ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆ ಮುಚ್ಚಲು ಹೆಚ್ಚುವರಿ ಶಿಕ್ಷಕರ ಅಸ್ತ್ರ: ನಿರಂಜನಾರಾಧ್ಯ

Last Updated 17 ಜನವರಿ 2023, 11:40 IST
ಅಕ್ಷರ ಗಾತ್ರ

ಬೆಂಗಳೂರು: ಮಕ್ಕಳ ಸಂಖ್ಯೆ ಕಡಿಮೆ ಇರುವ ಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರ ಪಟ್ಟಿ ತಯಾರಿಸಿ, ಶಿಕ್ಷಕರ ಮರು ಹೊಂದಾಣಿಕೆ ಮಾಡುವ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ಸರ್ಕಾರ ಹೊರಟಿದೆ ಎಂದು ಅಭಿವೃದ್ಧಿ ಶಿಕ್ಷಣ ತಜ್ಞ ವಿ.ಪಿ. ನಿರಂಜನಾರಾಧ್ಯ ಆರೋಪಿಸಿದ್ದಾರೆ.

ಶೈಕ್ಷಣಿಕ ವರ್ಷದ ಕೊನೆಯಲ್ಲಿ ಶಿಕ್ಷಣ ಇಲಾಖೆ ಶಾಲಾ ಶಿಕ್ಷಕರ ಮರು ಹೊಂದಾಣಿಕೆ ಪ್ರಾರಂಭಿಸಿರುವುದು ಸರಿಯಾದ ಕ್ರಮವಲ್ಲ. ಶಾಲೆಗಳು 2022-23ನೇ ಶೈಕ್ಷಣಿಕ ವರ್ಷ ಪೂರೈಸುತ್ತಿವೆ. ಶಿಕ್ಷಕರು ನಿಗದಿತ ಪಠ್ಯ, ಮೌಲ್ಯಾಂಕನ ಮುಗಿಸಿ, ಮಕ್ಕಳ ಕಲಿಕೆ ಪರಾಮರ್ಶಿಸುತ್ತಿರುವ ಸಮಯದಲ್ಲಿ ಶಿಕ್ಷಕರನ್ನು ಮಾನಸಿಕವಾಗಿ ತೊಂದರೆಗೆ ಗುರಿಪಡಿಸುವುದು ಮಕ್ಕಳ ಶೈಕ್ಷಣಿಕ ದೃಷ್ಟಿಯಿಂದ ಅವೈಜ್ಞಾನಿಕ ಕ್ರಮ. ಈ ವಿಧಾನ ಶಿಕ್ಷಣ ಹಕ್ಕು ಕಾಯಿದೆಗೆ ಗೊತ್ತುಪಡಿಸಿರುವ ಪ್ರಾಥಮಿಕ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಇರಬೇಕಾದ ಕನಿಷ್ಠ ಶಿಕ್ಷಕರ ಸಂಖ್ಯೆಗೆ ವಿರುದ್ಧ. ಈ ಪ್ರಕ್ರಿಯೆ ಸರ್ಕಾರಿ ಕನ್ನಡ ಶಾಲೆಗಳಿಗೆ ಮಾರಕವಾಗಿ ಪರಿಣಮಿಸಲಿದೆ ಎಂದು ಎಚ್ಚರಿಸಿದ್ದಾರೆ.

ಪ್ರತಿಯೊಬ್ಬ ಶಿಕ್ಷಕ ತನ್ನದೇ ಕಲಿಕಾ ಯೋಜನೆ ಹೊಂದಿರುತ್ತಾನೆ. ಈ ಘಟ್ಟದಲ್ಲಿ ಹೆಚ್ಚುವರಿ ಮರು ಹೊಂದಾಣಿಕೆ ಪ್ರಕ್ರಿಯೆ ಶಿಕ್ಷಕರ ಆತ್ಮಸ್ಥೈರ್ಯವನ್ನು ಕುಗ್ಗಿಸುತ್ತದೆ. ಇದರಿಂದ ಸರ್ಕಾರಿ ಶಾಲೆಗಳ ಖಾಸಗೀಕರಣಕ್ಕೆ ಅನುವು ಮಾಡಿಕೊಡಬೇಕೆಂಬ ರಾಷ್ಟ್ರೀಯ ಶಿಕ್ಷಣ ನೀತಿಯ ಹುನ್ನಾರ ಬಯಲಾಗುತ್ತಿದೆ ಎಂದಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ ಮಂಜೂರಾಗಿರುವ ಶಿಕ್ಷಕರ ಹುದ್ದೆಗಳಲ್ಲಿ 1,41,358 ಖಾಲಿ ಇವೆ. ದೇಶದಲ್ಲಿ ಅತಿ ಹೆಚ್ಚು ಶಿಕ್ಷಕರ ಹುದ್ದೆ ಖಾಲಿ ಇರುವ ರಾಜ್ಯ ಕರ್ನಾಟಕ. ಖಾಲಿ ಹುದ್ದೆಗಳನ್ನು ತುಂಬದೆ, ಹೆಚ್ಚುವರಿ ನೆಪದಲ್ಲಿ ಸರ್ಕಾರಿ ಶಾಲೆಗಳ ಸುಧಾರಣೆಗೆ ಕ್ರಮ ಕೈಗೊಳ್ಳುತ್ತೇವೆ ಎಂಬುದು ಹಾಸ್ಯಾಸ್ಪದ. ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ, 2017ರ ಸರ್ಕಾರಿ ಶಾಲೆಗಳ ಸಬಲೀಕರಣ ವರದಿ ಅನ್ವಯ ವಿಷಯವಾರು, ತರಗತಿವಾರು ಹುದ್ದೆಗಳನ್ನು ಮಂಜೂರು ಮಾಡುವ ಮೂಲಕ ಶಾಲೆಗಳ ಬಲವರ್ಧನೆಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT