ಭಾನುವಾರ, ಅಕ್ಟೋಬರ್ 24, 2021
29 °C
ಬೆಂಗಳೂರು ಕೃಷಿ ವಿ.ವಿ ಕುಲಪತಿ ರಾಜೇಂದ್ರ ಪ್ರಸಾದ್‌

ಸಾಧಕ ರೈತರಿಗೆ ಗೌರವ ಡಾಕ್ಟರೇಟ್‌; ಮುಂದಿನ ವರ್ಷದಿಂದ ಜಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಕೃಷಿ ಕ್ಷೇತ್ರದಲ್ಲಿ ವಿಶಿಷ್ಟ ಸಾಧನೆ ಮಾಡಿದ ರೈತರೊಬ್ಬರಿಗೆ ‘ಗೌರವ ಡಾಕ್ಟರೇಟ್‌’ ನೀಡಲು ನಿರ್ಧರಿಸಲಾಗಿದೆ. ಮುಂದಿನ ವರ್ಷದಿಂದ ಇದು ಜಾರಿಗೊಳ್ಳಲಿದೆ. ರಾಜ್ಯದ ಇತಿಹಾಸದಲ್ಲೇ ಇದೊಂದು ಹೊಸ ಹೆಜ್ಜೆ’ ಎಂದು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಎಸ್‌.ರಾಜೇಂದ್ರ ಪ್ರಸಾದ್‌ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ‘ಕೃಷಿ ಕ್ಷೇತ್ರದಲ್ಲಿ ಹೊಸ ಆವಿಷ್ಕಾರ ಮಾಡುವ, ವರಮಾನ ಗಳಿಕೆಯ ಹೊಸ ಮಾರ್ಗಗಳನ್ನು ಕಂಡುಕೊಂಡು ಅದನ್ನು ಇತರರಿಗೂ ಹೇಳಿಕೊಡುವ ಪ್ರಗತಿಪರ ರೈತರನ್ನು ಈ ಗೌರವಕ್ಕೆ ಪರಿಗಣಿಸಲಾಗುತ್ತದೆ. ಈ ವರ್ಷವೇ ಗೌರವ ನೀಡಬೇಕಿತ್ತು. ಕೋವಿಡ್‌ ಕಾರಣ ಸಾಧಕರನ್ನು ಗುರುತಿಸುವುದು ಸಾಧ್ಯವಾಗಲಿಲ್ಲ’ ಎಂದರು.

‘ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ನಮಗೆ ಪೂರಕವಾಗಿದೆ. ಹೀಗಾಗಿ ಅದರ ಜಾರಿಗೆ ಯಾವುದೇ ತೊಡಕುಗಳಿಲ್ಲ. ಎನ್‌ಇಪಿಯಲ್ಲಿ ಉಲ್ಲೇಖಿಸಿರುವ ಬಹುಪಾಲು ಅಂಶಗಳನ್ನು ನಾವು ಹಿಂದಿನಿಂದಲೂ ಅನುಸರಿಸಿಕೊಂಡು ಬಂದಿದ್ದೇವೆ. ಇದೇ 28ರಂದು ನಡೆಯುವ ರಾಷ್ಟ್ರೀಯ ಮಟ್ಟದ  ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗುವುದು’ ಎಂದು ಹೇಳಿದರು.

‘ಶೇ 60ರಿಂದ 65ರಷ್ಟು ಏಕೀಕೃತ ಪಠ್ಯಕ್ರಮವನ್ನು ಅಳವಡಿಸುವ ಬಗ್ಗೆ ಚಿಂತನೆ ನಡೆದಿದೆ. ಯಾವ ಯಾವ ವಿಭಾಗಗಳಲ್ಲಿ ಕೌಶಲ ತರಬೇತಿಯ ಅಗತ್ಯವಿದೆ ಎಂಬುದನ್ನು ತಿಳಿದುಕೊಂಡು ಅದನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

‘ಮುಂದಿನ ವಾರದಿಂದ ಭೌತಿಕ ತರಗತಿಗಳನ್ನು ಆರಂಭಿಸುವ ಆಲೋಚನೆ ಇದೆ. ಕೋವಿಡ್‌ ಇದ್ದರೂ ನಮ್ಮಲ್ಲಿನ ಯಾವ ಕೋರ್ಸ್‌ಗೂ ಬೇಡಿಕೆ ಕಡಿಮೆಯಾಗಿಲ್ಲ. 4 ಸಾವಿರ ಸ್ಥಾನಗಳಿಗೆ ಸುಮಾರು 1 ಲಕ್ಷ ಅರ್ಜಿಗಳು ಬಂದಿವೆ. ವಿದೇಶಿ ವಿಶ್ವವಿದ್ಯಾಲಯಗಳ ಸಹಯೋಗದಲ್ಲಿ ಹಲವು ಆನ್‌ಲೈನ್‌ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಆನ್‌ಲೈನ್‌ ಸರ್ಟಿಫಿಕೇಷನ್‌ ಕೋರ್ಸ್‌ ಕೂಡ ಶುರುಮಾಡಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೀಟಶಾಸ್ತ್ರ ವಿಭಾಗ: ಚಿನ್ನದ ಪದಕ ಪ್ರದಾನ ಇಲ್ಲ’
‘ಕೀಟಶಾಸ್ತ್ರ ವಿಭಾಗದ (ಪಿ.ಎಚ್‌ಡಿ) ಚಿನ್ನದ ಪದಕ ಪ್ರದಾನವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ’ ಎಂದು ರಾಜೇಂದ್ರ ಪ್ರಸಾದ್‌ ಹೇಳಿದರು.

‘ಸರಾಸರಿ ಅಂಕ ಗಳಿಕೆಯಲ್ಲಿ ಮುಂಚೂಣಿಯಲ್ಲಿದ್ದ ವಿದ್ಯಾರ್ಥಿನಿಯೊಬ್ಬರಿಗೆ ಚಿನ್ನದ ಪದಕ ನೀಡಬೇಕಿತ್ತು. ಆಕೆ ಮಂಡಿಸಿದ ಎರಡು ಪ್ರಬಂಧಗಳು ಯಾವುದಾದರೂ ಪತ್ರಿಕೆಯಲ್ಲಿ ಪ್ರಕಟವಾಗಿರಬೇಕು. ಆಕೆಯ ಒಂದು ಪ್ರಬಂಧ ಪತ್ರಿಕೆಯಲ್ಲಿ ಪ್ರಕಟವಾಗಿಲ್ಲ ಎಂದು ನಾಗರಾಜ್‌ ಎಂಬುವವರು ದೂರಿದ್ದು, ಅಗತ್ಯ ದಾಖಲೆಗಳನ್ನು ಸಲ್ಲಿಸುವುದಾಗಿ ಹೇಳಿದ್ದಾರೆ’ ಎಂದರು.

‘ನಾಗರಾಜ್‌ ಸಲ್ಲಿಸಲಿರುವ ದಾಖಲೆಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗಿದೆ. ಸಮಿತಿಯ ವರದಿಯ ಆಧಾರದಲ್ಲಿ ಅರ್ಹರಿಗೆ ಚಿನ್ನದ ಪದಕ ಪ್ರದಾನ ಮಾಡಲಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು