ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಗ–3 | ಕಂದಾಯ ದಾಖಲೆಗಳಲ್ಲಿ ಎಷ್ಟೊಂದು ಲೋಪಗಳು ಅಬ್ಬಬ್ಬಾ...

ಕರ್ನಾಟಕದಲ್ಲಿ ಭೂ ದಾಖಲೆಗಳು ಹೇಗೆ ರಚನೆಯಾದವು ಗೊತ್ತಾ?
Last Updated 26 ಆಗಸ್ಟ್ 2022, 10:02 IST
ಅಕ್ಷರ ಗಾತ್ರ

ಕರ್ನಾಟಕದಲ್ಲಿ ಭೂ ದಾಖಲೆಗಳು ಬಂದ ಇತಿಹಾಸ

ಒಡೆಯರ ದೂರದೃಷ್ಟಿ
ಕರ್ನಾಟಕದಲ್ಲಿ ವ್ಯವಸ್ಥಿತವಾಗಿರುವ ಕಂದಾಯ ದಾಖಲೆಗಳು ದೇಶಕ್ಕೆ ಮಾದರಿಯಾಗಿವೆ. ಅದರಲ್ಲೂ ಬೆಂಗಳೂರು ನಗರದ ಭೂ ಕಂದಾಯ ದಾಖಲೆಗಳು ಕನ್ನಡಿ ಹಿಡಿದಂತೆ ಇದೆ. ಇದಕ್ಕೆ ಪ್ರಮುಖ ಕಾರಣ ಮೈಸೂರು ಸಂಸ್ಥಾನದ ಒಡೆಯರು. ಅವರ ಅವಧಿಯಲ್ಲಿ ಊರಿಗೊಂದು ಕೆರೆ-ಕುಂಟೆ-ಅರಣ್ಯ ಮತ್ತು ಎರಡರಿಂದ ಮೂರು ಸರ್ವೆ ನಂಬರಿನಲ್ಲಿ ದನಗಳು ಮೇಯಲು ಗೋಮಾಳಗಳು, 2000-3000 ಎಕರೆಯಷ್ಟು ದನಗಳು ಮೇಯಲು ಅಮೃತಮಹಲ್ ಕಾವಲ್‌ಗಳ ಮೀಸಲು, ಮುಂತಾದ ಜನಪಯೋಗಿ ಯೋಜನೆಗಳನ್ನು ಜಾರಿಗೆ ತಂದರು.

ಬ್ರಿಟಿಷ್ ಕಮಿಷನರ್‌ ಬೌರಿಂಗ್‌ ಅವರು ಮೈಸೂರು ಪ್ರಾಂತ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ದೇಶದಲ್ಲಿ ಪ್ರಪ್ರಥಮವಾಗಿ ಸರ್ವೆ ಕಾರ್ಯವನ್ನು ಕೈಗೊಳ್ಳಲು ಬ್ರಿಟಿಷ್ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಮಂಡಿಸಿ ಕಾರ್ಯರೂಪಕ್ಕೆ ತಂದರು. ಮೇಜರ್ ಡಬ್ಲ್ಯೂ.ಸಿ. ಆ್ಯಂಡರ್‌ಸನ್‌ರವರು ಮದ್ರಾಸ್ ವಿಭಾಗದಲ್ಲಿ ಸರ್ವೆ ಕಾರ್ಯವನ್ನು ಪೂರ್ಣಗೊಳಿಸಿದ ನಂತರ ಮೈಸೂರು ವಿಭಾಗದ ಸರ್ವೆ ಸೆಟಲ್‌ಮೆಂಟ್‌ನ ಮೊದಲ ಕಮಿಷನರರಾದರು.

ಭೂ ಸಮೀಕ್ಷೆಯ ಹಂತಗಳು ಹೀಗಿವೆ
1) 1869ರಲ್ಲಿ ಬ್ರಿಟಿಷರು ಭಾರತದೇಶದಲ್ಲಿ ಪ್ರಪ್ರಥಮವಾಗಿ ರೈತರು ಅನುಭವದಲ್ಲಿದ್ದ ಪ್ರತಿಯೊಂದು ಜಮೀನುಗಳಿಗೂ ಒಂದು ಸರ್ವೆ ನಂಬರನ್ನು ನೀಡಿ, ಪ್ರತಿಯೊಂದು ಸರ್ವೆ ನಂಬರಿಗೂ ಚಕ್ಕುಬಂದಿ, ಉದ್ದ ಅಗಲ, ಅಳತೆ ಬರುವ, ಗಣಿತದ ನಕ್ಷೆಯನ್ನು ಅಭಿವೃದ್ಧಿಪಡಿಸಿದರು. ಪ್ರತಿ ನಕ್ಷೆಯಲ್ಲೂ ಅನುಭವದಂತೆ ವಿಸ್ತೀರ್ಣ ಖರಾಬು, ಹಳ್ಳ ಕೊಳ್ಳ, ದಾರಿ, ಅರಣ್ಯ, ಸರಕಾರದ ‘ಬಿ’ ಖರಾಬು, ಮುಂತಾದವುಗಳನ್ನು ನಮೂದಿಸಿ ಪ್ರತಿಯೊಂದು ಸರ್ವೆ ನಂಬರ್‌ಗೂ ಮೂಲ ಟಿಪ್ಪಣಿಯನ್ನು ಹೊರಡಿಸಿದರು.

ಹರಿಹರದಲ್ಲಿ ಸರ್ವೇ ಆರಂಭ: 1863 ರಲ್ಲಿ ಲೆಫ್ಟಿನೆಂಟ್‌ ಕರ್ನಲ್‌ ಜೆ.ಆರ್‌. ಗ್ರ್ಯಾಂಟ್‌ ಅವರು, ಅಂದಿನ ಮೈಸೂರು ಪ್ರಾಂತ್ಯದ ಕೊನೆಯ ತಾಲ್ಲೂಕು ಆದ ಹರಿಹರದಲ್ಲಿ ಪ್ರಪ್ರಥಮವಾಗಿ ಸರ್ವೆ ಕಾರ್ಯ ಪ್ರಾರಂಭಿಸಿದರು. ಏಕೆಂದರೆ ಅಲ್ಲಿಯವರೆಗೆ ಬಾಂಬೆ-ಕರ್ನಾಟಕ ಪ್ರಾಂತ್ಯದಲ್ಲಿ ಸರ್ವೆ ಕಾರ್ಯವು ಪ್ರಗತಿಯಲ್ಲಿತ್ತು. ಬಾಂಬೆ-ಕರ್ನಾಟಕ ಪ್ರಾಂತ್ಯದ ಕೊನೆಯ ಮತ್ತು ಮೈಸೂರು ಪ್ರಾಂತ್ಯದ ಪ್ರಥಮ ತಾಲ್ಲೂಕು ಆದ ಹರಿಹರದಲ್ಲಿ ಪ್ರಪ್ರಥಮ ಸರ್ವೆ ಕಾರ್ಯವು ಪ್ರಾರಂಭವಾಯಿತು.

2) 1860-1890 ಅನ್ನು ಒರಿಜಿನಲ್ ಸರ್ವೆ ಕಾರ್ಯ (ಮೂಲ ಸಮೀಕ್ಷೆ) ಎಂದು ಕರೆಯಲಾಗುತ್ತದೆ. ಇದು ಅತ್ಯಂತ ಪುರಾತನ ಸರ್ವೆಯಾಗಿದ್ದು, ಪ್ರಪ್ರಥಮ ಬಾರಿಗೆ ಭೂಮಿಯ ಮೇಲಿನ ಭೌಗೋಳಿಕ ಲಕ್ಷಣದಂತೆ ಸರ್ವೆ ಕೈಗೊಳ್ಳಲಾಯಿತು. ಮುಂದೆ 1895ರಲ್ಲಿ ಮೈಸೂರಿನ ಪ್ರಾಂತ್ಯದ ನಂಜನಗೂಡು ತಾಲ್ಲೂಕಿನಲ್ಲಿ ಸರ್ವೆ ಕಾರ್ಯವು ಮುಕ್ತಾಯಗೊಂಡಿತು.

3) 1900ರಲ್ಲಿ ಮತ್ತೊಮ್ಮೆ ಮರು ಸರ್ವೇ ಕಾರ್ಯವನ್ನು ಬ್ರಿಟಿಷ್ ಸರ್ಕಾರ ಕೈಗೊಂಡಿತು. ಅಂದರೆ ಪ್ರತಿ 30 ವರ್ಷಗಳ ಅವಧಿಯಲ್ಲಿ ‘ಮರು ಭೂಮಾಪನಾ’ ಕಾರ್ಯವನ್ನು ಕೈಗೊಂಡಲ್ಲಿ ಭೂ ಮೇಲ್ಮೈ ಲಕ್ಷಣಗಳು ಗಮನಾರ್ಹವಾಗಿ ಬದಲಾವಣೆಯಾಗುವುದು ಹಾಗೂ ಮನುಷ್ಯನ ಒಂದು ತಲೆಮಾರಿನ ಜೀವನದ ಆರ್ಥಿಕ ಅವಧಿಯು ಕೂಡ ಆಗಿರುತ್ತದೆ ಎಂಬುವ ವೈಜ್ಞಾನಿಕ ಆಧಾರ ಇದಕ್ಕೆ ಕಾರಣ.

ಎರಡನೇ ಬಾರಿಗೆ ಮರು ಮಾಪನ ಕಾರ್ಯವನ್ನು ಬ್ರಿಟಿಷರು ಮತ್ತು ಆಯಾ ಪ್ರಾಂತ್ಯದ ರಾಜ-ಮಹಾರಾಜರು ಮತ್ತು ಸಾಮಂತರ ಜೊತೆಗೂಡಿ ಕೈಗೊಂಡರು. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ, ಬ್ರಿಟಿಷರ ಆಡಳಿತದಲ್ಲಿ ಪ್ರಮುಖವಾದ ಆದಾಯವು ಭೂಕಂದಾಯದಿಂದ ಬರುತ್ತಿತ್ತು. ಅಲ್ಲದೆ, ಪ್ರತಿ ಮೂವತ್ತು ವರ್ಷಕ್ಕೊಮ್ಮೆ ಸರ್ವೆ ಕಾರ್ಯ ಮಾಡಿದ್ದಲ್ಲಿ ಬದಲಾದ ಕಾಲಮಾನಕ್ಕೆ ತಕ್ಕಂತೆ ಕಂದಾಯವನ್ನು ವಿಧಿಸುವುದರಿಂದ ಹೆಚ್ಚಿನ ಆದಾಯವಾಗುತ್ತದೆ ಮತ್ತು ತರಹೇವಾರಿಯಾಗಿ ಭಾರತದ ಉಪಖಂಡದ ಉದ್ದಗಲಕ್ಕೂ ಸಂಗ್ರಹಿಸುತ್ತಿದ್ದ ಅವೈಜ್ಞಾನಿಕ ಕಂದಾಯ ಸಂಗ್ರಹಣೆಯನ್ನು ರದ್ದು ಮಾಡುವ ಉದ್ದೇಶವು ಕೂಡ ಬ್ರಿಟಿಷ್‌ರ ಆಡಳಿತದ ಭಾಗವಾಗಿತ್ತು.

ಹರೀಶ್ ನಾಯ್ಕ
ಹರೀಶ್ ನಾಯ್ಕ

4) 1900ರಲ್ಲಿ ಜಮೀನುಗಳ ಬಾಂದುಗುರುತು, ಮರು ಅಳತೆ, ನೀರಾವರಿ ಪ್ರದೇಶಗಳು, ಮಳೆ ಪ್ರದೇಶಗಳು, ಅಚ್ಚುಕಟ್ಟು ಪ್ರದೇಶಗಳು, ಆರ್ಥಿಕ ಬೆಳೆಗಳು ಬೆಳೆಯುವ ಪ್ರದೇಶ ಮುಂತಾದವುಗಳ ಮರು ಸಮೀಕ್ಷೆ ಆಯಿತು. ಸ್ವಾತಂತ್ರ್ಯಪೂರ್ವದಲ್ಲಿ ಅಂದರೆ, 3ನೇ ಬಾರಿಗೆ ಬ್ರಿಟಿಷರು ಮತ್ತೆ ಮರು ಸರ್ವೆ ಮಾಡಿ 30 ವರ್ಷಗಳು ಆಗಿದ್ದರಿಂದ 1939ರಲ್ಲಿ ‘ರಿವಿಜನ್ ಸೆಟಲ್‌ಮೆಂಟ್’ ಎಂಬ ಸರ್ವೆಯನ್ನು ಜಾರಿಗೆ ತರಲಾಯಿತು. 1900-1940ರ ಮಧ್ಯೆ ಹರಾಜು ಹಾಕಲಾದ ಸರ್ಕಾರಿ ಜಮೀನುಗಳು, ವ್ಯವಸಾಯದ ಭಾಗವಾದ ಖುಷ್ಕಿ, ಭಾಗಾಯ್ತು, ತರಿ, ಪ್ಲಾಂಟೆಷನ್ ಮುಂತಾದ ಬೆಳೆಗಳ ಅನುಸಾರ ಜಮೀನಿನ ಅಳತೆಯನ್ನು ಮಾಡಿ ಕಂದಾಯವನ್ನು ನಿಗದಿಪಡಿಸಲಾಯಿತು.

5) 1904ರಲ್ಲಿ ಪ್ರತಿ ಹಳ್ಳಿಗೊಂದು ಗ್ರಾಮ ನಕ್ಷೆ (Village Map) ಯನ್ನು ತಯಾರಿಸಲಾಯಿತು. ಈ ನಕ್ಷೆಯಲ್ಲಿ ಪ್ರತಿ ಗ್ರಾಮದಲ್ಲಿ ಬರುವ ಜನವಸತಿ ಪ್ರದೇಶ, ವ್ಯವಸಾಯದ ಜಮೀನುಗಳು, ಬಂಜರು, ಅರಣ್ಯ, ಹಳ್ಳ, ಕಟ್ಟೆ, ಕುಂಟೆ ಮತ್ತು ಕೆರೆ ಪ್ರದೇಶಗಳಿಗೆ ಒಂದೊಂದು ರೀತಿಯ ಚಿಹ್ನೆಯನ್ನು ನೀಡಿ ಒಂದೇ ನಕ್ಷೆಯಲ್ಲಿ ಸಮಗ್ರ ಮಾಹಿತಿಯನ್ನು ಸೃಜನಿಸಲಾಯಿತು. ಇಂದಿಗೂ ಕೂಡ ಜನ ಸಾಮಾನ್ಯರಿಗೆ ಚಿರಪರಿಚಿತವಾದ ಅತ್ಯುತ್ತಮ ದಾಖಲೆಯಾದ ‘ಗ್ರಾಮ ನಕ್ಷೆ’ ಜನಮಾನಸದಲ್ಲಿ ಬೇರೂರಿದೆ. ಆಯಾ ಗ್ರಾಮ, ಹೋಬಳಿ, ತಾಲ್ಲೂಕು, ಜಿಲ್ಲೆ ಮತ್ತು ರಾಜ್ಯ ಮತ್ತು ರಾಷ್ಟ್ರದ ಸಮಗ್ರ ನಕ್ಷೆಯನ್ನು ರಚಿಸಲು ಗ್ರಾಮ ನಕ್ಷೆಯು ನೆರವಾಯಿತು. ಇಂದಿಗೂ ಕೂಡ ಇದು ಚರಿತ್ರಾರ್ಹ ದಾಖಲೆಯಾಗಿದೆ.

6) ಕರ್ದಾ ದಾಖಲೆ: 1930ರ ಆಸುಪಾಸಿನಲ್ಲಿ ಮತ್ತೊಮ್ಮೆ ಪ್ರತಿ ಗ್ರಾಮಗಳ ಸರ್ವೆ ಮಾಡಿ ಯಾರು ಆ ಜಮೀನನ್ನು ಅನುಭೋಗಿಸುತ್ತಿದ್ದರೋ ಅವರಿಗೆ ಭೂಮಿಯ ಹಕ್ಕನ್ನು ನೀಡಲಾಯಿತು. ಏಕೆಂದರೆ ಈ ಕಾಲಘಟ್ಟದಲ್ಲಿ ಪತ್ರಗಳ ದಸ್ತಾವೇಜುಗಳ ನೋಂದಣಿ ಕಾರ್ಯವಾದ, ಕ್ರಯಪತ್ರ, ದಾನಪತ್ರ, ವಿಭಾಗಪತ್ರ, ಬಿಡುಗಡೆ ಪತ್ರ, ಮಾರ್ಟ್‌ಗೇಜ್‌ ಮುಂತಾದವುಗಳು ಇನ್ನೂ ಚಾಲ್ತಿಯಲ್ಲಿ ಇರಲಿಲ್ಲ.

ಕರ್ದಾ ದಾಖಲೆಯಲ್ಲಿ ಹಿಂದಿನ ಸರ್ವೆ ನಂಬರ್, ಚಾಲ್ತಾ ಸರ್ವೆ ನಂಬರ್, ಅನುಭವದ ವಿಸ್ತೀರ್ಣ, ಖರಾಬು ವಿಸ್ತೀರ್ಣ, ಸರ್ಕಾರಿ ನಿಬಂಧನೆಗಳು ಮತ್ತು ಜಮೀನಿನ ನಕ್ಷೆಯನ್ನು ಕೂಡ ನಮೂದಿಸಲಾಯಿತು. 1930ರಿಂದ 1960ರವರೆಗೆ ಈ ದಾಖಲೆ ಒಂದು ಉತ್ಕೃಷ್ಟ ದಾಖಲೆಯಾಯಿತು. ಇಂದಿಗೂ ಕೂಡ ಕರ್ದಾ ದಾಖಲೆಯು ಚಾಲ್ತಿಯಲ್ಲಿದ್ದು, ರೀ-ಸರ್ವೆ ಕಾಲದಲ್ಲಿ ಕರ್ದಾದಲ್ಲಿ ಜಮೀನಿನ ಭೌಗೋಳಿಕ ಹಿನ್ನೆಲೆಯು ಬದಲಾಗಿದ್ದಲ್ಲಿ ಅದು ಕೂಡಾ ನಮೂದು ಆಗಿರುತ್ತದೆ.

7) 1930ರಿಂದ 1960ರವರೆಗಿನ ಸ್ವಾತಂತ್ರ್ಯಪೂರ್ವ ಮತ್ತು ಸ್ವತಂತ್ರ ನಂತರದಲ್ಲಿ ಮತ್ತು 2ನೇ ಮಹಾಯುದ್ದದ ಸಂದರ್ಭದಲ್ಲಿ ಮತ್ತು ದೇಶಾದ್ಯಂತ ಅಧಿಕವಾಗಿದ್ದ ಬಡತನ, ಹಸಿವು, ಅತಿವೃಷ್ಟಿ ಅನಾವೃಷ್ಟಿ ಸಾಂಕ್ರಾಮಿಕ ರೋಗಗಳಾದ ಪ್ಲೇಗ್, ಕಾಲರಾ, ದಡಾರ, ಮುಂತಾದ ರೋಗಗಳಿಂದ ಭೂಮಿಯ ಉಳುಮೆ ಮತ್ತು ವ್ಯವಸಾಯ ಮಾಡಲು ಸಾರ್ವಜನಿಕರಿಗೆ ಅತ್ಯಂತ ಕಷ್ಟದಾಯಕವಾಯಿತು. ಸಾಂಕ್ರಾಮಿಕ ರೋಗಗಳ ಹಾವಳಿ ಹೆಚ್ಚಾಗಿದ್ದರಿಂದ ವಲಸೆ ಪ್ರವೃತ್ತಿಯು ಯಥೇಚ್ಚವಾಗಿತ್ತು. ಆಹಾರ ಧಾನ್ಯಗಳು ಮತ್ತು ಬೇಳೆಕಾಳುಗಳ ಉತ್ಪಾದನೆಯೂ ಇಳಿಮುಖವಾಗಿತ್ತು.

ಆದುದರಿಂದ ಸರ್ಕಾರದ ಕೃಷಿ ಸುಧಾರಣಾ ಕಾರ್ಯಕ್ರಮಗಳ ಅಡಿಯಲ್ಲಿ ಲಭ್ಯವಿದ್ದ ಕೋಟ್ಯಂತರ ಎಕರೆ ಸರ್ಕಾರಿ ಜಮೀನುಗಳನ್ನು ಸ್ವಾತಂತ್ರ ನಂತರ ‘ಹೆಚ್ಚು ಆಹಾರ ಬೆಳೆಯುವ’ ಯೋಜನೆಯಡಿಯಲ್ಲಿ ಹರಾಜು ಮತ್ತು ಮಂಜೂರು ಮಾಡಲಾಯಿತು. ಈ ಯೋಜನೆಯಿಂದ ದೇಶದ ಆಹಾರ ಭದ್ರತೆಗೆ ಪ್ರಪ್ರಥಮವಾಗಿ ಭದ್ರ ಬುನಾದಿ ಹಾಕಿಕೊಟ್ಟಂತಾಯಿತು. ನಂತರ ಬಂದ ಪಂಚವಾರ್ಷಿಕ ಯೋಜನೆಗಳಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೂ ಕೃಷಿಗೆ ಸಂಬಂಧಿಸಿದಂತೆ ಹಲವಾರು ಭೂಸುಧಾರಣಾ ಮತ್ತು ಭೂಮಂಜೂರಾತಿ ಯೋಜನೆಗಳನ್ನು ಜಾರಿಗೆ ತಂದಿದ್ದರಿಂದ ಶೇ 65ರಷ್ಟು ಕುಟುಂಬಗಳು ಕೃಷಿ ಮತ್ತು ಪಶು ಸಂಪತ್ತಿನ ಅವಲಂಬನೆಯಲ್ಲಿ ಜೀವನ ನಿರ್ವಹಣೆ ಮಾಡುವಂತಾಯಿತು. ಆದರೆ, ಅಂದು ಕೇವಲ ಭೂಸುಧಾರಣೆ ಮತ್ತು ಭೂಮಂಜೂರಾತಿಗೆ ಪ್ರಾಮುಖ್ಯತೆ ನೀಡಲಾಯಿತು. ಭೂದಾಖಲೆಗಳ ಸರಳೀಕರಣ ಮತ್ತು ಕಾಲೋಚಿತ ಕ್ರಮಗಳನ್ನು ಸಮರ್ಪಕವಾಗಿ ಕೈಗೊಳ್ಳದೆ ಇದ್ದುದರಿಂದ ಮತ್ತು ಜನ ಸಾಮಾನ್ಯರಲ್ಲಿನ ಮಾಹಿತಿ ಕೊರತೆಯಿಂದ ಭೂದಾಖಲೆಗಳು ಕಾಲಕಾಲಕ್ಕೆ ಅಪ್‌ಡೇಟ್‌ ಆಗದಿರುವುದು ಕಂಡುಬರುತ್ತದೆ.

ಅಲ್ಲದೇ ಭಾರತ ದೇಶದಲ್ಲಿ ಅವಿಭಕ್ತ ಕುಟುಂಬಗಳು ಒಡೆದು ಭಾಗಗಳಾಗಿದ್ದರಿಂದ ಕೃಷಿ ಜಮೀನುಗಳು ಕೇವಲ ಅನುಭವದಂತೆ ಭಾಗ ವಿಭಾಗಗಳಾಗಿ ಬದಲಾಗಿದ್ದು, ಕಂದಾಯ ದಾಖಲೆಗಳಲ್ಲಿ ಅಪ್‌ಡೇಟ್‌ ಆಗದೇ ಇರುವುದೂ ಇವೆ.

ಐಎಲ್ ಮತ್ತು ಆರ್‌ಆರ್: 1950ರಿಂದ 1970ರವರೆಗೆ ಇದ್ದ ದಾಖಲೆಗಳು ಅತ್ಯುತ್ತಮ ಕಂದಾಯ ದಾಖಲೆಯಾಗಿರುತ್ತದೆ. ಈ ದಾಖಲೆಯಲ್ಲಿ ರೈತರ ಹೆಸರು, ಅನುಭವದ ವಿಸ್ತೀರ್ಣ, ಮಂಜೂರಾತಿಯ ವಿಧ, ಬೆಳೆಯ ರೀತಿ ಮುಂತಾದವುಗಳನ್ನು ಭೂಮಾಹಿತಿ ಪಟ್ಟಿ (Index of Land) ಮತ್ತು ಹಕ್ಕು ಪತ್ರದ (Record of Rights) ರೂಪಕ್ಕೆತರಲಾಯಿತು.

8) ಮರು ವರ್ಗೀಕರಣ ಸಮೀಕ್ಷೆ (ರಿಕ್ಲಾಸಿಫಿಕೆಶನ್ ಸರ್ವೆ):ಮರು ವರ್ಗೀಕರಣ ಸಮೀಕ್ಷೆಯನ್ನು 1960ರಿಂದ 1965ರಲ್ಲಿ ಮೂವತ್ತು ವರ್ಷಗಳ ನಂತರ ಕೈಗೊಳ್ಳಲಾಯಿತು. ಇದೆ ಕೊನೆಯ ಸಮೀಕ್ಷೆಯಾಗಿದೆ. ಮುಂದೆ 55 ವರ್ಷಗಳಾದರು ಮರು ಸರ್ವೆಯಾಗಿಲ್ಲ.ಮರು ವರ್ಗೀಕರಣ ಸಮೀಕ್ಷೆ ಸಮಯದಲ್ಲಿ ರೀ-ಸರ್ವೆ ನಂಬರ್‌ ಎಂದು ಉಪ ಹೊಸ ನಂಬರ್‌ಗಳನ್ನು ನೀಡಲಾಯಿತು. ಅಂದು ಅನುಭವದಲ್ಲಿ ಇದ್ದ ರೈತನಹಕ್ಕಿನ ವಿಸ್ತೀರ್ಣ, ಕೃಷಿ ತರಹೆ, ಹಸನಾದ ಜಮೀನು ಮತ್ತು ಸರ್ಕರಿ ಖರಾಬಿನ ವಿವರಗಳನ್ನು ನಮೂದಿಸಲಾಯಿತು. ಈ ಹಿಂದೆ ಖರಾಬು ಜಮೀನು ಒಕ್ಕಲುತನ ಮಾಡಿ ಹಸನಾಗಿದ್ದಲ್ಲಿ ರೈತನ ಹೆಸರಿಗೆ ಐನು ಜಮೀನು ಮಾಡಿ ಹಕ್ಕು ನೀಡುವುದು, ಅಲ್ಲದೆ ಅಭಿವೃದ್ಧಿ ಹೊಂದಿದ ರಸ್ತೆ-ಹಳ್ಳ-ಅರಣ್ಯ-ಕಲ್ಲು ಬಂಡೆ-ಕಲ್ಲುಮರಟಿ, ಖನಿಜ ಪ್ರದೇಶಗಳು ಮುಂತಾದವುಗಳನ್ನು ಅಳತೆ ಮಾಡಿ ಪ್ರತಿಯೊಂದು ಸರ್ವೆನಂಬರಗೂ ಬಾಂದು ಕಲ್ಲು ನೆಡಲಾಯಿತು. ಅಲ್ಲದೆ, ಅಂದು ನೆಟ್ಟ ಗುರುತಿನ ಕಂಬಗಳು ಇಂದಿಗೂ ಕೂಡ ಶಿಲಾ ಶಾಸನದಂತೆ ಗ್ರಾಮಂತರ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತದೆ.

ಅದ್ಭುತ ಮತ್ತು ವಿಶೇಷವಾಗಿ ಗಮನಿಸಬೇಕಾದ ವಿಷಯವೆಂದರೆ ಇಂದಿಗೂ ಗೂಗಲ್‌ಮ್ಯಾಪ್‌ನಲ್ಲಿ, 1904ರ ಗ್ರಾಮ ನಕಾಶೆಯನ್ನು ಸೂಪರ್ ಇಂಪೋಸ್‌ ಮಾಡಿದಾಗ ಅಂದು ಗುರುತಿಸಲಾದ ವಿಸ್ತೀರ್ಣ ಕಿಲೋ ಮೀಟರ್‌ ಮತ್ತು ಹೆಕ್ಟೇರ್‌ ವಿಸ್ತಿರ್ಣಗಳು ಒಂದು ಗುಲಗಂಜಿಯಷ್ಟೂ ಬದಲಾವಣೆಯಾಗಿರುವುದಿಲ್ಲ. ನೋವಿನ ಸಂಗತಿ ಎಂದರೆ ಅಂದು ಸರ್ವೆಗೆಂದು ಹೋದ ಎಷ್ಟೋ ಜನ ಕಂದಾಯ ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸಾಂಕ್ರಾಮಿಕ ರೋಗಗಳಿಗೆ ಮತ್ತು ಪ್ರಕೃತಿ ವಿಕೋಪಗಳಲ್ಲಿ ಯುದ್ಧದ ಮಾದರಿಯಲ್ಲಿ ಮರಣಹೊಂದಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ.

1965 ರಿಂದ 2000 ರವರೆಗಿನ ಕೈಬರಹದ ಪಹಣಿಗಳು ಮತ್ತು ಮ್ಯುಟೇಷನ್ ದಾಖಲೆಗಳು: ಪಹಣಿ ಮತ್ತು ಮ್ಯುಟೇಷನ್ ದಾಖಲೆಗಳು ಸುಮಾರು 35 ವರ್ಷಗಳ ಕಾಲ ಜಾಲ್ತಿಯಲ್ಲಿದ್ದವು. ಅಂದಿನ ಶ್ಯಾನುಭೋಗರು (ಮೈಸೂರಿನ ಪ್ರಾಂತ್ಯದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು) ನಂತರ ನೇಮಕಗೊಂಡ ಗ್ರಾಮಲೆಕ್ಕಗರು/ ರಾಜಸ್ವ ನೀರಿಕ್ಷಕರು ಕಂದಾಯ ದಾಖಲೆಗಳಾದ ಪಹಣಿ ಮತ್ತು ಮ್ಯೂಟೇಶನ್ ದಾಖಲೆಗಳನ್ನು ಕೈಬರಹದಲ್ಲಿ ಬರೆದು ತಮ್ಮ ಕಛೇರಿಯಲ್ಲಿ ಸಂರಕ್ಷಿಸುತ್ತಿದ್ದರು ಮತ್ತು ಪ್ರತಿ ವರ್ಷ ಜಮಾಬಂಧಿ ಮತ್ತು ಹಜೂರು ಜಮಾಬಂಧಿ ಕಾಲದಲ್ಲಿ ಹಿರಿಯ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದರು.

ಹೀಗೆ ನಾವು ಇಂದು ನೋಡುತ್ತಿರುವ ಭೂ ದಾಖಲೆಗಳು, ಅಂಗೈ ತುದಿಯಲ್ಲಿರುವ ತಂತ್ರಾಂಶಗಳು ಇವೆಲ್ಲವುಗಳ ಹಿಂದೆ ನೂರಾರು ಪರಿಣತರ, ಅಸಂಖ್ಯ ಸಿಬ್ಬಂದಿಯ, ಗ್ರಾಮ ಲೆಕ್ಕಿಗರ, ಅಧಿಕಾರಿಗಳ ಶ್ರಮವಿದೆ. ಆ ಇತಿಹಾಸವನ್ನು ನೆನಪಿಸುವ ಪುಟ್ಟ ಪ್ರಯತ್ನವಷ್ಟೇ ಇದು.

(ಮುಗಿಯಿತು)

ಲೇಖಕರು: ಕಾರ್ಯದರ್ಶಿ, ಕರ್ನಾಟಕ ಆಡಳಿತ ಸೇವೆ ಅಧಿಕಾರಿಗಳ ಸಂಘ ಮತ್ತುವಿಶೇಷ ಭೂಸ್ವಾಧೀನಾಧಿಕಾರಿ, ಡಾ.ಕೆ.ಶಿವರಾಮ ಕಾರಂತ ಬಡಾವಣೆ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT