ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

8 ತಿಂಗಳಿಂದ ಸಿಗದ ಪಿಂಚಣಿ: ಸ್ವಾತಂತ್ರ್ಯ ಸೇನಾನಿಗಳ ಕುಟುಂಬ ಅತಂತ್ರ

8 ತಿಂಗಳಿಂದ ಸಿಗದ ಪಿಂಚಣಿ: ಕಚೇರಿಗಳಿಗೆ ನಿರಂತರ ಅಲೆದಾಟ
Last Updated 13 ಫೆಬ್ರುವರಿ 2021, 18:29 IST
ಅಕ್ಷರ ಗಾತ್ರ

ಹಾವೇರಿ: ಎಂಟು ತಿಂಗಳಿಂದ ಸಕಾಲದಲ್ಲಿ ₹10 ಸಾವಿರ ಮಾಸಿಕ ಪಿಂಚಣಿ ಸಿಗದೆ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರು ನಿತ್ಯ ಸರ್ಕಾರಿ ಕಚೇರಿ ಗಳಿಗೆ ಅಲೆದಾಡುತ್ತಿದ್ದಾರೆ. ಗೌರವಧನಕ್ಕಾಗಿ ಅಧಿಕಾರಿಗಳಿಗೆ ಮೊರೆ ಇಡುತ್ತಿದ್ದಾರೆ.

ರಾಜ್ಯದಲ್ಲಿ ಸುಮಾರು 8 ಸಾವಿರ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಗಳು ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಮಾಸಿಕ ಪಿಂಚಣಿ ಪಡೆಯು ತ್ತಿವೆ. ಕೋವಿಡ್‌ ಲಾಕ್‌ಡೌನ್‌ ಶುರುವಾದ ನಂತರ ರಾಜ್ಯ ಸರ್ಕಾರದಿಂದ ಬರುತ್ತಿದ್ದ ಪಿಂಚಣಿ ನಿಂತು ಹೋಗಿದೆ. ಜೀವನ ನಿರ್ವಹಣೆಗೆ ಪಿಂಚಣಿಯನ್ನೇ ನಂಬಿಕೊಂಡಿದ್ದ ಕುಟುಂಬಗಳ ಸ್ಥಿತಿ ಹೇಳತೀರದಾಗಿದೆ.

ಈ ಮೊದಲು ಖಜಾನೆ ಇಲಾಖೆ ಮೂಲಕ ಸ್ವಾತಂತ್ರ್ಯ ಹೋರಾಟಗಾರರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ಪಿಂಚಣಿಜಮೆ ಆಗುತ್ತಿತ್ತು. 2020ರ ಮೇ ತಿಂಗಳಿ
ನಿಂದ ಪಿಂಚಣಿ ನೀಡುವ ಜವಾಬ್ದಾರಿಯನ್ನು ಸರ್ಕಾರ ಜಿಲ್ಲಾಧಿಕಾರಿಗಳಿಗೆವಹಿಸಿದೆ. ಹೀಗಾಗಿ ಸ್ವಾತಂತ್ರ್ಯ ಹೋರಾಟಗಾರರು ಮತ್ತು ಗೋವಾ ವಿಮೋಚನಾ ಚಳವಳಿಗಾರರ ವಿಳಾಸ, ಬ್ಯಾಂಕ್‌ ವಿವರಗಳ ದಾಖಲಾತಿಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ಖಜಾನೆ ಇಲಾಖೆ ಅಧಿಕಾರಿಗಳು ಹಸ್ತಾಂತರ ಮಾಡಿದ್ದಾರೆ.

ಶೇ 20ರಷ್ಟು ಕುಟುಂಬಸ್ಥರಿಗೆ ಮಾತ್ರ ಮೇ, ಜೂನ್‌, ಜುಲೈ ತಿಂಗಳ ಪಿಂಚಣಿಯನ್ನು ಒಟ್ಟಿಗೆ ಕೊಡಲಾಗಿದೆ. ಉಳಿದವರಿಗೆ ಜೂನ್‌ನಿಂದ ಪಿಂಚಣಿಯೇ ಬಂದಿಲ್ಲ. ಮನೆ ಬಾಡಿಗೆ ಕಟ್ಟಲು, ದಿನಸಿ ಕೊಳ್ಳಲು, ಚಿಕಿತ್ಸೆ ಪಡೆಯಲು ಹಣವಿಲ್ಲದೆ ಪರದಾಡುವಂತಾಗಿದೆ ಎಂಬುದು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರ ಅಳಲು.

‘ಊಟಕ್ಕೂ ತೊಂದರೆ’

‘ನಮ್ಮ ತಂದೆ ಮೂರ್ತಿರಾವ್‌ ಕುಲಕರ್ಣಿ ಮತ್ತು ಚಿಕ್ಕಪ್ಪ ನಾಗರಾಜ ಕುಲಕರ್ಣಿ ಇಬ್ಬರೂ ಸ್ವಾತಂತ್ರ್ಯ ಹೋರಾಟಗಾರರು. ತಂದೆ ತೀರಿಕೊಂಡಿದ್ದು, ಚಿಕ್ಕಪ್ಪ ಮತ್ತು ಅಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನ ಮೇಲಿದೆ. ನನಗೆ ಅನಾರೋಗ್ಯ ಸಮಸ್ಯೆಯಿಂದ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ. ಆಗಸ್ಟ್‌ನಿಂದ ಪಿಂಚಣಿ ಬಾರದೆ ಒಂದು ಹೊತ್ತಿನ ಊಟಕ್ಕೂ ತೊಂದರೆಯಾಗಿದೆ’ ಎಂದು ಮೋಟೆಬೆನ್ನೂರಿನ ಮಾಲಾ ಕುಲಕರ್ಣಿ ಕಣ್ಣೀರು ಸುರಿಸಿದರು.

ಚಿಕಿತ್ಸೆಗೂ ಹಣದ ಕೊರತೆ

‘ನನ್ನ ತಾತ ಶಿವಪ್ಪ ಅಸುಂಡಿ (94) ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ಈಗ ನಡೆದಾಡಲು ತ್ರಾಣವಿಲ್ಲ. ವಯೋಸಹಜ ಕಾಯಿಲೆಗಳಿವೆ. ಎಂಟು ತಿಂಗಳಿಂದ ಬಾಕಿ ಪಿಂಚಣಿಗಾಗಿ ಸರ್ಕಾರಿ ಕಚೇರಿ ಮತ್ತು ಬ್ಯಾಂಕ್‌ಗೆ ಅಲೆದಾಡಿದ್ದೇನೆ. ತಾತನ ಆಸ್ಪತ್ರೆ ಖರ್ಚುಗಳನ್ನು ಭರಿಸುವುದೂ ಕಷ್ಟವಾಗಿದೆ’ ಎಂದು ರಾಣೆಬೆನ್ನೂರಿನ ವೀರೇಶ್‌ ಅಸುಂಡಿ ಸಮಸ್ಯೆ ತೋಡಿಕೊಂಡರು.

‘ಅಧಿಕಾರಿಗಳ ವಿಳಂಬ ನೀತಿಯಿಂದ ಸ್ವಾತಂತ್ರ್ಯ ಸೇನಾನಿಗಳ ಕುಟುಂಬಗಳು ಅಕ್ಷರಶಃ ಕಣ್ಣೀರಿನಲ್ಲಿ ಕೈತೊಳೆಯುತ್ತಿವೆ. ಕೂಡಲೇ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಕರ್ನಾಟಕ ರಾಜ್ಯ ಸ್ವಾತಂತ್ರ್ಯ ಹೋರಾಟಗಾರರ ಹಾಗೂ ಉತ್ತರಾಧಿಕಾರಿಗಳ ಸಂಘದ ಅಧ್ಯಕ್ಷ ಜಗದೀಶ ಮಹಾರಾಜಪೇಟ ಒತ್ತಾಯಿಸಿದರು.

***

ಆರೇಳು ತಿಂಗಳಿನಿಂದ ಸರ್ಕಾರ ದಿಂದ ಅನುದಾನ ಬಿಡುಗಡೆಯಾಗಿಲ್ಲ. ಬಿಡುಗಡೆಯಾದ ತಕ್ಷಣ ಪಿಂಚಣಿ ಕೊಡಲು ಕ್ರಮ ಕೈಗೊಳ್ಳುತ್ತೇನೆ

- ಸಂಜಯ ಶೆಟ್ಟೆಣ್ಣವರ, ಹಾವೇರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT