ಶನಿವಾರ, ಡಿಸೆಂಬರ್ 5, 2020
21 °C
ಬಿಜೆಪಿ– ಕಾಂಗ್ರೆಸ್ ವಿರುದ್ಧ ಎಫ್‌ಐಆರ್‌

ಬಿಜೆಪಿ– ಕಾಂಗ್ರೆಸ್ ವಿರುದ್ಧ ಎಫ್‌ಐಆರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನ ದಿನ ಹತ್ತಿರವಾಗುತ್ತಿದ್ದು, ಮತಗಳನ್ನು ಸೆಳೆಯಲು ಅಭ್ಯರ್ಥಿಗಳು ಹಣ ಹಂಚಿಕೆ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷದವರ ವಿರುದ್ಧ ಯಶವಂತಪುರ ಠಾಣೆಯಲ್ಲಿ ಪ್ರತ್ಯೇಕ ಎಫ್‌ಐಆರ್‌ಗಳು ದಾಖಲಾಗಿವೆ.

‘ಬಿಜೆಪಿ ಅಭ್ಯರ್ಥಿ ಮುನಿರತ್ನ ಹಾಗೂ ಕಾರ್ಯಕರ್ತರು, ಬಿಜೆಪಿಗೆ ಮತ ಹಾಕಿದರೆ ಪ್ರತಿ ಮತಕ್ಕೆ ₹ 5 ಸಾವಿರ ನೀಡುವುದಾಗಿ ಮತದಾರರಿಗೆ ಆಮಿಷವೊಡ್ಡಿದ್ದಾರೆ’ ಎಂದು ಆರೋಪಿಸಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್ ದೂರು ನೀಡಿದ್ದಾರೆ.

ಅದಕ್ಕೆ ಪ್ರತಿದೂರು ನೀಡಿರುವ ಬಿಜೆಪಿ ಕಾರ್ಯಕರ್ತ ಪುನೀತ್‌ಕುಮಾರ್, ‘ವಿಧಾನಪರಿಷತ್ ಸದಸ್ಯ ನಾರಾಯಣಸ್ವಾಮಿ ಹಾಗೂ ಅವರ ಬೆಂಬಲಿಗರು, ಎಚ್‌ಎಂಟಿ ಲೇಔಟ್‌ನ ಗಣೇಶ ದೇವಸ್ಥಾನದ ಬಳಿ ಮತದಾರರಿಂದ ಗುರುತಿನ ಚೀಟಿ ಸಂಗ್ರಹಿಸುತ್ತಿದ್ದರು. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿದರೆ ಹಣ ನೀಡುವುದಾಗಿ ಅವರೆಲ್ಲ ಮತದಾರರಿಗೆ ಆಮಿಷವೊಡ್ಡಿದ್ದಾರೆ. ಅದನ್ನು ಪ್ರಶ್ನಿಸಿದ್ದಕ್ಕೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬೆದರಿಕೆ ಹಾಕಿದ್ದಾರೆ’ ಎಂದು ಹೇಳಿದ್ದಾರೆ.

ಯಶವಂತಪುರ ಪೊಲೀಸರು, ‘ಎರಡೂ ದೂರು ಆಧರಿಸಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿಕೊಳ್ಳಲಾಗಿತ್ತು. ನ್ಯಾಯಾಲಯದ ನಿರ್ದೇಶನದಂತೆ ಇದೀಗ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿದರು.

‘ಬಿಜೆಪಿ ಅಭ್ಯರ್ಥಿ ಮುನಿರತ್ನ ಹಾಗೂ ಬೆಂಬಲಿಗರನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಇನ್ನೊಂದು ಪ್ರಕರಣದಲ್ಲಿ,  ವಿಧಾನಪರಿಷತ್  ಸದಸ್ಯ ನಾರಾಯಣಸ್ವಾಮಿ ಮತ್ತು ಬೆಂಬಲಿಗರು ಆರೋಪಿಗಳಾಗಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.