ಮಂಗಳವಾರ, ಮೇ 11, 2021
27 °C

‘ಸಭೆ ಸಮಾರಂಭಗಳಿಂದ ದೂರವಿರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಕೋವಿಡ್‌ ಲಸಿಕೆ ಪಡೆದರೆ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕೊರೊನಾ ಸೋಂಕಿನ ಅಪಾಯದಿಂದ ಪಾರಾಗಲು ಲಸಿಕೆ ಸಹಕಾರಿ. ಹೀಗಾಗಿ 45 ವರ್ಷ ಮೇಲ್ಪಟ್ಟವರೆಲ್ಲಾ ಲಸಿಕೆ ಹಾಕಿಸಿಕೊಳ್ಳಲು ಮುಂದಾಗಬೇಕು’ ಎಂದು ಮಣಿಪಾಲ ಆಸ್ಪತ್ರೆಯ ವೈದ್ಯ ಡಾ.ಸತ್ಯನಾರಾಯಣ ಮೈಸೂರು ಶುಕ್ರವಾರ ತಿಳಿಸಿದರು.

ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಕೊರೊನಾ ನಿಯಂತ್ರಣ ಕುರಿತು ಹಮ್ಮಿಕೊಂಡಿದ್ದ ಆನ್‌ಲೈನ್‌ ಸಂವಾದದಲ್ಲಿ ಅವರು ಮಾತನಾಡಿದರು. 

‘ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಸತಿ ಸಮುಚ್ಚಯಗಳಿಗೆ ಭೇಟಿ ನೀಡಿ ಅಲ್ಲಿನ ನಿವಾಸಿಗಳ ಆರೋಗ್ಯ ತಪಾಸಣೆ ಮಾಡಬೇಕು. ಯಾರು ಲಸಿಕೆ ಪಡೆದಿಲ್ಲವೊ ಅಂತಹವರನ್ನು ಗುರುತಿಸಿ ಅವರಿಗೆ ಮೊದಲು ಲಸಿಕೆ ನೀಡುವ ಕಾರ್ಯವಾಗಬೇಕು. ಯಾರು ರೋಗದ ತೀವ್ರತೆಯಿಂದ ಬಳಲುತ್ತಿದ್ದಾರೆ, ಯಾರಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂಬುದನ್ನು ಗುರುತಿಸಿ ಅಂತಹವರಿಗೆ ಆದ್ಯತೆಯ ಮೇರೆಗೆ ಚಿಕಿತ್ಸೆ ಒದಗಿಸಬೇಕು. ವೈದ್ಯರ ಸಲಹೆ ಮೇರೆಗೆ ಅಗತ್ಯ ಮಾತ್ರೆಗಳನ್ನು ಶಾಸಕರ ಕಚೇರಿಯಿಂದಲೇ ಪೂರೈಸಬೇಕು’ ಎಂದು ಸಲಹೆ ನೀಡಿದರು.

‘ಮಹಾಲಕ್ಷ್ಮಿ ಲೇಔಟ್‌ ಕ್ಷೇತ್ರ ವ್ಯಾಪ್ತಿಯಲ್ಲಿರುವ ಆಸ್ಪತ್ರೆ, ನರ್ಸಿಂಗ್‌ ಹೋಂ ಹಾಗೂ ಕೋವಿಡ್‌ ಕೇಂದ್ರಗಳ ಮಾಹಿತಿ ಪಡೆದುಕೊಳ್ಳಬೇಕು. ಶಾಸಕರ ಕಚೇರಿಯಲ್ಲೇ ಕಾಲ್‌ ಸೆಂಟರ್‌ ತೆರೆದು ಅಲ್ಲಿಂದ ಎಲ್ಲಾ ಆಸ್ಪತ್ರೆಗಳಿಗೆ ಕೋವಿಡ್‌ ದೃಢಪಟ್ಟವರ ಮಾಹಿತಿ ರವಾನಿಸಬೇಕು. ಇದರಿಂದ ರೋಗಿಗಳು ಆಸ್ಪತ್ರೆಗಳಿಗೆ ಅಲೆಯುವುದನ್ನು ತಪ್ಪಿಸಬಹುದು. 60 ವರ್ಷ ಮೇಲ್ಪಟ್ಟವರು, ಕ್ಯಾನ್ಸರ್‌ ಚಿಕಿತ್ಸೆ ಪಡೆಯುತ್ತಿರುವವರು, ಮೂತ್ರಪಿಂಡ ಹಾಗೂ ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿರುವವರು ಮನೆಯಲ್ಲಿ ಪ್ರತ್ಯೇಕ ವಾಸದಲ್ಲಿರುವುದು ಸೂಕ್ತವಲ್ಲ. ಉಸಿರಾಟದ ತೊಂದರೆ ಇರುವವರು ಆಸ್ಪತ್ರೆಗೆ ದಾಖಲಾಗಬೇಕು’ ಎಂದರು.   

ಮಣಿಪಾಲ್‌ ಆಸ್ಪತ್ರೆಯ ವೈದ್ಯ ಕೆ.ಎಸ್‌.ಸತೀಶ್‌ ‘ಮಧುಮೇಹ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿರುವವರಿಗೆ ತೊಂದರೆ ಜಾಸ್ತಿ.  ಎರಡನೇ ಅಲೆಯಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತದೆ. ಹೀಗಾಗಿ ಸಭೆ, ಸಮಾರಂಭಗಳಿಂದ ದೂರ ಉಳಿಯಬೇಕು. ಲಸಿಕೆ ಪಡೆದರೆ ಕೋವಿಡ್‌ ಬರಲ್ಲ ಎಂಬುದು ತಪ್ಪು ತಿಳಿವಳಿಕೆ. ಲಸಿಕೆ ಹಾಕಿಸಿಕೊಂಡ ನಂತರವೂ ಕೋವಿಡ್‌ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದು ತಿಳಿಸಿದರು. 

ಆರೋಗ್ಯ ಇಲಾಖೆಯ ಆಯುಕ್ತ ಡಾ.ಕೆ.ವಿ.ತ್ರಿಲೋಕ್‌ ಚಂದ್ರ ‘ಬೆಂಗಳೂರಿನಲ್ಲಿ ಈಗ ಹೆಚ್ಚೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ರೋಗ ಲಕ್ಷಣಗಳು ಕಾಣಿಸಿಕೊಂಡ ತಕ್ಷಣವೇ ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳಬೇಕು. ಎಲ್ಲರಿಗೂ ಲಸಿಕೆಯ ಮಹತ್ವದ ಬಗ್ಗೆ ಅರಿವು ಮೂಡಿಸಬೇಕು’ ಎಂದರು.

ಸಚಿವ ಕೆ.ಗೋಪಾಲಯ್ಯ ‘ಜನರು ಭಯಪಡುವ ಅಗತ್ಯವಿಲ್ಲ. ಏನೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತನ್ನಿ. ಒಂದೊಮ್ಮೆ ನಾನು ಅಲಭ್ಯನಾದರೆ ಶಾಸಕರ ಕಚೇರಿಗೆ ಭೇಟಿ ನೀಡಿ ಅಲ್ಲಿರುವ ಸಿಬ್ಬಂದಿ ಜೊತೆ ಚರ್ಚಿಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಮಹಾಲಕ್ಷ್ಮಿ ಎಜುಕೇಷನ್‌ ಟ್ರಸ್ಟ್‌ ಮೂಲಕ ಸೋಮವಾರದಿಂದಲೇ ಜನರಿಗೆ ಅಗತ್ಯ ಮಾತ್ರೆ ಹಾಗೂ ಇತರ ಪರಿಕರಗಳನ್ನು ಪೂರೈಸುವ ಕೆಲಸ ಮಾಡಲಿದ್ದೇವೆ’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.