ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಧ ವಿದ್ಯಾರ್ಥಿನಿಯ ಚಿನ್ನದ ಸಾಧನೆ

ಸ್ಪರ್ಧಾತ್ಮಕ ಪರೀಕ್ಷೆ ಆಕಾಂಕ್ಷಿಗಳಿಗೆ ಯೂಟ್ಯೂಬ್‌ ಮೂಲಕ ಪಾಠ
Last Updated 7 ಸೆಪ್ಟೆಂಬರ್ 2021, 19:46 IST
ಅಕ್ಷರ ಗಾತ್ರ

ಮೈಸೂರು: ‘ಅಪ್ಪ–ಅಮ್ಮ ಓದಲಿಲ್ಲ. ಆದರೆ ಕೂಲಿ ಮಾಡಿ ನನ್ನನ್ನು ಸಾಕಿ ಈ ಹಂತಕ್ಕೆ ತಂದ ಅವರಿಗೆ ಈ ಪದಕವನ್ನು ಅರ್ಪಿಸುವೆ. ಇನ್ನು ಮುಂದೆ ಅವರ ಹೊಣೆ ನನ್ನದು’‌ ಎಂದು ಧನ್ಯತೆಯಿಂದ ನಕ್ಕರು ಅಂಧ ವಿದ್ಯಾರ್ಥಿನಿ ಎಚ್‌.ಎನ್‌.ಲತಾ.

–ನಗರದಲ್ಲಿ ಮಂಗಳವಾರ ನಡೆದ ಮೈಸೂರು ವಿಶ್ವವಿದ್ಯಾಲಯದ 101ನೇ ಘಟಿಕೋತ್ಸವದಲ್ಲಿ, ಎಂ.ಎ. ಕನ್ನಡದಲ್ಲಿ ಚಿನ್ನದ ಪದಕ ಪಡೆದ ಅವರು ಪೋಷಕರ ಶ್ರಮವನ್ನು ಸ್ಮರಿಸಿದರು.

ಕನ್ನಡದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವವರಿಗಾಗಿ ಅವರು ‘ನುಡಿತೋರಣ’ ಎಂಬ ಯೂಟ್ಯೂಬ್‌ ಚಾನಲ್‌ ಆರಂಭಿಸಿದ್ದಾರೆ. ವ್ಯಾಕರಣ, ಸಾಹಿತ್ಯ ಸೇರಿದಂತೆ ಕನ್ನಡದ ವಿಚಾರಗಳ ಕುರಿತು ಪಾಠ ಮಾಡಿ ವಿಡಿಯೊಗಳನ್ನು ಅಪ್‌ಲೋಡ್‌ ಮಾಡುತ್ತಿದ್ದಾರೆ.

‘ಸ್ನಾತಕೋತ್ತರ ಪದವಿಯಲ್ಲಿ ಬ್ರೈಲ್‌ ಲಿಪಿ ಪಠ್ಯ ಇಲ್ಲ. ಹೀಗಾಗಿ, ಪಠ್ಯಗಳನ್ನು ತಂಗಿ ಹಾಗೂ ಸ್ನೇಹಿತರು ರೆಕಾರ್ಡ್‌ ಮಾಡಿಕೊಟ್ಟರು. ಕೋವಿಡ್‌ ಸಮಯದಲ್ಲಿ ತುಂಬಾ ಕಷ್ಟವಾಯಿತು. ಕಂಪ್ಯೂಟರ್‌ನಲ್ಲಿ ನುಡಿ ತಂತ್ರಾಂಶ ಬಳಸಿ ಪ್ರಬಂಧ ಬರೆದೆ. ನಮ್ಮಂಥವರಿಗೆ ತಂತ್ರಜ್ಞಾನ ನೆರವಿಗೆ ಬಂದಿದೆ. ಚಿನ್ನದ ಪದಕ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಎನ್‌ಇಟಿ, ಕೆ–ಸೆಟ್‌ ಪರೀಕ್ಷೆ ಪಾಸ್‌ ಮಾಡಿದ್ದು, ಶಿಕ್ಷಕಿಯಾಗಿ ಕೆಲಸ ಮಾಡುತ್ತೇನೆ’ ಎಂದು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಪಿರಿಯಾಪಟ್ಟಣ ತಾಲ್ಲೂಕಿನ ಹಂಡಿತ
ವಳ್ಳಿಯ ಅವರು ಮಹಾರಾಣಿ ಕಾಲೇಜಿ
ನಲ್ಲಿ ಪದವಿ, ಶಾರದಾ ವಿಲಾಸ ಕಾಲೇಜಿ
ನಲ್ಲಿ ಬಿ.ಇಡಿ ಪದವಿ ಪಡೆದಿದ್ದಾರೆ.

ರೈತನ ಪುತ್ರಿಗೆ 10 ಪದಕ: ಚಾಮರಾಜನಗರ ಜಿಲ್ಲೆಯ ತಮ್ಮಡಹಳ್ಳಿ ರೈತ ಕುಟುಂಬದ ಟಿ.ಎಸ್‌.ಮಾದಲಾಂಬಿಕೆ (ಕನ್ನಡ ಎಂ.ಎ) 10 ಚಿನ್ನದ ಪದಕ ಹಾಗೂ 4 ದತ್ತಿ ಬಹುಮಾನ ಪಡೆದರು.

‘ಕೆಲವು ವರ್ಷದ ಹಿಂದೆ, ಪಕ್ಕದ ಊರಿನ ವಿದ್ಯಾರ್ಥಿಯೊಬ್ಬರು ಪದಕ ಗಳಿಸಿದ್ದನ್ನು ಹೇಳಿದ್ದ ತಂದೆ ನನ್ನಲ್ಲೂ ಮಹತ್ವಾಕಾಂಕ್ಷೆಯನ್ನು ಚಿಗುರಿಸಿದ್ದರು. ಅವರು ಈಗ ಬದುಕಿಲ್ಲ. ಆದರೆ, ಅವರ ಕನಸನ್ನು ನನಸು ಮಾಡಿದ ಖುಷಿ ಇದೆ. ನಾವು ನಾಲ್ವರು ಹೆಣ್ಣು ಮಕ್ಕಳು. ನಾನೇ ಕಿರಿಯವಳು. ತಾಯಿಯನ್ನು ಸಾಕುವ ಜವಾಬ್ದಾರಿಯೂ ನನ್ನ ಮೇಲಿದೆ’ ಎಂದರು.

ಮಗಳ ಜೊತೆ ತಂದೆ ಸಂಭ್ರಮ

ಬೀದರ್‌ ಜಿಲ್ಲೆಯ ಶಹಾಪುರ ಗ್ರಾಮದ ಮೀನಾಕ್ಷಿ (ಎಂ.ಎ ತತ್ವಶಾಸ್ತ್ರ) 6 ಪದಕ, 3 ದತ್ತಿ ಬಹುಮಾನಕ್ಕೆ ಪಾತ್ರರಾದರು. ಕಾರ್ಮಿಕ ತಂದೆ ಭೀಮಾಶಂಕರ್‌ ಕೂಡ ಮಗಳ ಜೊತೆಗಿದ್ದು ಖುಷಿಪ‍ಟ್ಟರು. ಕ್ರಾಫರ್ಡ್ ಭವನದ ಮುಂದೆ ಚಿನ್ನದ ಪದಕ ಹಿಡಿದು ಫೋಟೊ ತೆಗೆಸಿಕೊಂಡರು.

‘ಬಿಬಿಎಂ ಓದಿದ್ದೆ. ಆದರೆ, ತತ್ವಶಾಸ್ತ್ರದಲ್ಲಿ ಆಸಕ್ತಿ ಬಂತು. ಬಡತನವಿದ್ದರೂ, ಕಷ್ಟಗಳು ಎದುರಾದರೂ ವ್ಯಾಸಂಗಕ್ಕೆ ಪೋಷಕರು ಅಡ್ಡಿ ಮಾಡಲಿಲ್ಲ. ನಾಲ್ವರು ಸಹೋದರಿಯರು, ಅಣ್ಣನನ್ನು ಚೆನ್ನಾಗಿ ಓದಿಸಿದ್ದಾರೆ. ನಮ್ಮಿಂದ ಪೋಷಕರಿಗೆ ಉತ್ತಮ ಬದುಕು ಸಿಗಬೇಕೆಂಬುದು ನನ್ನ ಮಹದಾಸೆ’ ಎಂದು ಮೀನಾಕ್ಷಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT