ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಫ್‌ಎಸ್‌ಎಲ್‌ ಮೂಲಸೌಕರ್ಯ ಕೊರತೆ: ಸ್ವಯಂ ಪ್ರೇರಿತ ಪಿಐಎಲ್

Last Updated 10 ಫೆಬ್ರುವರಿ 2021, 16:35 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ವಿಧಿ ವಿಜ್ಞಾನ ಪ್ರಯೋಗಾಲಯಗಳಲ್ಲಿ (ಎಫ್‌ಎಸ್‌ಎಲ್‌) ಮೂಲಸೌಕರ್ಯ, ಉಪಕರಣಗಳು ಕೊರತೆ ಬಗ್ಗೆ ಹೈಕೋರ್ಟ್ ಬುಧವಾರ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡಿದೆ.

ರಾಜ್ಯದಲ್ಲಿ ಎಫ್‌ಎಸ್‌ಎಲ್‌ಗಳ ಕಾರ್ಯವೈಖರಿ ಸುಧಾರಿಸಲು ತಾತ್ಕಾಲಿಕ ಮತ್ತು ಶಾಶ್ವತ ಕ್ರಮಗಳನ್ನು ಕೈಗೊಳ್ಳುವ ಕುರಿತು ಅಫಿಡವಿಟ್ ಸಲ್ಲಿಸುವಂತೆ ಎಫ್‌ಎಸ್‌ಎಲ್ ನಿರ್ದೇಶಕರು ಮತ್ತು ಗೃಹ ಇಲಾಖೆ ಕಾರ್ಯದರ್ಶಿಗೆ ಪೀಠ ನಿರ್ದೇಶನ ನೀಡಿದೆ.

ಎಫ್‌ಎಸ್‌ಎಲ್‌ ವರದಿಗಳು ಬರುವುದು ವಿಳಂಬವಾಗುತ್ತಿರುವುದನ್ನು ಏಕ ಸದಸ್ಯ ಪೀಠ ಅವಲೋಕಿಸಿತ್ತು. ಇದನ್ನು ಆಧರಿಸಿ ಸ್ವಯಂ ಪ್ರೇರಿತ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ದಾಖಲಿಸಿದೆ.

ಎಫ್‌ಎಸ್‌ಎಲ್‌ಗಳಲ್ಲಿ ಇರುವ ಹುದ್ದೆಗಳನ್ನು ಕಾಲಕ್ಕೆ ತಕ್ಕಂತೆ ಭರ್ತಿ ಮಾಡಬೇಕು. ಪ್ರಯೋಗಾಲಯಗಳ ಸಂಖ್ಯೆ ಹೆಚ್ಚಳ ಮತ್ತು ಸಂಚಾರಿ ಪ್ರಯೋಗಾಲಯಗಳನ್ನು ತೆರೆಯುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಬೇಕು ಎಂದು ಪೀಠ ಹೇಳಿತು.

‘ಹಾಲಿ ಇರುವ ಎಫ್‌ಎಸ್‌ಎಲ್‌ಗಳಿಗೆ ಯಂತ್ರೋಪಕರಣಗಳನ್ನು ಒದಗಿಸುವಲ್ಲಿ ಸರ್ಕಾರ ವಿಫಲವಾದರೆ ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ಅವಕಾಶ ಇದೆ. ಅಲ್ಲದೇ ವಿಳಂಬ ಮಾಡುವುದು ಸಂವಿಧಾನದ 21ನೇ ಪರಿಚ್ಛೇದದ ಪ್ರಕಾರ ಮೂಲಭೂತ ಹಕ್ಕುಗಳ ಉಲ್ಲಂಘನೆ’ ಎಂದು ಪೀಠ ತಿಳಿಸಿತು.

ಜಂಟಿ ನಿರ್ದೇಶಕರ 3 ಹುದ್ದೆಗಳು, ಉಪ ನಿರ್ದೇಶಕರ 7 ಹುದ್ದೆಗಳು, ಸಹಾಯಕ ನಿರ್ದೇಶಕರ 18 ಹುದ್ದೆಗಳು, ಹಿರಿಯ ವೈಜ್ಞಾನಿಕ ಅಧಿಕಾರಿಗಳ 35 ಹುದ್ದೆಗಳು ಮತ್ತು ವೈಜ್ಞಾನಿಕ ಅಧಿಕಾರಿಗಳ 138 ಹುದ್ದೆಗಳು ರಾಜ್ಯದ ವಿವಿಧ ಎಫ್‌ಎಸ್‌ಎಲ್‌ಗಳಲ್ಲಿ ಖಾಲಿ ಇರುವುದನ್ನು ಪೀಠ ಗಮನಿಸಿದೆ.

ಬೆಂಗಳೂರಿನಲ್ಲಿರುವ ರಾಜ್ಯ ಮಟ್ಟದ ಪ್ರಯೋಗಾಲಯ, ಮೈಸೂರು, ಮಂಗಳೂರು, ದಾವಣಗೆರೆ, ಬೆಳಗಾವಿ ಮತ್ತು ಕಲಬುರ್ಗಿಯಲ್ಲಿರುವ ಪ್ರಾದೇಶಿಕ ಲ್ಯಾಬ್‌ಗಳಲ್ಲಿ ಖಾಲಿ ಇರುವ ಹುದ್ದೆಗಳು ಮತ್ತು ಮೂಲಸೌಕರ್ಯ ಕೊರತೆ ಬಗ್ಗೆ ವಿವರ ಸಲ್ಲಿಸುವಂತೆ ಪೀಠ ನಿರ್ದೇಶನ ನೀಡಿತು. ಮಾರ್ಚ್‌ 18ಕ್ಕೆ ವಿಚಾರಣೆ ಮುಂದೂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT