ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿನ್ನದ ಗಣಿ ಸರ್ವೆಗೆ ಜಾಗತಿಕ ಟೆಂಡರ್‌: ಮುರುಗೇಶ್ ನಿರಾಣಿ

ಅಧಿಕಾರಿಗಳ ಸಭೆ
Last Updated 26 ಮೇ 2021, 21:53 IST
ಅಕ್ಷರ ಗಾತ್ರ

ಕೆಜಿಎಫ್‌: ರಾಜ್ಯದ ಬಿಜಿಎಂಎಲ್‌ ಮತ್ತು ಹಟ್ಟಿ ಚಿನ್ನದ ಗಣಿಗಳಲ್ಲಿ ತೆಗೆದ ಮಣ್ಣಿನಲ್ಲಿ ಸಿಗುವ ಚಿನ್ನದ ಅದಿರನ್ನು ಸಂಸ್ಕರಿಸಲು ಮತ್ತು ಗಣಿಗಳನ್ನು ನವೀಕರಣ ಮಾಡಲು ಅವಶ್ಯಕತೆ ಇರುವ ತಂತ್ರಜ್ಞಾನ ಪಡೆಯಲು ಜಾಗತಿಕ ಟೆಂಡರ್ ಕರೆಯಲು ನಿರ್ಧರಿಸಲಾಗಿದೆ ಎಂದು ಗಣಿ ಸಚಿವ ಮುರುಗೇಶ್‌ ನಿರಾಣಿ ಹೇಳಿದ್ದಾರೆ.

ಬಿಜಿಎಂಎಲ್‌ ನಲ್ಲಿ 32 ಮಿಲಿಯನ್‌ ಟನ್‌ ಮತ್ತು ಹಟ್ಟಿ ಗೋಲ್ಡ್‌ ಮೈನ್ಸ್‌ನಲ್ಲಿ 15 ಮಿಲಿಯನ್‌ ಟನ್‌ ಭೂಮಿಯಿಂದ ತೆಗೆದು ಮಣ್ಣು (ಟೇಲ್‌ಡಂಪ್‌) ಇದೆ. ಈ ಮಣ್ಣಿನಲ್ಲಿ ಪ್ರತಿ ಟನ್‌ಗೆ 0.7 ಗ್ರಾಂ ಚಿನ್ನ ಸಿಗುವ ಸಂಭವ ಇದೆ. ಇದರ ಜೊತೆಗೆ ಟಂಗ್‌ಸ್ಟನ್‌ ಮತ್ತಿತರ ಖನಿಜಗಳು ಸಿಗುವ ಸಾಧ್ಯತೆ ಇದೆ. ಕೆಜಿಎಫ್ ಚಿನ್ನದ ಗಣಿಗಳಲ್ಲಿ ಒಂದು ಕಾಲದಲ್ಲಿ ಪ್ರತಿ ಟನ್‌ಗೆ 40 ಗ್ರಾಂ ಚಿನ್ನ ಸಿಗುತ್ತಿತ್ತು. ಈಗ ಕಡಿಮೆಯಾಗಿದೆ ಎಂದು ಮಾಹಿತಿ ನೀಡಿದರು.

ಆದ್ದರಿಂದ ಆಧುನಿಕ ತಂತ್ರಜ್ಞಾನ ಹೊಂದಿರುವ ಮತ್ತು ಗಣಿ ಅನುಭವ ಇರುವ ಕಂಪನಿಗಳನ್ನು ಜಾಗತಿಕ ಟೆಂಡರ್ ಮೂಲಕ ಆಹ್ವಾನಿಸಲಾಗುತ್ತಿದೆ. ಸರ್ವೆ ವರದಿ ಆಧರಿಸಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಬುಧವಾರ ಬಿಜಿಎಂಎಲ್‌ನಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ತಿಳಿಸಿದರು.

ಸಂಸದ ಎಸ್‌.ಮುನಿಸ್ವಾಮಿ, ಶಾಸಕಿ ಎಂ.ರೂಪಕಲಾ, ಗಣಿ ಇಲಾಖೆಯ ಕಾರ್ಯದರ್ಶಿ ರವೀಂದ್ರ, ಕಾರ್ಯದರ್ಶಿ ಪಂಕಜ್‌ಕುಮಾರ್ ಪಾಂಡೆ, ಹಟ್ಟಿ ಚಿನ್ನದ ಗಣಿಯ ವ್ಯವಸ್ಥಾಪಕ ನಿರ್ದೇಶಕ ಪ್ರಭುಲಿಂಗ, ನಿರ್ದೇಶಕ ಸಲಗೂರುಮಠ, ಬಿಜಿಎಂಎಲ್‌ ವ್ಯವಸ್ಥಾಪಕ ನಿರ್ದೇಶಕ ರಂಜಿತ್ ರಥ್‌, ಜಿಲ್ಲಾಧಿಕಾರಿ ಆರ್.ಸೆಲ್ವಮಣಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಲಕ್ಕಿಯಾ ಕರುಣಾಗರನ್‌, ನಗರಸಭೆ ಅಧ್ಯಕ್ಷ ವಳ್ಳಲ್‌ಮುನಿಸ್ವಾಮಿ, ನಗರಸಭೆ ಆಯುಕ್ತ ಮೋಹನ್‌ಕುಮಾರ್, ಉಪವಿಭಾಗಾಧಿಕಾರಿ ಸೋಮಶೇಖರ್, ತಹಶೀಲ್ದಾರ್ ಕೆ.ಎನ್‌.ಸುಜಾತ ಹಾಜರಿದ್ದರು.

ಬಿಜಿಎಂಎಲ್ ಆಸ್ಪತ್ರೆಗೆ ಒಂದು ಕೋಟಿ ರೂಪಾಯಿ
ಬಿಜಿಎಂಎಲ್‌ ಆಸ್ಪತ್ರೆಯ ನವೀಕರಣಕ್ಕೆ ಜಿಲ್ಲಾ ಗಣಿ ನಿಧಿಯಿಂದ ಒಂದು ಕೋಟಿ ರೂಪಾಯಿ ನೀಡಲಾಗುವುದು ಎಂದು ಸಚಿವ ನಿರಾಣಿ ತಿಳಿಸಿದರು.

ಬಿಜಿಎಂಎಲ್‌ ಗೆ ಸೇರಿದ 12, 800 ಎಕರೆ ಪ್ರದೇಶದಲ್ಲಿ ಸುಮಾರು 10 ಸಾವಿರ ಎಕರೆಯಷ್ಟು ಜಾಗವನ್ನು ಸರ್ವೆ ಮಾಡಿ ಬಿಜಿಎಂಎಲ್ ಹೆಸರಿಗೆ ಮಾಡಲಾಗಿದೆ. ಉಳಿದ 2,000 ಎಕರೆ ಜಾಗವನ್ನು ಎರಡು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ಉಳಿದ ಜಾಗವನ್ನು ನಂತರದ ದಿನಗಳಲ್ಲಿ ಸರ್ವೆ ಮಾಡಿ ಬಿಜಿಎಂಎಲ್‌ಗೆ ಹಸ್ತಾಂತರ ಮಾಡಲಾಗುವುದು ಎಂದರು.

ಗಣಿ ಪ್ರದೇಶದಲ್ಲಿ ಖಾಲಿ ಇರುವ ಜಾಗದಲ್ಲಿ ಸುಸಜ್ಜಿತವಾಗಿ ಕೈಗಾರಿಕಾ ಪ್ರಾಂಗಣ ಮಾಡಲಾಗುವುದು. ಉದ್ಯೋಗಾವಕಾಶ ಸೃಷ್ಟಿ ಮಾಡಲು ವಿವಿಧ ಕೈಗಾರಿಕೆಗಳಿಗೆ ಆಹ್ವಾನ ಮಾಡಲಾಗುವುದು. ಬೇರೆ ದೇಶದಲ್ಲಿದ್ದು ವಾಪಸ್‌ ಬಂದಿರುವ ಉದ್ಯಮಿಗಳು ಮತ್ತು ತಂತ್ರಜ್ಞರ ಸೇವೆ ಬಳಸಿಕೊಳ್ಳಲಾಗುವುದು ಎಂದರು.

ಬಳ್ಳಾರಿಯಲ್ಲಿ ಗಣಿ ವಿಶ್ವವಿದ್ಯಾಲಯ
ಗಣಿಗಾರಿಕೆ ಹೇರಳವಾಗಿರುವ ಬಳ್ಳಾರಿ ಸುತ್ತಮುತ್ತಲಿನ ಪ್ರದೇಶದಲ್ಲಿ ಗಣಿ ವಿಶ್ವವಿದ್ಯಾಲಯ ಆರಂಭಿಸುವ ಯೋಚನೆ ಇದೆ ಎಂದು ಸಚಿವ ನಿರಾಣಿ ತಿಳಿಸಿದ್ದಾರೆ.

ಕೆಜಿಎಫ್‌ನಲ್ಲಿರುವ ‘ಸ್ಕೂಲ್ ಆಫ್ ಮೈನ್ಸ್‌’ ಅನ್ನು ಮೇಲ್ದರ್ಜೆಗೆ ಏರಿಸಲಾಗುವುದು.ಹಟ್ಟಿ ಚಿನ್ನದ ಗಣಿಯಲ್ಲಿ ಚಿನ್ನದ ಉತ್ಪಾದನಾ ಪ್ರಮಾಣ ಹೆಚ್ಚಿಸಲಾಗುವುದು. ಅಲ್ಲಿ ಉತ್ಪಾದನೆಯಾಗುವ ಚಿನ್ನವನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಬದಲು ಚಿನ್ನದ ನಾಣ್ಯಗಳನ್ನಾಗಿ ಪರಿವರ್ತಿಸಿ ಮಾರಾಟ ಮಾಡ ಲಾಗುವುದು. ನಾಣ್ಯದಲ್ಲಿ ರಾಜ್ಯದ ಪ್ರತಿಷ್ಠರ ಭಾವಚಿತ್ರ ಮುದ್ರಿಸಲಾಗುವುದು. ಜೊತೆಗೆ ಆಭರಣ ತಯಾರು ಮಾಡಲಾಗುವುದು ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT