸಂಸ್ಥೆಯಿಂದ ನೆರವು ನೀಡಲು ಸಿದ್ಧ ಎಂದು ಭರವಸೆ ನೀಡಿದ್ದೇವೆ’ ಎಂದಿದ್ದಾರೆ. ಈ ಮಧ್ಯೆ,ಚಿತ್ರದುರ್ಗ ಪ್ರಭಾವಿಯೊಬ್ಬರು ಸಂಧಾನ ಯತ್ನ ಮಾಡಿದರು ಎಂದೂ ಹೇಳಿದ್ದಾರೆ.

‘ಸಂತ್ರಸ್ತ ಮಕ್ಕಳು ಸಂಸ್ಥೆಯ ಸಂಪರ್ಕಕ್ಕೆ ಬಂದ ಬಳಿಕ, ಸಿಬ್ಬಂದಿಗೆ ಒತ್ತಡ, ಬೆದರಿಕೆ‌ ಕರೆಗಳು ಬಂದಿವೆ. ಆದರೆ, ಆಮಿಷಕ್ಕೆ ಬಗ್ಗದೇ, ಕಾನೂನು ಪ್ರಕ್ರಿಯೆಗೆ ಒಳಪಡಿಸಲು ನಿರ್ಧರಿಸಿದೆವು’ ಎಂದರು.

ಆಡಳಿತಾಧಿಕಾರಿ ವಿರುದ್ಧ ದೂರು

ಚಿತ್ರದುರ್ಗ ವರದಿ: ಮಹಿಳೆಗೆ ಲೈಂಗಿಕ ಕಿರುಕುಳ ಕುರಿತಂತೆ ಮಠದ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್, ಕೃತ್ಯಕ್ಕೆ ಕುಮ್ಮಕ್ಕು ನೀಡಿದ ಆರೋಪದಡಿ ಅವರ ಪತ್ನಿ ಸೌಭಾಗ್ಯ ವಿರುದ್ಧ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಬಲಾತ್ಕಾರ (ಐಪಿಸಿ 354ಎ), ಕೊಲೆ ಬೆದರಿಕೆ (ಐಪಿಸಿ 506), ಶಾಂತಿ ಭಂಗಕ್ಕೆ ಪ್ರಚೋದಿಸುವುದು (ಐಪಿಸಿ 504), ಅಪರಾಧ ಸಂಚು (ಐಪಿಸಿ 34) ಸೇರಿ ಹಲವು ಕಾಲಂ ಅಡಿಯಲ್ಲಿ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ. ಬಸವರಾಜನ್‌ ಮಾಜಿ ಶಾಸಕರಾಗಿದ್ದು, ಸೌಭಾಗ್ಯ ಅವರು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆಯಾಗಿದ್ದಾರೆ.

ಮಠದಲ್ಲಿ ನೆಲೆಸಿದ್ದ ಮಹಿಳೆಯೇ ಈ ಇಬ್ಬರ ವಿರುದ್ಧ ದೂರು ನೀಡಿದ್ದು, ‘ಜುಲೈ 27ರಂದು ಸಂಜೆ 6ಕ್ಕೆ ಪರಿಶೀಲನೆ ನೆಪದಲ್ಲಿ ವಿದ್ಯಾರ್ಥಿನಿಯರ ವಸತಿನಿಲಯಕ್ಕೆ ಭೇಟಿ ನೀಡಿದ್ದ ಆಡಳಿತಾಧಿಕಾರಿ, ಅಶ್ಲೀಲವಾಗಿ ಮಾತನಾಡಿದರು. ಯಾರೂ ಇಲ್ಲದ್ದನ್ನು ಗಮನಿಸಿ ದೇಹದ ಅಂಗಾಂಗ ಮುಟ್ಟಿ ಕಿರುಕುಳ ನೀಡಿದರು. ಬಲಾತ್ಕಾರಕ್ಕೆ ಯತ್ನಿಸಿದಾಗ ಪ್ರತಿರೋಧ ತೋರಿದೆ. ಕುಪಿತಗೊಂಡ ಅವರು ಕೊಲೆ ಬೆದರಿಕೆ ಹಾಕಿದ್ದರು’ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

‘ಮಠದ ಶಿಕ್ಷಣ ಸಂಸ್ಥೆಯಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರು ವೈಯಕ್ತಿಕ ಕಾರಣ ನೀಡಿ ಹಾಸ್ಟೆಲ್‌ನಿಂದ ಹೋಗಿದ್ದು, ಬೆಂಗಳೂರಿನ ಕಾಟನ್‌ಪೇಟೆ ಪೊಲೀಸ್ ಠಾಣೆ ತಲುಪಿದ್ದರು. ಠಾಣೆಯಿಂದ ಮಕ್ಕಳನ್ನು ಕರೆತಂದ ಬಸವರಾಜನ್‌, ವಸತಿನಿಲಯಕ್ಕೆ ಒಪ್ಪಿಸದೇ ತಮ್ಮ ಮನೆಯಲ್ಲಿ ಅಕ್ರಮವಾಗಿ‌ ಇಟ್ಟುಕೊಂಡಿದ್ದರು. ಇದನ್ನು ಪ್ರಶ್ನಿಸಿದ್ದಕ್ಕೆ ಲೈಂಗಿಕ ಕಿರುಕುಳ ನೀಡಿದ್ದಾರೆ’ ಎಂದು
ಹೇಳಿದ್ದಾರೆ.

ಪ್ರಕರಣ ಚಿತ್ರದುರ್ಗಕ್ಕೆ ವರ್ಗ: ಈ ಮಧ್ಯೆ, ಮೈಸೂರಿನಲ್ಲಿ ದಾಖಲಾಗಿದ್ದ ಪ್ರಕರಣವನ್ನು ಚಿತ್ರದುರ್ಗದ ಗ್ರಾಮಾಂತರ ಠಾಣೆಗೆ ವರ್ಗಾಯಿಸಲಾಗಿದೆ. ದೂರುದಾರ ಬಾಲಕಿಯರನ್ನು ಚಿತ್ರದುರ್ಗಕ್ಕೆ ಕರೆದೊ ಯ್ಯಲಾಯಿತು. ಮಕ್ಕಳ ಕಲ್ಯಾಣ ಸಮಿತಿ ಸದಸ್ಯರೊಬ್ಬರು, ಮಹಿಳಾ ಆಪ್ತಸಮಾಲೋಚಕರು ಸೇರಿದಂತೆ ಸುಮಾರು 8ಮಂದಿ ಬಾಲಕಿಯರೊಂದಿಗೆ ತೆರಳಿದರು’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT