ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜು: ಶುಲ್ಕ ಹೆಚ್ಚಳ

Last Updated 2 ಡಿಸೆಂಬರ್ 2021, 20:08 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ರಾಜ್ಯ ಸರ್ಕಾರ ₹ 10 ಸಾವಿರ ಶುಲ್ಕ ಹೆಚ್ಚಿಸಿದೆ.

ಈ ಹಿಂದೆ ಸರ್ಕಾರಿ ಕಾಲೇಜುಗಳಿಗೆ ವಿದ್ಯಾರ್ಥಿಗಳು ಒಟ್ಟು ₹ 23,810 ಪಾವತಿ ಮಾಡಬೇಕಿತ್ತು. ಶುಲ್ಕ ಪರಿಷ್ಕರಿಸಿರುವುದರಿಂದ ವಿದ್ಯಾರ್ಥಿಗಳು ₹ 33,810 ಪಾವತಿಸಬೇಕಿದೆ.

ಸರ್ಕಾರ ವಿವಿಧ ಕಾರಣಗಳಿಂದಾಗಿ ನಾಲ್ಕು ವರ್ಷಗಳಿಂದ ಎಂಜಿನಿಯರಿಂಗ್‌ ಕಾಲೇಜುಗಳ ಶುಲ್ಕ ಹೆಚ್ಚಳ ಮಾಡಿರಲಿಲ್ಲ. ಪ್ರಸಕ್ತ ಸಾಲಿಗೆ ಶೇ 25ರಿಂದ 30ರಷ್ಟು ಶುಲ್ಕ ಹೆಚ್ಚಳಕ್ಕೆ ಅವಕಾಶ ನೀಡುವಂತೆ ಖಾಸಗಿ ಎಂಜಿನಿಯರಿಂಗ್‌ ಕಾಲೇಜು ಆಡಳಿತ ಮಂಡಳಿಗಳು ಮನವಿ ಮಾಡಿದ್ದವು. ಆದರೆ, ಕೋವಿಡ್‌ನಿಂದಾಗಿ ಈ ವರ್ಷ ಶುಲ್ಕ ಹೆಚ್ಚಳ ಮಾಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿತ್ತು.

ಬೋಧನಾ ಶುಲ್ಕದೊಂದಿಗೆ ಸ್ಕಿಲ್‌ ಲ್ಯಾಬ್‌ ಹಾಗೂ ಇತರ ಶುಲ್ಕಗಳನ್ನು ₹ 20 ಸಾವಿರಗಳಿಗಿಂತ ಹೆಚ್ಚಳ ಮಾಡದಂತೆ ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳಿಗೆ ಸೂಚಿಸಿತ್ತು. ಆದರೆ, ನ. 30ರಂದು ಶುಲ್ಕ ಹೆಚ್ಚಿಸಿದ್ದು, ಪರಿಷ್ಕೃತ ಶುಲ್ಕ ಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.

‘ಕೆಇಎ ಸೀಟ್‌ ಮ್ಯಾಟ್ರಿಕ್ಸ್‌ ಹೊರಡಿಸಿದ್ದಾಗ ಆಪ್ಷನ್‌ ಎಂಟ್ರಿ ಸಮಯದಲ್ಲೂ ಶುಲ್ಕ ₹ 23,810 ಇತ್ತು. ಆದರೆ, ಅಂತಿಮವಾಗಿ ಸೀಟು ಆಯ್ಕೆ ಮಾಡಿಕೊಂಡು ಶುಲ್ಕ ಪಾವತಿಸುವ ವೇಳೆಗೆ ₹ 33,810 ತೋರಿಸುತ್ತಿದೆ. ಈ ಬಾರಿ ಎಂಜಿನಿಯರಿಂಗ್‌ ಶುಲ್ಕ ಹೆಚ್ಚಳವಿಲ್ಲ ಎಂದು ಹೇಳಿದ್ದ ಸರ್ಕಾರ ದಿಢೀರನೆ ಶುಲ್ಕ ಹೆಚ್ಚಿಸಿದೆ’ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT