ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ವಸತಿ ಸಮುಚ್ಚಯದಲ್ಲಿ ಸಂಭವಿಸಿದ ಬೆಂಕಿ ಅವಘಡಕ್ಕೆ ಕಾರಣ ನಿಗೂಢ

ಪೂಜೆ ಬಳಿಕ ಹಚ್ಚಿದ್ದ ದೀಪಗಳಿಂದ ಬೆಂಕಿ ಹೊತ್ತಿರುವ ಶಂಕೆ
Last Updated 22 ಸೆಪ್ಟೆಂಬರ್ 2021, 22:05 IST
ಅಕ್ಷರ ಗಾತ್ರ

ಬೆಂಗಳೂರು: ದೇವರಚಿಕ್ಕನಹಳ್ಳಿಯ ‘ಆಶ್ರಿತ್‌ ಆಸ್ಪೈರ್‌’ ವಸತಿ ಸಮುಚ್ಚಯದಲ್ಲಿ ಮಂಗಳವಾರ ಸಂಭವಿಸಿದ್ದ ಅಗ್ನಿ ದುರಂತಕ್ಕೆ ಕಾರಣ ಏನು ಎಂಬುದು ಖಚಿತವಾಗಿಲ್ಲ.

ವಿಧಿ ವಿಜ್ಞಾನ ಪ್ರಯೋಗಾಲಯ (ಎಫ್‌ಎಸ್‌ಎಲ್‌), ಬೆಸ್ಕಾಂ ಹಾಗೂ ಪೊಲೀಸರ ತಂಡವು ಘಟನಾ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿತು. ಎಫ್‌ಎಸ್‌ಎಲ್‌ ತಂಡವುವಿವಿಧ ಬಗೆಯ 20 ವಸ್ತುಗಳನ್ನು ಸಂಗ್ರಹಿಸಿದೆ.

‘ಫ್ಲ್ಯಾಟ್‌ನಲ್ಲಿದ್ದ ಎರಡು ಸಿಲಿಂಡರ್‌ಗಳಲ್ಲಿ ಅಡುಗೆ ಅನಿಲ ಹಾಗೆಯೇ ಇದೆ. ಶಾರ್ಟ್‌ ಸರ್ಕ್ಯೂಟ್‌ ಕೂಡ ಆಗಿಲ್ಲ.ಅಮೆರಿಕದಿಂದ ಮರಳಿದ್ದ ಭಾಗ್ಯರೇಖಾ, ಪೂಜೆ ಮಾಡಿದ ಬಳಿಕ ಕೊಠಡಿಯಲ್ಲಿ 10ಕ್ಕೂ ಹೆಚ್ಚು ದೀಪಗಳನ್ನು ಹಚ್ಚಿ ನಿದ್ರೆಗೆ ಜಾರಿರಬಹುದು. ಗಾಳಿಗೆ ದೀಪ ಕೆಳಗೆ ಬಿದ್ದು ಹತ್ತಿರದಲ್ಲಿದ್ದ ಯಾವುದಾದರೂ ವಸ್ತುವಿಗೆ ಹೊತ್ತಿಕೊಂಡಿರಬೇಕು. ಅದರಿಂದಲೇ ಅವಘಡ ಸಂಭವಿಸಿರಬಹುದು’ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಭೀಮಸೇನ್‌ ಅವರು ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಮನೆಯ ಒಳಾಂಗಣ ವಿನ್ಯಾಸ ಮಾಡಿಸಿದ್ದರು. ಇದಕ್ಕಾಗಿ ಫ್ಲೈವುಡ್‌ ಹಾಗೂ ಮರದ ಪೀಠೋಪಕರಣಗಳನ್ನೇಹೆಚ್ಚಾಗಿ ಬಳಕೆ ಮಾಡಿದ್ದರು. ಇದರಿಂದಾಗಿಯೇ ಬೆಂಕಿಯು ತೀವ್ರ ಸ್ವರೂಪ ಪಡೆದುಕೊಂಡಿರಬಹುದು’ ಎಂದು ಅವರು ಹೇಳಿದ್ದಾರೆ.

‘ಬೆಂಕಿಯ ತೀವ್ರತೆಗೆಫ್ಲ್ಯಾಟ್‌ನಲ್ಲಿದ್ದ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಫ್ರಿಡ್ಜ್‌ನಿಂದ ಕಿಡಿಯೊಂದು ಹೊರಹೊಮ್ಮಿರಬಹುದು ಎಂಬ ಅನುಮಾನವೂ ಮೂಡಿದೆ. ಸಿಲಿಂಡರ್‌ನ ರೆಗ್ಯುಲೇಟರ್‌ ಸಿಕ್ಕಿಲ್ಲ. ಫ್ಲ್ಯಾಟ್‌ನ ಬಾಲ್ಕನಿಗೆ ಕಬ್ಬಿಣದ ಗ್ರಿಲ್‌ ಅಳವಡಿಸದೇ ಹೋಗಿದ್ದರೆ ಭಾಗ್ಯರೇಖಾ ಹಾಗೂ ಅವರ ತಾಯಿ ಬದುಕುಳಿಯುವ ಸಾಧ್ಯತೆ ಇತ್ತು’ ಎಂದರು.

ಅಪಾರ್ಟ್‌ಮೆಂಟ್‌ ಸಮುಚ್ಚಯದ ಮಾಲೀಕರ ನಿರ್ಲಕ್ಷ್ಯ?: ’ವಸತಿ ಸಮುಚ್ಚಯದಲ್ಲಿ ಆಕಸ್ಮಿಕವಾಗಿ ಅಗ್ನಿ ಅವಘಡಗಳು ಸಂಭವಿಸಿದರೆ ತಕ್ಷಣವೇ ಬೆಂಕಿ ನಂದಿಸಲು ಅಗತ್ಯವಿರುವ ನೀರಿನ ಕೊಳವೆಗಳ ವ್ಯವಸ್ಥೆ ಈ ಸಮುಚ್ಚಯದಲ್ಲಿ ಇರಲಿಲ್ಲ. ಬೆಂಕಿ ಅವಘಡದ ಸಂದರ್ಭದಲ್ಲಿ ನಿವಾಸಿಗಳನ್ನು ಎಚ್ಚರಿಸಲು ‘ಸೈರನ್‌’ ವ್ಯವಸ್ಥೆಯೂ ಇರಲಿಲ್ಲ’ ಎಂದು ನಿವಾಸಿಗಳು ಆರೋಪಿಸಿದ್ದಾರೆ.

ಪ್ರಕರಣ ದಾಖಲು: ಘಟನೆ ಸಂಬಂಧ ಭಾಗ್ಯರೇಖಾ ಅವರ ಅಳಿಯ ಸಂದೀಪ್‌, ಬೇಗೂರು ಪೊಲೀಸ್‌ ಠಾಣೆಯಲ್ಲಿ ದೂರುದಾಖಲಿಸಿದ್ದಾರೆ.

‘ಆಕಸ್ಮಿಕ ಸಾವು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಮುಂದುವರಿಸುತ್ತೇವೆ’ ಎಂದು ಪೊಲೀಸರುಹೇಳಿದ್ದಾರೆ.

‘ಬೆಂಕಿ ನಂದಿಸುವ ಸಿಲಿಂಡರ್‌ ಇದ್ದವು’
‘ಪ್ರತಿ ಮಹಡಿಯಲ್ಲೂ ಬೆಂಕಿ ನಂದಿಸಲು ಅಗತ್ಯವಿರುವ ಸಿಲಿಂಡರ್‌ಗಳನ್ನು ಅಳವಡಿಸಲಾಗಿದೆ. ಬೆಂಕಿ ತೀವ್ರ ಸ್ವರೂಪ ಪಡೆದಿದ್ದರಿಂದ ಅದನ್ನು ಹತ್ತಿಕ್ಕಲು ಸಾಧ್ಯವಾಗಿಲ್ಲ’ ಎಂದು ಬಿಬಿಎಂಪಿ ಬೊಮ್ಮನಹಳ್ಳಿ ವಲಯದ ಜಂಟಿ ಆಯುಕ್ತ ರಾಮಕೃಷ್ಣ ಸ್ಪಷ್ಟಪಡಿಸಿದ್ದಾರೆ.

‘ಫ್ಲ್ಯಾಟ್‌ಗಳನ್ನು ಸ್ವಚ್ಛಗೊಳಿಸಿಕೊಡಲಾಗುತ್ತದೆ. ವಿದ್ಯುತ್‌ ಮತ್ತು ನೀರಿನ ಸರಬರಾಜು ಕೂಡ ಮಾಡಲಾಗುತ್ತದೆ. ಬಳಿಕ ನಿವಾಸಿಗಳಿಗೆ ಫ್ಲ್ಯಾಟ್‌ ಪ್ರವೇಶಿಸಲು ಅವಕಾಶ ನೀಡುತ್ತೇವೆ. ನಮ್ಮ ವೈದ್ಯಕೀಯ ತಂಡವೂ ಸ್ಥಳದಲ್ಲೇ ಇದ್ದು, ಅಗತ್ಯವಿದ್ದವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಲಿದೆ’ ಎಂದರು.

‘ಅಗ್ನಿಶಾಮಕ ದಳವನ್ನು ಬಲಪಡಿಸಲು ಕ್ರಮ’
‘ಬೆಂಗಳೂರಿನಲ್ಲಿ ಗಗನಚುಂಬಿ ಕಟ್ಟಡಗಳು ಹೆಚ್ಚುತ್ತಲೇ ಇವೆ. ಈ ಕಟ್ಟಡಗಳಲ್ಲಿ ಆಕಸ್ಮಿಕ ಅಗ್ನಿ ಅವಘಡಗಳು ಸಂಭವಿಸಿದರೆ ಅಲ್ಲಿ ಸಿಲುಕುವವರನ್ನು ಸುರಕ್ಷಿತವಾಗಿ ಹೊರಗೆ ತರಬೇಕಾದುದು ನಮ್ಮ ಜವಾಬ್ದಾರಿ. ಇಂತಹ ಸಂದಿಗ್ಧ ಪರಿಸ್ಥಿತಿಯನ್ನು ನಿಭಾಯಿಸಲು ಅಗ್ನಿಶಾಮಕ ದಳವನ್ನು ಸಶಕ್ತಗೊಳಿಸಬೇಕಿದೆ. ಹೀಗಾಗಿ 50 ಮೀಟರ್‌ಗಳಷ್ಟು ಎತ್ತರಕ್ಕೆ ಹೋಗಲು ನೆರವಾಗುವಂತಹ ಎರಡು ಲಿಫ್ಟ್‌ಗಳನ್ನು ಖರೀದಿಸಲಾಗಿದೆ. 90 ಮೀ. ಎತ್ತರಕ್ಕೆ ಹೋಗಬಲ್ಲ ಎರಡು ಲಿಫ್ಟ್‌ಗಳನ್ನೂ ತರಿಸಲಾಗುತ್ತಿದೆ. ಇದಕ್ಕಾಗಿ ಸುಮಾರು ₹50 ಕೋಟಿ ವೆಚ್ಚ ಮಾಡಲಾಗಿದೆ’ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.

‘ಆಶ್ರಿತ್‌ ಅಪಾರ್ಟ್‌ಮೆಂಟ್‌ ಸಮುಚ್ಚಯಕ್ಕೆ ಹೋಗಲು ಸೂಕ್ತ ರಸ್ತೆಯೇ ಇರಲಿಲ್ಲ ಎಂಬ ಮಾಹಿತಿ ಸಿಕ್ಕಿದೆ. ದೊಡ್ಡ ಅಪಾರ್ಟ್‌ಮೆಂಟ್‌ ಸಮುಚ್ಚಯಗಳನ್ನು ಕಟ್ಟುವಾಗ ದೊಡ್ಡ ರಸ್ತೆಗಳನ್ನೂ ನಿರ್ಮಾಣ ಮಾಡಬೇಕು. ಅಗ್ನಿಶಾಮಕ ದಳದ ವಾಹನಗಳು ಸಾಗಲು ಸೂಕ್ತ ವ್ಯವಸ್ಥೆ ಇರಬೇಕು. ಇಲ್ಲದಿದ್ದರೆ ಅಂತಹ ಕಟ್ಟಡಗಳಿಗೆ ಅನುಮತಿಯೇ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಲಾಗುತ್ತದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT