ಮಂಗಳವಾರ, ಅಕ್ಟೋಬರ್ 20, 2020
21 °C

ಅರಣ್ಯ ರಕ್ಷಕರ ನೇಮಕ ವಿಳಂಬ: ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮವು ನೆಡುತೋಪು ಅಧೀಕ್ಷಕರು, ಸಹಾಯಕ ನೆಡುತೋಪು ಅಧೀಕ್ಷಕರು ಹಾಗೂ ಅರಣ್ಯ ರಕ್ಷಕರು ಸೇರಿದಂತೆ 50 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಪ್ರಾರಂಭಿಸಿ, ನಾಲ್ಕು ವರ್ಷಗಳು ಪೂರ್ಣಗೊಂಡರೂ ಪ್ರಕ್ರಿಯೆ ಮುಗಿದಿಲ್ಲ ಎಂದು ಅಭ್ಯರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

‘ಈ ಹುದ್ದೆಗಳ ಭರ್ತಿಗೆ 2016ರಲ್ಲಿಯೇ ಅಧಿಸೂಚನೆ ಹೊರಡಿಸಲಾಗಿದೆ. 50 ಹುದ್ದೆಗಳಿಗೆ 10ಸಾವಿರಕ್ಕೂ ಹೆಚ್ಚು ಜನ ಅರ್ಜಿ ಸಲ್ಲಿಸಿದ್ದರು. ಅರ್ಜಿ ಸಲ್ಲಿಸಿದವರ ಪೈಕಿ ಹೆಚ್ಚು ಅಂಕ ಗಳಿಸಿದ 1,457 ಅಭ್ಯರ್ಥಿಗಳನ್ನು 1:20ರ ಅನುಪಾತದಲ್ಲಿ ದೈಹಿಕ ಸಾಮರ್ಥ್ಯ ಪರೀಕ್ಷೆ ಮತ್ತು ಲಿಖಿತ ಪರೀಕ್ಷೆಗೆ ಆಹ್ವಾನಿಸಿದ್ದಾರೆ. ಆದರೆ, ಪರೀಕ್ಷೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ’ ಎಂದು ಅಭ್ಯರ್ಥಿ ಶರಣಬಸಪ್ಪ ದೂರಿದರು.

‘ನಾಲ್ಕು ವರ್ಷಗಳಿಂದ ಒಂದಲ್ಲ ಒಂದು ನೆಪ ಹೇಳುತ್ತಾರೆ. ಅರಣ್ಯ ಅಭಿವೃದ್ಧಿ ನಿಗಮದ ಅಧಿಕಾರಿಗಳನ್ನು ಕೇಳಿದರೆ, ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಕೇಳಿ ಎನ್ನುತ್ತಾರೆ. ಅವರನ್ನು ಕೇಳಿದರೆ, ನಿಗಮದ ಅಧಿಕಾರಿಗಳೇ ಇದಕ್ಕೆ ಉತ್ತರ ನೀಡಬೇಕು ಎನ್ನುತ್ತಾರೆ’ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. 

‘ಪರೀಕ್ಷೆಯನ್ನು ಪದೇ ಪದೇ ಮುಂದೂಡಲಾಗುತ್ತಿದೆ. ಆದರೆ, ಕಾರಣ ಮಾತ್ರ ತಿಳಿಸುತ್ತಿಲ್ಲ. ಈ ಹುದ್ದೆಯ ನಿರೀಕ್ಷೆಯಲ್ಲಿ ಬೇರೆ ಪರೀಕ್ಷೆಗಳತ್ತಲೂ ಗಮನ ನೀಡಲು ಸಾಧ್ಯವಾಗುತ್ತಿಲ್ಲ. ವಯೋಮಿತಿ ಮೀರುವ ಆತಂಕದಲ್ಲಿದ್ದೇವೆ’ ಎಂದು ಮತ್ತೊಬ್ಬ ಅಭ್ಯರ್ಥಿ ಹೇಳಿದರು. 

‘ಏಜೆನ್ಸಿಯೊಂದಕ್ಕೆ ಈ ಪ್ರಕ್ರಿಯೆ ನಡೆಸುವ ಜವಾಬ್ದಾರಿ ನೀಡಲಾಗಿತ್ತು. ಆದರೆ, ಕೆಲವು ಲೋಪದೋಷಗಳಾಗಿದ್ದಕ್ಕೆ ಪರೀಕ್ಷೆ ಮುಂದೂಡಲಾಗಿತ್ತು. ಮಾರ್ಚ್‌–ಏಪ್ರಿಲ್‌ನಲ್ಲಿ ಪರೀಕ್ಷೆ ನಡೆಸುವ ಉದ್ದೇಶವಿತ್ತು. ಆದರೆ ಕೊರೊನಾ ಸೋಂಕಿನ ಕಾರಣದಿಂದ ಮತ್ತೆ ಮುಂದೂಡಲಾಯಿತು. ಈಗ ಸರ್ಕಾರ ನೇಮಕಾತಿ ಸದ್ಯಕ್ಕೆ ಬೇಡ ಎಂದು ಹೇಳಿದೆ. ಆದರೂ, ಈ ಬಗ್ಗೆ ಒಂದೆರಡು ವಾರಗಳಲ್ಲಿ ಸಭೆ ನಡೆಸಿ, ತೀರ್ಮಾನ ಕೈಗೊಳ್ಳಲಾಗುತ್ತದೆ’ ಎಂದು ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಧು ಶರ್ಮಾ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು