ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೀಮಾ ಪ್ರವಾಹ: ಕಾಳಜಿ ಕೇಂದ್ರಗಳಲ್ಲೂ ಜಾತಿ ತಾರತಮ್ಯ?

ಅಫಜಲಪುರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಬಿಡಾರ ಹೂಡಿರುವ ನಾಲ್ಕೈದು ಗ್ರಾಮಗಳ ನಿರಾಶ್ರಿತರು
Last Updated 18 ಅಕ್ಟೋಬರ್ 2020, 20:20 IST
ಅಕ್ಷರ ಗಾತ್ರ

ಕಲಬುರ್ಗಿ: ಭೀಮಾ ಪ್ರವಾಹದಿಂದಾಗಿ ಮನೆ ಮಠ ಕಳೆದುಕೊಂಡು ನಿರಾಶ್ರಿತರಾಗಿರುವ ಎಲ್ಲರನ್ನೂ ಸಮಾನರನ್ನಾಗಿ ಜಿಲ್ಲಾಡಳಿತ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಆರೋಪಗಳು ದಟ್ಟವಾಗಿ ಕೇಳಿ ಬಂದಿದ್ದು, ಅಫಜಲಪುರ ಪಟ್ಟಣದ ಹೊರವಲಯದಲ್ಲಿರುವ ಸರ್ಕಾರಿ ಪದವಿ ಕಾಲೇಜಿನಲ್ಲಿ ಈ ಬಗ್ಗೆ ನೂರಾರು ಸಂತ್ರಸ್ತರು ಬಹಿರಂಗವಾಗಿಯೇ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಭೀಮಾ ನದಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದ್ದರಿಂದ ನದಿ ಪಾತ್ರದ ಸೊನ್ನ, ಕೊಳ್ಳೂರ, ಅಳ್ಳಗಿ, ಹಿಂಚಗೇರಾ ಸೇರಿದಂತೆ ನಾಲ್ಕೈದು ಗ್ರಾಮಗಳ ಸುಮಾರು 600ಕ್ಕೂ ಅಧಿಕ ನೆರೆ ಸಂತ್ರಸ್ತರಿಗೆ ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಈ ಕೇಂದ್ರಗಳನ್ನು ತಾಲ್ಲೂಕು ಪಂಚಾಯಿತಿ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪ್ರತ್ಯೇಕವಾಗಿ ನಿರ್ವಹಣೆ ಮಾಡುತ್ತಿದ್ದಾರೆ. ಕಂದಾಯ ಇಲಾಖೆಯು ನಿರ್ವಹಣೆ ಮಾಡುತ್ತಿರುವ ಹಿಂಚಗೇರಾ ಹಾಗೂ ಕೊಳ್ಳೂರು ಗ್ರಾಮಗಳ ಜನರಿಗೆ ಅದರಲ್ಲೂ ದಲಿತ ಸಮುದಾಯಕ್ಕೆ ಸೇರಿದವರಿಗೆ ಸಕಾಲಕ್ಕೆ ಆಹಾರ, ಕುಡಿಯುವ ನೀರು, ಮಕ್ಕಳಿಗೆ ಹಾಲು, ಬಿಸ್ಕಟ್, ಬಾಣಂತಿಯರಿಗೆ ಬಿಸಿ ನೀರು ನೀಡುತ್ತಿಲ್ಲ ಎಂದು ಗ್ರಾಮದಹರಿಜನ ವಾಡಾದ ಮಹಿಳೆಯರು ದೂರಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಸಂತ್ರಸ್ತ ಮಹಿಳೆ ಹುಲಿಗೆಮ್ಮ, ‘ನಾಲ್ಕು ದಿನಗಳ ಹಿಂದೆ ನೀರು ಜಾಸ್ತಿ ಬರುತ್ತಾ ಇದೆ ಎಂದು ಸಾಹೇಬರು ಬಂದು ಉಟ್ಟ ಬಟ್ಟೆಯಲ್ಲಿಯೇ ನಮ್ಮನ್ನು ಕರಕೊಂಡು ಬಂದರು. ಮನೆಯಲ್ಲಿಟ್ಟಿದ್ದ ಎಲ್ಲವೂ ನೀರಾಗ ಮುಳುಗಿ ಹೋದವು. ಏನಂದ್ರ ಏನೂ ಉಳಿದಿಲ್ಲ. ಇಲ್ಲಿಂದ ತಂದು ನಮ್ಮನ್ನು ಕುಂದರಿಸ್ಯಾರ. ಎರಡು ದಿನ ಅಂತೂ ಸರಿಯಾಗಿ ಊಟ ಕೊಡಲಿಲ್ಲ. ಮಕ್ಕಳಿಗೆ ಹಾಲು, ಬಿಸ್ಕಿಟ್‌ ಕೊಡಲಿಲ್ಲ' ಎಂದರು.

ಹುಲಿಗೆಮ್ಮ ಅವರ ಪಕ್ಕದಲ್ಲೇ ನಿಂತಿದ್ದ ಹಿಂಚವಾಡದ ಶ್ರೀದೇವಿ ಅವರೂ ಈ ಮಾತಿಗೆ ದನಿಗೂಡಿಸುತ್ತಾ, ‘ಎಲ್ಲಾನೂ ಕಳಕೊಂಡೇವ್ರಿ. ಒಂದಿಷ್ಟು ಟೈಮ್ ಕೊಟ್ಟಿದ್ರ ಹಾಸಿಗಿ ಹೊದಿಕೆ, ಇನ್ನೊಂದೆರಡು ಜೋಡು ಸೀರಿ ತಗೋತಿದ್ದೆವು. ಈಗ ನಾಲ್ಕು ದಿನಾ ಆತು. ಜಳಕ ಇಲ್ಲ, ಜಾಪತ್ರಿ ಇಲ್ಲ. ಇನ್ನೂ ಎಷ್ಟು ದಿನ ಹಿಂಗ ಬದುಕೂಣ್ರಿ. ಪ್ರತಿ ವರ್ಷಾನೂ ನೀರು ಬಂತು ಅಂದರ ಕೆಳ ಭಾಗದಲ್ಲಿರುವ ಹರಿಜನವಾಡಾದ ಮನಿಗಳು ಮುಳುಗ್ತಾವು’ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದೇನು ಎಂಬ ನಿರೀಕ್ಷೆಯಲ್ಲೇ ಕುಳಿತಿದ್ದ ಕೊಳ್ಳೂರು ಗ್ರಾಮದ ಗೌರಮ್ಮ, ಊರಾಗ ನೀರು ಬಂತು ಅಂತ ಮಕ್ಕಳು, ಮರಿಗೋಳ್ನ ಕರಕೊಂಡು ಬಂದೀವಿ. ಅವುಗಳಿಗೆ ಹಾಲು ಹೊಂದಸೋದು ದೊಡ್ಡ ಸಮಸ್ಯೆ ಆಗೈತ್ರಿ. ಇಲ್ಲಿ ಬರೋ ಸಾಹೇಬ್ರಿಗೂ ಹೇಳಿ ಸಾಕಾಗೇತ್ರಿ. ಎಲ್ಲ ನಮ್ಮ ಕರ್ಮ ಅಂತ ಸುಮ್ನ ಕೂತೀವಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT