ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಣಿ ತುಂಬ ಸಿಗದ ಮೀನು: ಬೇಟೆಗಾರರಿಂದ ಕಲ್ಲು ತೂರಾಟ

ಕಾನಗೋಡು: ಕೆರೆಬೇಟೆಯಲ್ಲಿ ಗಲಾಟೆ, 10 ಮಂದಿ ಬಂಧನ
Last Updated 29 ಮೇ 2022, 19:31 IST
ಅಕ್ಷರ ಗಾತ್ರ

ಸಿದ್ದಾಪುರ (ಉತ್ತರಕನ್ನಡ ಜಿಲ್ಲೆ): ತಾಲ್ಲೂಕಿನ ಕಾನಗೋಡು ಗ್ರಾಮದ ದೊಡ್ಡಕೆರೆಯಲ್ಲಿ ಭಾನುವಾರ ‘ಕೆರೆ ಬೇಟೆ’ ವೇಳೆ ಗ್ರಾಮಸ್ಥರು ಹಾಗೂ ಪೊಲೀಸರ ಮೇಲೆಉದ್ರಿಕ್ತ ಮೀನು ಬೇಟೆಗಾರರು ಕಲ್ಲು ತೂರಾಟ ನಡೆಸಿದ್ದಾರೆ. ಈ ಘಟನೆಗೆ ಸಂಬಂಧಿಸಿ 10 ಜನರನ್ನು ಬಂಧಿಸಲಾಗಿದೆ.

ಗ್ರಾಮದ ಈಶ್ವರ ದೇವಸ್ಥಾನದ ಸಮಿತಿ ಆಯೋಜಿಸಿದ್ದ ‘ಕೆರೆ ಬೇಟೆ’ಯಲ್ಲಿ ಐದು ಸಾವಿರಕ್ಕೂ ಹೆಚ್ಚು ಜನ ಪಾಲ್ಗೊಂಡಿದ್ದರು. 40 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಏಕಕಾಲಕ್ಕೆ ಸಾವಿರಾರು ಜನರು ಕೂಣಿಯೊಂದಿಗೆ (ಮೀನು ಹಿಡಿಯುವ ಸಾಧನ) ಮೀನು ಹಿಡಿಯಲು ಇಳಿದಿದ್ದರು.

ಪ್ರತಿ ಕೂಣಿಗೆ ₹ 600 ದರ ನಿಗದಿಪಡಿಸಲಾಗಿತ್ತು. ನಿರೀಕ್ಷಿತ ಪ್ರಮಾಣದ ಮೀನು ಸಿಗದೆ ಬೇಸರಗೊಂಡ ಜನರು ಕೂಣಿಗೆ ನೀಡಿದ ಹಣ ಮರಳಿಸಲು ಪಟ್ಟು ಹಿಡಿದರು. ಜನರ ಆಕ್ರೋಶ ಕಂಡ ದೇವಸ್ಥಾನ ಸಮಿತಿಯವರು ಸ್ಥಳದಿಂದ ಕಾಲ್ಕಿತ್ತಿದ್ದರು. ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಜನರು ಗ್ರಾಮದ ಕೆಲ ಮನೆಗಳಿಗೆ ತೆರಳಿ ಸಮಿತಿಯವರ ವಿಚಾರಣೆ ನಡೆಸತೊಡಗಿದ್ದರು. ಆಗ ಪರಸ್ಪರ ಘರ್ಷಣೆ
ಉಂಟಾಯಿತು.

‘ಕೆರೆ ಬೇಟೆಗೆ ಶಿರಾಳಕೊಪ್ಪ, ಆನವಟ್ಟಿ, ಸೊರಬ, ದಾಸನಕೊಪ್ಪ ಭಾಗದಿಂದ ಸಾಕಷ್ಟು ಜನರು ಬಂದಿದ್ದರು. ಸಿಟ್ಟಿಗೆದ್ದ ಅವರು ಕಲ್ಲು ತೂರಾಟ ನಡೆಸಿದ್ದರು. ಪೊಲೀಸರ ಮೇಲೂ ಆಕ್ರೋಶ ಹೊರಹಾಕಿದರು. ಕೆಲ ಸಿಬ್ಬಂದಿ ಗಾಯಗೊಂಡರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದರು.

ಹೆಚ್ಚುವರಿ ಎಸ್ಪಿ ಎಸ್.ಬದರೀನಾಥ, ‘ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಜನರು ಹಳ್ಳಿಗಳಿಗೆ ನುಗ್ಗಿ ಆಸ್ತಿ ಹಾನಿ ಮಾಡಿದ ಆರೋಪಗಳಿವೆ. ಆಯೋಜಕರಿಂದ ಮಾಹಿತಿಯನ್ನು ಕಲೆ ಹಾಕುತ್ತಿದ್ದೇವೆ. ಘಟನೆಗೆ ಕಾರಣರಾದವರ ಮೇಲೆ ಶಿಸ್ತುಕ್ರಮ ಜರುಗಿಸುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT