ಗುರುವಾರ , ಏಪ್ರಿಲ್ 15, 2021
19 °C
ರಾಜ್ಯದ 90 ಲಕ್ಷ ರಾಮ ಭಕ್ತರ ತಲುಪುವ ಗುರಿ

ರಾಮ ಮಂದಿರಕ್ಕೆ ನಿಧಿ ಸಂಗ್ರಹ: ವಿಶ್ವ ಹಿಂದೂ ಪರಿಷತ್‌ನಿಂದ ಅಭಿಯಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‌ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 2021ರ ಜ.15ರಿಂದ ಫೆ.27ರವರೆಗೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ರಾಜ್ಯದಲ್ಲಿ ನಿಧಿ ಸಂಗ್ರಹ ಅಭಿಯಾನ ಹಮ್ಮಿಕೊಂಡಿದೆ. ಈ ಅವಧಿಯಲ್ಲಿ ಇಲ್ಲಿನ ಸುಮಾರು 90 ಲಕ್ಷ ರಾಮ ಭಕ್ತರನ್ನು ತಲುಪುವ ಯೋಜನೆಯನ್ನು ಹಾಕಿಕೊಂಡಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಚ್‌ಪಿಯ ಕೇಂದ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಡಿ, ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟಸ್ಟ್‌ನ ಯೋಜನೆಯಂತೆ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಿ ಸಲು ವಿಎಚ್‌ಪಿ ಸಂಪೂರ್ಣ ಸಹಕಾರ ನೀಡುತ್ತಿದೆ. ದೇಶದ 4 ಲಕ್ಷ ಹಳ್ಳಿಗಳನ್ನು ಹಾಗೂ 11 ಕೋಟಿ ಕುಟುಂಬಗಳನ್ನು ತಲುಪುವ ಗುರಿಯಿದೆ. ಕರ್ನಾಟಕದಲ್ಲಿ 27,500 ಹಳ್ಳಿಗಳನ್ನು ಸಂಪರ್ಕಿಸಿ, ಭಕ್ತರಿಂದ ಹಣ ಸಂಗ್ರಹಿಸುತ್ತೇವೆ’ ಎಂದರು.

‘ತಲಾ 5 ಮಂದಿಯನ್ನು ಒಳಗೊಂಡ ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ, ಹಣ ಸಂಗ್ರಹಿಸುತ್ತಾರೆ. ₹ 10, ₹ 100 ಹಾಗೂ ₹ 1 ಸಾವಿರದ ಮುದ್ರಿತ ಕೂಪನ್‌ ಮೂಲಕ ಹಣ ಸಂಗ್ರಹ ನಡೆಯಲಿದೆ. ₹ 2 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಕೊಟ್ಟವರಿಗೆ ರಸೀದಿ ನೀಡಲಾಗುವುದು. ಇದರಿಂದ ಭಾರತೀಯ ಆದಾಯ ತೆರಿಗೆ ಕಾಯ್ದೆಯ 80ಜಿ ಸೆಕ್ಷನ್ ಅಡಿಯಲ್ಲಿ ತೆರಿಗೆ ವಿನಾ ಯತಿ ಪಡೆಯಬಹುದು’ ಎಂದು ವಿವರಿಸಿದರು.

2024ಕ್ಕೆ ದರ್ಶನ: ‘ಕೂಟ ಟ್ರಸ್ಟ್‌ಗೆ ಹಣವನ್ನು ಆರ್‌ಟಿಜಿಎಸ್ ಮಾಡ ಬಹುದು. ಹಣ ಸಂಗ್ರಹಣೆ ಹಾಗೂ ಖಾತೆಗೆ ಜಮಾ ಮಾಡುವ ವ್ಯವಸ್ಥೆಯು ಸಂಪೂರ್ಣ ಪಾರದರ್ಶಕವಾಗಿರುತ್ತದೆ. 2024ರ ಒಳಗೆ ಶ್ರೀರಾಮ ಲಲ್ಲಾನನ್ನು ಗರ್ಭಗುಡಿಯಲ್ಲಿ ಪ್ರತಿಷ್ಠಾಪಿಸಿ, ಭಕ್ತರಿಗೆ ದರ್ಶನದ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದರು.

‘ಈ ಅಭಿಯಾನ ಹಾಗೂ ಮಂದಿರ ನಿರ್ಮಾಣವು ಜಾಗೃತ ಹಿಂದೂ ಶಕ್ತಿಯ ಪುನರುತ್ಥಾನದ ಸಂಕೇತವಾಗಿದೆ. ಹಾಗಾಗಿ ಈ ಅಭಿಯಾನಕ್ಕೆ ಎಲ್ಲೆಡೆ ಯಿಂದ ಉತ್ತಮ ಸ್ವಂದನೆ ದೊರೆಯಲಿದೆ ಅಂದುಕೊಂಡಿದ್ದೇವೆ’ ಎಂದರು.

ಕರ್ನಾಟಕ ರಾಜ್ಯ ನಿಧಿ ಸಮರ್ಪಣಾ ಸಮಿತಿಯ ಕಾರ್ಯದರ್ಶಿ ತಿಪ್ಪೇಸ್ವಾಮಿ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು