ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ವ್ಯವಹಾರ ಮುಂದು, ವಿವಾದ ಹಿಂದು

Last Updated 4 ಏಪ್ರಿಲ್ 2021, 19:54 IST
ಅಕ್ಷರ ಗಾತ್ರ

ನದಿಗಳು ನಾಗರಿಕತೆಯನ್ನು ಕಟ್ಟಿವೆ. ಆದರೆ ನದಿ ನೀರು ವಿವಾದಗಳು ಅನಾಗರಿಕತೆಯನ್ನು ಪೋಷಿಸುತ್ತಿವೆ. ಹರಿಯುವ ನೀರಿಗೆ ಯಾವ ದೊಣೆನಾಯಕನ ಅಪ್ಪಣೆಯೂ ಬೇಕಿಲ್ಲ ಎನ್ನುವಕಾಲ ಒಂದಿತ್ತು, ಆದರೆ ಹರಿಯುವ ನೀರಿಗೆ ತಡೆಗೋಡೆ ಹಾಕಿ ಹಂಚಿಕೊಳ್ಳುವುದೇ ಈಗ ರಾಷ್ಟ್ರೀಯ ಸಮಸ್ಯೆಯಾಗಿದೆ. ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವೆ ಪ್ರತೀ ಬೇಸಿಗೆಯಲ್ಲಿ ಕಾವೇರಿ ಕಿಡಿ ಹಾರುತ್ತದೆ. ಎರಡೂ ರಾಜ್ಯಗಳ ಅಭಿಮಾನಿಗಳ ಮೈಯಲ್ಲಿ ಇನ್ನೆಲ್ಲಿಲ್ಲದ ಕಿಚ್ಚು ಆವಾಹನೆಯಾಗಿ, ಮಳೆ ಸುರಿದ ತರುವಾಯ ತಣ್ಣಗಾಗುತ್ತದೆ. ಈ ವಿಷಯದಲ್ಲಿ ಎದ್ದು ಕಾಣುವುದು ಹುಚ್ಚಾಭಿಮಾನ ಮಾತ್ರ. ಅದರಲ್ಲಿ ಎರಡು ರೀತಿಯ ಪ್ರತಿಕ್ರಿಯೆ ಗಮನಿಸಬಹುದು. ಕೆಲವೊಮ್ಮೆ ಅದು ಸಾತ್ವಿಕ. ಮತ್ತೊಂದೆಡೆ ಅದು ಪೈಶಾಚಿಕಕೃತ್ಯ. ಕಾವೇರಿ ನದಿ ನೀರು ವಿವಾದ ಭುಗಿಲೆದ್ದಾಗಲೆಲ್ಲ ಇಂತಹ ವಿದ್ಯಮಾನಗಳನ್ನು ನಾವು ಗಮನಿಸುತ್ತಲೇ ಬಂದಿದ್ದೇವೆ.

ನೆಲ ಜಲ ವಿವಾದ ಉದ್ಭವಿಸಿದಾಗಲೆಲ್ಲ ಎದ್ದುಕಾಣುವುದು ನಮ್ಮ ನೆಲದ ಮೇಲಿನ ಅಭಿಮಾನ. ನದಿಗಳೇ ಕಟ್ಟಿದ ನಾಗರಿಕತೆ ಅದರೊಂದಿಗೇ ಸಂಸ್ಕೃತಿಯನ್ನೂ ರೂಪಿಸುತ್ತದೆ. ನದಿ ವಿವಾದಗಳು ಭುಗಿಲೆದ್ದಾಗ ಎಲ್ಲ ಸಂಸ್ಕೃತಿಗಳೂ ಪಕ್ಕಕ್ಕೆ ಸರಿದು, ಕುರುಡು ಅಭಿಮಾನವೊಂದೇ ಮೆರೆದು ಅದು ಗಲಭೆಯ, ಆಸ್ತಿನಷ್ಟದ ಕುರುಡುಮಾರ್ಗದತ್ತ ನಮ್ಮನ್ನು ನಡೆಸುತ್ತದೆ. ಅದರಲ್ಲೂ ಕಾವೇರಿ ವಿವಾದದ ಪ್ರಶ್ನೆ ಬಂದಾಗಲೆಲ್ಲ, ಭಾಷಾಭಿಮಾನವೂ ಎದ್ದು ನಿಲ್ಲುತ್ತದೆ. ಭಾಷಾದ್ವೇಷದ ಹೊಗೆ ಏಳುತ್ತದೆ. ಆಗ ಇದ್ದಕ್ಕಿದ್ದಂತೆ ಸೆಲಬ್ರೆಟಿಗಳ, ದಿಢೀರ್ ಮುಖಂಡರ ಪ್ರವೇಶವಾಗುತ್ತದೆ.

ಅವರು ನೇತೃತ್ವವನ್ನೂ ವಹಿಸಿಕೊಳ್ಳಬಹುದು, ಪ್ರಚೋದಿಸಲೂಬಹುದು. ಕನ್ನಡ, ಕರ್ನಾಟಕ ಮತ್ತು ಕನ್ನಡ ಸಂಸ್ಕೃತಿಗಳ ಮೇಲೆ ಅನ್ಯಾಕ್ರಮಣ ನಡೆದಾಗಲೆಲ್ಲ ಅನೇಕರು ಅದಕ್ಕೆ ಉತ್ತರಿಸಲು ಮುಂದೆ ಬಂದಿರುವ ಉದಾಹರಣೆ ಇದೆ. ಆದರೆ ಅವರೆಲ್ಲರೂ ತಮ್ಮ ಇತಿಮಿತಿಗಳನ್ನು ಅರಿತು ಕಾರ್ಯಾಚರಣೆ ಮಾಡುತ್ತಾರೆ. ಆದರೆ ಕನ್ನಡ ಭಾಷೆಯೊಂದಿಗೆ, ಕರ್ನಾಟಕದ ವಿಚಾರದೊಂದಿಗೆ,ಕರ್ನಾಟಕ ಸಂಸ್ಕೃತಿಯೊಂದಿಗೆ ತಾದಾತ್ಮ್ಯ ಹೊಂದಿ ಬದ್ಧತೆಯೊಂದಿಗೆ ಬೀದಿಗಿಳಿದವರು ಕೆಲವೇ ಮಂದಿ. ಅನಕೃ, ಮ.ರಾಮಮೂರ್ತಿ, ನಾಡಿಗೇರ ಕೃಷ್ಣರಾವ್, ತರಾಸು, ವೀರಕೇಸರಿ ಸೀತಾರಾಮಶಾಸ್ತ್ರಿ, ಎಂ.ಎನ್.ನಟರಾಜ್, ಬಂದಗದ್ದೆ ರಮೇಶ್, ಕೆ.ಜಿ.ಮಹೇಶ್ವರಪ್ಪ, ಕೋಣಂದೂರು ಲಿಂಗಪ್ಪ, ಮ.ನ.ಮೂರ್ತಿ, ಗೋಪಾಲ್, ಅರಸುಕುಮಾರ್, ಲಕ್ಷ್ಮಣ್, ವಾಟಾಳ್ ನಾಗರಾಜ್ ಮೊದಲಾದವರ ಹೆಸರುಗಳನ್ನು ಹೇಳಬಹುದು.

ಅರವತ್ತರ ದಶಕದಲ್ಲಿ ಕನ್ನಡ, ಕನ್ನಡಭಾಷೆಯ ಮೇಲೆ ಅನ್ಯಾಕ್ರಮಣವಾದಾಗ ಅದನ್ನು ಪ್ರತಿರೋಧಿಸಿ ಇವರೆಲ್ಲಾ ಬೀದಿಗಿಳಿದಾಗ ಅವರ ಹಿಂದೆ ಏಕೀಕರಣ ಚಳವಳಿಯ ಮುಂದಾಳತ್ವ ವಹಿಸಿದ್ದ ತಲೆಮಾರಿನ ಉದಾಹರಣೆ ಇತ್ತು. ತಲೆಮಾರುಗಳ ನಂತರ ನಡೆದಿರುವ ಸಾಮಾಜಿಕ ಪರಿವರ್ತನೆಯಿಂದಾಗಿ ಆಲೋಚನೆಗಳು ಬದಲಾಗಿವೆ. ಸೆಲಬ್ರೆಟಿಗಳು ಮುಂದಾಳತ್ವ ವಹಿಸಿಕೊಳ್ಳುವ ಮುನ್ನ ವ್ಯವಹಾರದ ಬಗ್ಗೆ ಆಲೋಚನೆ ಮಾಡುತ್ತಾರೆ. ನಮ್ಮ ನಾಡಗೀತೆಯಲ್ಲಿ ‘ಕೃಷ್ಣ, ಶರಾವತಿ, ತುಂಗಾ, ಕಾವೇರಿಯ ವರರಂಗ’ ಎಂಬ ಸಾಲುಗಳು ನಮ್ಮ ನದಿಗಳ ಮಹತ್ವವನ್ನು ಹೇಳುತ್ತದೆ. ನಮ್ಮ ಸಿನಿಮಾ ನಾಯಕರು ‘ಕನ್ನಡನಾಡಿನ ಜೀವನದಿ ಕಾವೇರಿ...’ ಎಂದು ಹಾಡುತ್ತಾರೆ. ರಾಷ್ಟ್ರದ ನಾಲ್ಕನೇ ದೊಡ್ಡ ನದಿ ಕೃಷ್ಣಾ ಇವರ ಪಾಲಿಗೆ ನಗಣ್ಯ. ಈ ಸೀಮಿತ ಜ್ಞಾನದಿಂದಾಗಿ ಸೆಲಬ್ರೆಟಿಗಳು ಇಡೀ ರಾಜ್ಯದ ಜನತೆಯನ್ನು ತಲುಪಲು ವಿಫಲರಾಗುತ್ತಿದ್ದಾರೆ, ಕಾವೇರಿ ನದಿ ನೀರು ಹಂಚಿಕೆ ವಿವಾದ ಉದ್ಭವವಾದಾಗ ಭಾಷೆ, ಸಂಸ್ಕೃತಿ, ಜೀವನ, ಬದುಕು ಎಲ್ಲದರ ಪ್ರಶ್ನೆ ಮುಂದಾಗುತ್ತದೆ.

ಕರ್ನಾಟಕ-ಗೋವಾ ನಡುವೆ ಮಹದಾಯಿ ನದಿ ನೀರು ಹಂಚಿಕೆ ವಿವಾದವಾದಾಗ ಅದು ಕೇವಲ ಮುಂಬೈ–ಕರ್ನಾಟಕ ಭಾಗದ ಜನರ ಸಮಸ್ಯೆಯಷ್ಟೇ ಎನಿಸಿ, ಅದು ನಮ್ಮದು ಎನ್ನುವ ಭಾವನೆ ಸಿನಿಮಾ ನಾಯಕನಟರ ಗಮನಕ್ಕೆ ಬರುವುದೇ ಇಲ್ಲ. ಮಹದಾಯಿಯ ಬಗ್ಗೆ, ಕಳಸಾ ಬಂಡೂರಿಯ ಬಗ್ಗೆ, ಮಲಪ್ರಭಾ ಬಗ್ಗೆ ಪ್ರಶ್ನೆಗಳು ಉದ್ಭವವಾದಾಗ ಸಿನಿಮಾ ನಟರು ಭಾವನಾತ್ಮಕವಾಗಿ ಅದಕ್ಕೆ ಸ್ಪಂದಿಸುವುದಿಲ್ಲ; ಹೀಗಾಗಿ ಕಾವೇರಿ ಎನ್ನುವುದು ನಾಲ್ಕು ಜಿಲ್ಲೆಗಳಲ್ಲಿ ಹರಿದು, ತಮಿಳುನಾಡನ್ನು ಸೇರುವ ಹಳೇ ಮೈಸೂರು ಜನರ ಸಮಸ್ಯೆ ಎಂಬ ಆಪಾದನೆ ಸಾಮಾನ್ಯವಾಗಿ ಹೋಗಿದೆ. ಇದಕ್ಕೆ ಸಿನಿಮಾ ಮಂದಿಯ ಸಾಮಾನ್ಯ ಜ್ಞಾನದ ಕೊರತೆಯೇ ಕಾರಣ. ಕಾವೇರಿ ನದಿನೀರು ಹಂಚಿಕೆ ಪ್ರಶ್ನೆ ಬಂದಾಗಲೆಲ್ಲಾ ತಮಿಳುನಾಡಿನಲ್ಲಿ ಇಡೀ ಚಿತ್ರರಂಗ ದನಿ ಎತ್ತುತ್ತದೆ. 2018ರಲ್ಲಿ ಕಾವೇರಿ ನದಿ ನೀರು ವಿವಾದದಲ್ಲಿ ಪ್ರತಿಭಟನೆಗೆ ಕರೆ ಕೊಟ್ಟಾಗ ಇಡೀ ಚಿತ್ರರಂಗದ ಚಟುವಟಿಕೆಗಳನ್ನು ನಿಲ್ಲಿಸಿ, ಚಿತ್ರರಂಗದ ಎಲ್ಲ ಘಟಾನುಘಟಿಗಳು ರಸ್ತೆಯಲ್ಲಿ ಬಂದು ಕುಳಿತರು.

ರಜನೀಕಾಂತ್, ಕಮಲಹಾಸನ್, ಸತ್ಯರಾಜ್, ವಿಜಯ್, ಧನುಷ್, ವಿಶಾಲ್ಸೇರಿದಂತೆ ಬಹುತೇಕ ನಟನಟಿಯರು, ನಿರ್ದೇಶಕರು, ನಿರ್ಮಾಪಕರು, ಕಿರುತೆರೆ ನಟನಟಿಯರು ಭಾಗವಹಿಸಿದ್ದರು. ಇದೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ರಜನೀಕಾಂತ್ ಅವರನ್ನು ಸತ್ಯರಾಜ್ ಭಾಷೆಯ ದೃಷ್ಟಿಯಿಂದ ನಿಂದಿಸಿದ ಘಟನೆಯೂ ನಡೆಯಿತು. ಕನ್ನಡಿಗರ ವಿರುದ್ಧ ಹೇಳಿಕೆ ನೀಡಿದ ಸತ್ಯರಾಜ್ಅವರ ವಿರುದ್ಧ ಬೆಂಗಳೂರಿನಲ್ಲೂ ಪ್ರತಿಭಟನೆ ನಡೆಯಿತು. ಸತ್ಯರಾಜ್ ಕೂಡ ಅಭಿನಯಿಸಿರುವ ‘ಬಾಹುಬಲಿ’ ಚಿತ್ರದ ಬಿಡುಗಡೆಗೆ ಅಡ್ಡಿ ಮಾಡಿದ ಕೆಲವು ವಿತರಕರು, ನಿರ್ಮಾಪಕರು ಸತ್ಯರಾಜ್ ಅವರಿಂದ ಬಲವಂತವಾಗಿ ಕ್ಷಮಾಪಣೆ ಪಡೆದ ಘಟನೆಯೂ ನಡೆಯಿತು. ಕಾವೇರಿ ವಿವಾದ ಕೆಲವರಿಗೆ ವ್ಯಾವಹಾರಿಕವಾಗಿ ಲಾಭತರುತ್ತದೆ. ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಕಾವೇರಿ ಪ್ರಶ್ನೆ ಬಂದಾಗ ತಮಿಳುನಾಡಿನ ಇಡೀ ಚಿತ್ರರಂಗ ಭಾವನಾತ್ಮಕವಾಗಿ ಎದ್ದು ನಿಂತಂತೆ ಕನ್ನಡ ಚಿತ್ರರಂಗ ಏಕೆ ಎದ್ದು ನಿಲ್ಲುತ್ತಿಲ್ಲ ಎನ್ನುವುದು.

ನಟ ಪ್ರಕಾಶ್‍ರಾಜ್ ಅವರ ವಿಷಯವನ್ನೇ ತೆಗೆದುಕೊಳ್ಳಿ, ಕಾವೇರಿ ವಿವಾದದ ಪ್ರಶ್ನೆ ಬಂದಾಗ ಅವರನ್ನು ಟಿ.ವಿ ಚಾನಲ್ ಒಂದು ನೇರ ಸಂದರ್ಶನಕ್ಕೆ ಆಹ್ವಾನಿಸಿತು. ಒಪ್ಪಿ ಬಂದ ಪ್ರಕಾಶ್ ರಾಜ್, ಕಾವೇರಿ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು. ಅಭಿಪ್ರಾಯ ಹೇಳಲಾರೆ ಎಂದರು. ಮತ್ತೆಮತ್ತೆ ಅದೇ ಪ್ರಶ್ನೆ ಕೇಳಿದಾಗ, ಸಿಟ್ಟಿನಿಂದ ಎಲ್ಲವನ್ನೂ ಕಿತ್ತೆಸೆದು, ಅಲ್ಲಿಂದ ನಿರ್ಗಮಿಸಿದರು. ಎರಡೂ ರಾಜ್ಯಗಳಲ್ಲಿ ಖ್ಯಾತರಾಗಿರುವ ಕಲಾವಿದರಿಗೆ ಇಂತಹ ಸಮಯದಲ್ಲಿ ವ್ಯವಹಾರವೇ ಪ್ರಧಾನವಾಗುತ್ತದೆ. ದ್ವಂದ್ವದಿಂದಾಗಿ ಅವರು ಗೊಂದಲಕ್ಕೊಳಗುತ್ತಾರೆ. ಸೆಲಬ್ರೆಟಿಗಳಿಗೆ ಪಕ್ಕದ ರಾಜ್ಯದ ಸಿನಿಮಾನಂಟಿನ ಜೊತೆ ಕೊಡು-ಕೊಳು ವ್ಯವಹಾರವಿರುವುದರಿಂದ ಅವರು ಇಂತಹ ಸಂದರ್ಭದಲ್ಲಿ ತಟಸ್ಥರಾಗುತ್ತಾರೆ.

ಕನ್ನಡ ಚಿತ್ರರಂಗ ಈಗ ಬದಲಾವಣೆಯ ಪರ್ವದತ್ತ ಕಾಲಿಟ್ಟಿದೆ. ಪ್ಯಾನ್ ಇಂಡಿಯಾ ಎಂಬ ಕಲ್ಪನೆಯನ್ನು ಹರಿಯಬಿಟ್ಟಿರುವುದರಿಂದ ಕೆ.ಜಿ.ಎಫ್., ರಾಬರ್ಟ್, ಪೊಗರು ಚಲನಚಿತ್ರಗಳು ದೇಶದಾದ್ಯಂತ ಆಯಾ ಭಾಷೆಗಳಲ್ಲೇ ಬಿಡುಗಡೆಯಾಗುವ ತಂತ್ರಜ್ಞಾನದತ್ತ ಹೊರಳಿವೆ. ನನ್ನ ಚಿತ್ರ ತಮಿಳುನಾಡಿನಲ್ಲಿ, ಆಂಧ್ರದಲ್ಲಿ, ಕೇರಳದಲ್ಲಿ ಬಿಡುಗಡೆಯಾಗಬೇಕು ಎನ್ನುವ ಹಂಬದಲ್ಲಿರುವ ನಾಯಕನಟರು ಪಕ್ಕದ ರಾಜ್ಯದ ಜನರನ್ನು ಏಕೆ ಎದುರುಹಾಕಿಕೊಳ್ಳುತ್ತಾರೆ. ಭಾಷೆಗಾಗಲಿ, ಭಾವನಾತ್ಮಕತೆಗಾಗಲಿ ಅಲ್ಲಿ ಸ್ಥಾನವೆಲ್ಲಿರುತ್ತದೆ?

–ಗಂಗಾಧರ ಮೊದಲಿಯಾರ್, ಹಿರಿಯ ಪತ್ರಕರ್ತ
–ಗಂಗಾಧರ ಮೊದಲಿಯಾರ್, ಹಿರಿಯ ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT