ಶನಿವಾರ, ಸೆಪ್ಟೆಂಬರ್ 18, 2021
24 °C
ಬಿಜೆಪಿ ಕಾರ್ಯಕರ್ತರ ನಡುವೆ ಚರ್ಚೆಗೆ ಗ್ರಾಸವಾದ ಘಟನೆ

ಆರ್‌.ಅಶೋಕ – ವಿ.ಸೋಮಣ್ಣ ಏಕವಚನದಲ್ಲಿಯೇ ಪರಸ್ಪರ ಬೈಯ್ದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟ ಸೇರುವ ಪ್ರಯತ್ನದಲ್ಲಿ ಮಾಜಿ ಸಚಿವರಾದ ಆರ್‌. ಅಶೋಕ ಮತ್ತು ವಿ. ಸೋಮಣ್ಣ ಏಕವಚನದಲ್ಲಿ ಜಗಳವಾಡಿಕೊಂಡಿರುವ ಸಂಗತಿ ಬಿಜೆಪಿ ಮುಖಂಡರ ನಡುವೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ತಮ್ಮನ್ನು ಕರೆಯದೇ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಮಾಡಿದ ಅಶೋಕ ಅವರ ನಡೆಯನ್ನು ಸೋಮಣ್ಣ ಅವರು ಪ್ರಶ್ನಿಸಿದ್ದೇ ಜಗಳಕ್ಕೆ ಕಾರಣ ಎನ್ನಲಾಗಿದೆ. ಮೊಬೈಲ್‌ ಮಾತುಕತೆ ವೇಳೆ ಪರಸ್ಪರ ಏಕವಚನ ಮತ್ತು ಕೆಟ್ಟ ಪದಗಳನ್ನು ಬಳಸಿ ಬೈದಾಡಿಕೊಂಡಿದ್ದಾರೆ. ಮೊಬೈಲ್‌ ಸಂಭಾಷಣೆಯ ಆಡಿಯೊ ತುಣುಕು ಕೆಲವರಿಗೆ ಲಭ್ಯವಾಗಿದ್ದು, ಪಕ್ಷದೊಳಗೆ ಈ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.

ಜುಲೈ 28ರಂದು ಪ್ರಮಾಣವಚನ ಸ್ವೀಕರಿಸಿದ್ದ ಬಸವರಾಜ ಬೊಮ್ಮಾಯಿ, ಅದೇ ದಿನ ಆರ್‌ಎಸ್‌ಎಸ್‌ ಕಚೇರಿ ಕೇಶವ ಕೃ‍ಪಾಕ್ಕೆ ಭೇಟಿನೀಡಿದ್ದರು. ಬಿಜೆಪಿಯ ಹಿರಿಯ ಶಾಸಕರಾದ ಅಶೋಕ ಮತ್ತು ಸೋಮಣ್ಣ ಇಬ್ಬರೂ ಅಲ್ಲಿಯೇ ಭೇಟಿಯಾಗಿದ್ದರು. ಒಟ್ಟಿಗೆ ದೆಹಲಿಗೆ ತೆರಳಿ ಪಕ್ಷದ ವರಿಷ್ಠರನ್ನು ಭೇಟಿಮಾಡಿ, ಇಬ್ಬರನ್ನೂ ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಮನವೊಲಿಕೆ ಮಾಡಲು ಪರಸ್ಪರ ಒಪ್ಪಿಕೊಂಡಿದ್ದರು ಎಂದು ಮೂಲಗಳು ತಿಳಿಸಿವೆ.

ಅಶೋಕ ಅವರು ಸೋಮಣ್ಣ ಅವರಿಗೆ ತಿಳಿಸದೆಯೇ ಒಬ್ಬರೇ ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿಮಾಡಿದ್ದರು. ಈ ವಿಷಯ ತಿಳಿಯುತ್ತಿದ್ದಂತೆಯೇ ಸೋಮಣ್ಣ ಕರೆಮಾಡಿ ವಿಚಾರಿಸಿದ್ದಾರೆ. ತಮ್ಮನ್ನು ಬಿಟ್ಟು ಹೋದದ್ದೇಕೆ ಎಂದು ಏಕವಚನದಲ್ಲಿ ಪ್ರಶ್ನಿಸುತ್ತಿದ್ದಂತೆಯೇ ಅಶೋಕ ಹರಿಹಾಯ್ದಿದ್ದಾರೆ. ಇಬ್ಬರ ನಡುವೆ ದೊಡ್ಡ ಜಗಳವೇ ನಡೆದಿದೆ ಎಂಬ ಮಾಹಿತಿ ಲಭಿಸಿದೆ.

‘ಸಂಪುಟಕ್ಕೆ ತಮ್ಮನ್ನು ಸೇರಿಸದಂತೆ ವರಿಷ್ಠರಿಗೆ ಅಶೋಕ ದೂರು ಹೇಳಿರಬಹುದು ಎಂದು ಸೋಮಣ್ಣ ಅನುಮಾನ ವ್ಯಕ್ತಪಡಿಸಿದ್ದಾರೆ. ಆಗ ಜಗಳ ಮತ್ತಷ್ಟು ಜೋರಾಗಿದೆ. ಇಬ್ಬರೂ ಪರಸ್ಪರರ ವಿರುದ್ಧ ಪಿತೂರಿ, ಸೇಡಿನ ರಾಜಕಾರಣದ ಆರೋಪ ಮಾಡಿದ್ದಾರೆ. ಸುಮಾರು ಹತ್ತು ನಿಮಿಷಗಳಿಗೂ ಹೆಚ್ಚು ಕಾಲ ಜಗಳವಾಡಿಕೊಂಡಿದ್ದಾರೆ’ ಎಂದು ಮೂಲಗಳು ಹೇಳಿವೆ.

‘ನನಗೆ ಉಪಮುಖ್ಯಮಂತ್ರಿ ಸ್ಥಾನ ಹಾಗೂ ಬೆಂಗಳೂರು ಉಸ್ತುವಾರಿ ತಪ್ಪಿಸಲು ನೀನು ಯತ್ನಿಸಿದ್ದೆ’ ಎಂದು ಅಶೋಕ ಅವರು ಸೋಮಣ್ಣ ವಿರುದ್ಧ ಈ ಜಗಳದ ವೇಳೆ ಹರಿಹಾಯ್ದಿದ್ದರೆ, ‘ಸಚಿವ ಸ್ಥಾನವನ್ನೇ ಸಿಗದಂತೆ ಮಾಡಲು ಮುಂದಾಗಿದ್ದೀಯಾ’ ಎಂದು ಸೋಮಣ್ಣ ಅವರು ಅಶೋಕ ವಿರುದ್ಧ ಕೆಂಡಕಾರಿದ್ದಾರೆ ಎಂದು ಮೂಲಗಳು ಹೇಳಿವೆ.

ಈ ಬಗ್ಗೆ ಪ್ರತಿಕ್ರಿಯೆ ಪಡೆಯಲು ಆರ್. ಅಶೋಕ ಅವರಿಗೆ ಕರೆ ಮಾಡಲಾಯಿತು. ಅವರು ಪ್ರತಿಕ್ರಿಯೆಗೆ ಲಭ್ಯರಾಗಲಿಲ್ಲ.

‘25 ದಿನಗಳ ಹಿಂದಿನ ಘಟನೆ’:

 ‘ನಮ್ಮಿಬ್ಬರ ನಡುವೆ ಮಾತುಕತೆ ನಡೆದಿರುವುದು ಇತ್ತೀಚೆಗೆ ಅಲ್ಲ. 25 ದಿನಗಳ ಹಿಂದೆ ನಡೆದ ಚರ್ಚೆಯನ್ನೇ ಸಂಪುಟದ ವಿಚಾರ ಎಂದು ಬಿಂಬಿಸಲಾಗಿದೆ’ ಎಂದು ವಿ. ಸೋಮಣ್ಣ ತಿಳಿಸಿದರು. ವಾಗ್ವಾದದ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಅವರು, ‘ನಾನು ಕೊಡಗು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದೆ. ಕೊಡಗು ಜಿಲ್ಲೆ ಭೇಟಿ ಸಂಬಂಧ ಅಶೋಕ ಹಾಗೂ ನನ್ನ ಮಧ್ಯೆ ಮಾತುಕತೆ ನಡೆದಿತ್ತು. ಅದನ್ನೇ ಈ ರೀತಿ ಬಿಂಬಿಸಲಾಗಿದೆ. ಇಬ್ಬರ ನಡುವೆ ಯಾವುದೇ ವೈಮನಸ್ಸು ಇಲ್ಲ’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು