ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರಣ್ಯ ಇಲಾಖೆ: ಡಿಆರ್‌ಎಫ್‌ಗಳ ಬಡ್ತಿಗೆ ಸಿದ್ಧತೆ; ಮುಂಬಡ್ತಿಗೆ ತರಾತುರಿ!

ನ್ಯಾಯಾಲಯದ ತಡೆಯಾಜ್ಞೆಯಿದ್ದರೂ ನಡೆಯುತ್ತಿದೆ ಪ್ರಕ್ರಿಯೆ
Last Updated 20 ಫೆಬ್ರುವರಿ 2021, 18:27 IST
ಅಕ್ಷರ ಗಾತ್ರ

ಬೆಂಗಳೂರು: ಉಪವಲಯ ಅರಣ್ಯಾಧಿಕಾರಿ ವೃಂದದ ರಾಜ್ಯಮಟ್ಟದ ಜೇಷ್ಠತಾ ಪಟ್ಟಿ ಇನ್ನೂ ಅಂತಿಮಗೊಂಡಿಲ್ಲ. ಜೊತೆಗೆ, ನ್ಯಾಯಾಲಯದ ತಡೆಯಾಜ್ಞೆಯಿದ್ದರೂ ಉಪವಲಯ ಅರಣ್ಯಾಧಿಕಾರಿ ಹುದ್ದೆಯಿಂದ (ಡಿಆರ್‌ಎಫ್‌) ವಲಯ ಅರಣ್ಯಾಧಿಕಾರಿ (ಆರ್‌ಎಫ್‌ಒ) ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆಯನ್ನು ಸದ್ದಿಲ್ಲದೆ ಆರಂಭಿಸಿದೆ ಅರಣ್ಯ ಇಲಾಖೆ.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) ನೇತೃತ್ವದ ಇಲಾಖಾ ಪದೋನ್ನತಿ ಸಮಿತಿ ಮುಂಬಡ್ತಿ ನೀಡುವ ಪ್ರಕ್ರಿಯೆ ಆರಂಭಿಸಿದೆ. 105 ಡಿಆರ್‌ಎಫ್‌ಗಳಿಗೆ ಬಡ್ತಿ ನೀಡುವ ಆದೇಶವನ್ನು ಸೋಮವಾರದಿಂದ (ಫೆ.22) ನೀಡಲು ಸಿದ್ಧತೆ ನಡೆದಿದೆ ಎಂದು ಇಲಾಖೆಯ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಅರಣ್ಯ ಇಲಾಖೆಯಿಂದ ಪ್ರಕಟಿಸಿದ್ದ ಆರ್‌ಎಫ್‌ಒ ಜೇಷ್ಠತಾ ಕರಡು ಪಟ್ಟಿಯಲ್ಲಿ ಸಾಕಷ್ಟು ನ್ಯೂನತೆಗಳಿವೆ ಎಂದು ಪರಿಶಿಷ್ಟ ಜಾತಿ, ಪಂಗಡದ ನೌಕರರ ಸಂಘಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಎಸ್‌ಸಿ, ಎಸ್‌ಟಿ ಸಮುದಾಯದ 83 ನೌಕರರು ಸೇರಿದಂತೆ 316 ನೌಕರರು ನ್ಯಾಯಯುತವಾಗಿ ಸಿಗಬೇಕಾದ ಸೌಲಭ್ಯದಿಂದ ವಂಚಿತರಾಗಿದ್ದಾರೆ ಎಂದು ಸಂಘಟನೆಗಳು ದೂರಿದ್ದವು.

ನಿವೃತ್ತಿ ಹೊಂದಿದ್ದರೂ ಸಹ ಮುಂಬಡ್ತಿಯಿಂದ ವಂಚಿತರಾದ ಹಿರಿಯ ನೌಕರರಿಗೆ ಬಡ್ತಿಯ ಅರ್ಹತಾ ದಿನಾಂಕ ನೀಡಿ, ಕಾಲ್ಪನಿಕ ವೇತನ ನಿಗದಿ ಪಡಿಸಬೇಕು ಮತ್ತು ಪಿಂಚಣಿಯನ್ನು ಮರು ನಿಗದಿ ಮಾಡಬೇಕು ಎಂದು1973ರ ಆರ್‌ಪಿಪಿ ಕಾಯ್ದೆ ಹೇಳುತ್ತದೆ. ಈ ಪ್ರಕ್ರಿಯೆಯಲ್ಲಿ ಆ ನಿಯಮ ಪಾಲನೆಯಾಗಿಲ್ಲ ಎಂದು ದೂರಲಾಗಿದೆ.

ಕರ್ನಾಟಕ ಆಡಳಿತಾತ್ಮಕ ನ್ಯಾಯಮಂಡಳಿ (ಕೆಎಟಿ) ಹಿಂದಿನ ತೀರ್ಪಿನ ಅನ್ವಯ, ವಲಯ ಅರಣ್ಯಾಧಿಕಾರಿಗಳ ಪೋಷಕ ವೃಂದವಾಗಿರುವ ವನಪಾಲಕ ಜೇಷ್ಠತಾ ಪಟ್ಟಿಯನ್ನು ರಾಜ್ಯಮಟ್ಟದಲ್ಲಿ ಸಂಯೋಜಿಸಿ ಅಂತಿಮ ಕರಡು ಪ್ರಕಟಿಸಬೇಕಾಗಿತ್ತು. ಆದರೆ, ರಾಜ್ಯಮಟ್ಟದಲ್ಲಿ ಜೇಷ್ಠತಾ ಪಟ್ಟಿ ಪ್ರಕಟಿಸಿದರೆ ತಪ್ಪುಗಳು ಗೊತ್ತಾಗುತ್ತವೆ ಎಂಬ ಕಾರಣದಿಂದ ವೃತ್ತಮಟ್ಟದಲ್ಲಿಯೇ ಸೇವಾ ಹಿರಿತನ ಪಟ್ಟಿ ಸಿದ್ಧಪಡಿಸಿ ಪ್ರಕಟಿಸಲಾಗಿದ್ದು, ತಮಗೆ ಬೇಕಾದವರಿಗೆ ಬಡ್ತಿ ನೀಡಿದ್ದಾರೆ ಎಂದು ಅರಣ್ಯ ಇಲಾಖೆಯ ಎಸ್‌ಸಿ, ಎಸ್‌ಟಿ ನೌಕರರ ಸಂಘ ಆರೋಪ ಮಾಡಿತ್ತು. ಇದಕ್ಕೆ ಪೂರಕವಾಗಿ ಕೆಎಟಿಯು 2020ರ ಡಿ.20ರಂದುಈ ಪ್ರಕ್ರಿಯೆಗೆ ತಡೆಯಾಜ್ಞೆಯನ್ನೂ ನೀಡಿತ್ತು.

ಆರೋಪಗಳ ನಂತರ, ಇಲಾಖೆಯ ವಿವಿಧ ವೃಂದಗಳ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಲು ಆಗಿನ ಪ್ರಧಾನಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅಜಯ್‌ ಮಿಶ್ರಾ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು. ಈ ಸಮಿತಿಯ ಶಿಫಾರಸ್ಸಿನಂತೆಯೇ ಜೇಷ್ಠತಾ ಪಟ್ಟಿ ಪ್ರಕಟಿಸಬೇಕು, ಅಲ್ಲಿಯವರೆಗೆ ಮುಂಬಡ್ತಿ ಪ್ರಕ್ರಿಯೆನಡೆಸಬಾರದು ಎಂದು ಹಿಂದಿನ ಅರಣ್ಯ ಸಚಿವ ಆನಂದ್‌ ಸಿಂಗ್‌ ಪಿಸಿಸಿಎಫ್ ಹಾಗೂ ಇಲಾಖೆಯ ವಿವಿಧ ವೃತ್ತಗಳ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸೂಚನೆ ನೀಡಿದ್ದರು.

‘ನ್ಯಾಯಾಲಯದ ತಡೆಯಾಜ್ಞೆ ಮೀರಿ, ಜೇಷ್ಠತಾ ಪಟ್ಟಿ ಅಂತಿಮಗೊಳ್ಳದೇ ಇದ್ದರೂ ಮುಂಬಡ್ತಿ ಪ್ರಕ್ರಿಯೆ ನಡೆಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ. ಪ್ರಕರಣವನ್ನು ಸರ್ಕಾರವು ಗಂಭೀರವಾಗಿ ಪರಿಗಣಿಸಬೇಕು. ಸ್ವತಂತ್ರ ಸಂಸ್ಥೆಯಿಂದ ತನಿಖೆ ನಡೆಸಬೇಕು’ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ ಕಲ್ಲಹಳ್ಳಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT