ಸೋಮವಾರ, ಜೂನ್ 14, 2021
21 °C

ಆಕ್ಸಿಜನ್‌ ಕೊರತೆಯಿಂದ ಜೀವ ಹೋದರೆ ಸರ್ಕಾರ ಹೊಣೆ: ಎಚ್‌.ಕೆ. ಪಾಟೀಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ರಾಜ್ಯದಲ್ಲಿ ಕೊರೊನಾ ದಿನೇ ದಿನೇ ಇನ್ನಷ್ಟು ಗಂಭೀರವಾಗುತ್ತಿದೆ. ಸರ್ಕಾರದ ಅವ್ಯವಸ್ಥೆ, ಸಮಯೋಚಿತ ನಿರ್ಣಯಗಳ ಕೊರತೆ ಹಾಗೂ ಮುಂದಾಲೋಚನೆ ಇಲ್ಲದ ಕ್ರಮಗಳಿಂದ ಜನರು ತೊಂದರೆಗೆ ಸಿಲುಕಿದ್ದಾರೆ. ಆಂಬುಲೆನ್ಸ್, ಹಾಸಿಗೆ, ಸಿಬ್ಬಂದಿ ಸಮಸ್ಯೆಯ ನಂತರ ಖಾಸಗಿ ಆಸ್ಪತ್ರೆಗಳಲ್ಲಾದ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಈಗ ಆಕ್ಸಿಜನ್ ಸಮಸ್ಯೆ ಎದುರಾಗಿದೆ’ ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿ ಅಧ್ಯಕ್ಷರೂ ಆಗಿರುವ ಕಾಂಗ್ರೆಸ್‌ ಶಾಸಕ ಎಚ್.ಕೆ. ಪಾಟೀಲ ಹೇಳಿದರು.

ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ‘ಗುಜರಾತ್‌ನ ಮೆಹತಾ ಕಂಪನಿಗೆ ಆಕ್ಸಿಜನ್‌ ಪೂರೈಕೆ ಗುತ್ತಿಗೆ ಕೊಟ್ಟು ತೊಂದರೆ ಮಾಡಿಕೊಂಡರು. ಆ ಕಂಪನಿಯಿಂದ ಇನ್ನೂ ಆಕ್ಸಿಜನ್ ಬಂದಿಲ್ಲ. ದೂರದೃಷ್ಟಿಯಿಂದ ಸರ್ಕಾರ ವ್ಯವಸ್ಥೆ ಮಾಡಿಲ್ಲ’ ಎಂದು ದೂರಿದರು.

‘ರಾಜ್ಯದಲ್ಲಿ 24,500 ರೋಗಿಗಳಿಗೆ ಆಕ್ಸಿಜನ್ ಅಗತ್ಯವಿದೆ. ಇದರಲ್ಲಿ ಒಂದು ಸಾವಿರ ಜನರಿಗೆ ಆಕ್ಸಿಜನ್ ಕೊಡಲೇಬೇಕಾದ ಅನಿವಾರ್ಯ ಸ್ಥಿತಿ ಇದೆ. ಆದರೆ, ಸರ್ಕಾರ ಕೇವಲ 12 ಸಾವಿರ ಆಕ್ಸಿಜನ್ ಬೆಡ್ ಸಿದ್ದಪಡಿಸಿದೆ. ಎಲ್ಲೆಡೆ ಆಕ್ಸಿಜನ್ ಕೊರತೆ ಇದೆ’ ಎಂದೂ ಅವರು ಹೇಳಿದರು.

‘80 ಕಿ.ಮೀ ಹಾಗೂ 100 ಕಿ. ಮೀ.ಗಿಂತ ದೂರ ಆಕ್ಸಿಜನ್‌ ಸಾಗಣೆ ಮಾಡಲು ಸಾಧ್ಯವಿಲ್ಲವೆಂದು ತಾಂತ್ರಿಕ ಕಾರಣವನ್ನು ಸರ್ಕಾರ ನೀಡಬಹುದು. ಆದರೆ, ಅಂಥ ಸಂಧರ್ಭದಲ್ಲಿ ವಿಮಾನ, ಹೆಲಿಕಾಪ್ಟರ್ ಬಳಸಿಕೊಳ್ಳಲಿ’ ಎಂದು ಸಲಹೆ ನೀಡಿದ ಅವರು, ‘ನಾಲ್ಕು ತಿಂಗಳ ಲಾಕ್‌ಡೌನ್‌ ನಂತರವೂ ಸರ್ಕಾರ ಆಕ್ಸಿಜನ್ ವ್ಯವಸ್ಥೆ ಮಾಡಿಲ್ಲ. ಆಕ್ಸಿಜನ್ ಕೊರತೆಯಿಂದ ಕೊರೊನಾ ರೋಗಿಗಳ ಜೀವಕ್ಕೇ ಆಪತ್ತು ತಂದಿದೆ. ಒಂದೇ ಒಂದು ಜೀವ ಹೋದರೂ ಸರ್ಕಾರವೇ ಹೊಣೆ. ಆಕ್ಸಿಜನ್ ವ್ಯವಸ್ಥೆಗೆಂದೇ ಸರ್ಕಾರ ಒಂದು ಕಾರ್ಯಪಡೆ ರಚಿಸಬೇಕು’ ಎಂದೂ ಒತ್ತಾಯಿಸಿದರು.

‘ಬೆಂಗಳೂರು ವಸ್ತುಪ್ರದರ್ಶನ ಕೇಂದ್ರದಲ್ಲಿ ಆರಂಭಿಸಿರುವ ಕೋವಿಡ್‌ ಕೇರ್‌ ಸೆಂಟರ್‌ನಲ್ಲಿ ರೋಗಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. 15 ರೋಗಿಗಳಿಗೆ ಒಂದು ಶೌಚಾಲಯವಿದೆ. ಇದು ಸರ್ಕಾರದ ನಾಚಿಕೆಗೇಡಿನ ಸ್ಥಿತಿ’ ಎಂದು ಅವರು ದೂರಿದರು.

ರೈತ ವಿರೋಧಿ ನೀತಿ: ‘ಭೂಸುಧಾರಣಾ ಕಾಯ್ದೆಗೆ ತಿದ್ದುಪಡಿ ಮಾಡಿ ಸುಗ್ರೀವಾಜ್ಞೆ ಹೊರಡಿಸಿರುವುದು ರೈತ ವಿರೋಧಿ ಕ್ರಮ. ಇದು ಕರಾಳ ಸುಗ್ರೀವಾಜ್ಞೆ. ಆರ್ಥಿಕ ಸಂಕಷ್ಟದಲ್ಲಿರುವ ರೈತರ ಭೂಮಿ ಮಾರುವ ಕಾನೂನು ತಂದಿರುವುದು ಮಾರಕ. ಕಾನೂನು ಮೀರಿ ಕೃಷಿ ಭೂಮಿ ಖರೀದಿಸಿರುವ ಐದರಿಂದ ಎಂಟು ಸಾವಿರ ಪ್ರಕರಣಗಳಿವೆ. ಅವುಗಳನ್ನು ಸಕ್ರಮಗೊಳಿಸಲು ಸರ್ಕಾರ ಈ ಸುಗ್ರೀವಾಜ್ಞೆ ಬಳಸುತ್ತಿದೆ. ಇಂಥ ಕೆಲಸಕ್ಕೆ ಚಾಲನೆ ಕೊಡುವ ಉದ್ದೇಶವಾರೂ ಏನು’ ಎಂದು ಅವರು ಪ್ರಶ್ನಿಸಿದರು.

‘ಕೊರೊನಾ ನಿಯಂತ್ರಣ ಹಾಗೂ ಚಿಕಿತ್ಸೆಯ ವ್ಯವಸ್ಥೆ ಮಾಡಲಾಗದ ಸರ್ಕಾರಕ್ಕೆ ಈ ಸುಗ್ರೀವಾಜ್ಞೆ ಜಾರಿಗೆ ಅವಸರ ಏಕೆ. ಅಧಿವೇಶನದಲ್ಲಿ ಚರ್ಚೆ ಮಾಡದೆ ಸುಗ್ರೀವಾಜ್ಞೆ ಅನುಷ್ಠಾನ ಮಾಡುವುದು ಸರಿಯಲ್ಲ. ಭೂಮಿ ಖರೀದಿ ಮಾಡಿದಾಗ ರೈತರು ಅತ್ಯಂತ ಕಡಿಮೆ ಬೆಲೆಗೆ ಖರೀದಿ ಮಾಡಿದ್ದರೂ ಕೂಡ ಇಂದು ಕೋಟ್ಯಂತರ ಬೆಲೆ ಇದೆ. ಹೀಗಾಗಿ ರೈತರ ಭೂಮಿಯನ್ನು ಇಂದಿನ ಬೆಲೆಗೆ ಖರೀದಿ ಆಗಬೇಕ’ ಎಂದರು.

‘ತೆರಿಗೆ ಸಂಗ್ರಹದಲ್ಲಿ ಕೊರತೆ ಉಂಟಾಗಿ ಅಭಿವೃದ್ಧಿ ಕೆಲಸಗಳು ನಿಂತಿವೆ. ತೆರಿಗೆ ಸಂಗ್ರಹ ಕೊರತೆ ಬಗ್ಗೆ ಲೆಕ್ಕಪತ್ರ ಸಮಿತಿಯಲ್ಲಿ ಚರ್ಚೆ ಮಾಡುತ್ತೇವೆ’ ಎಂದೂ ಅವರು ತಿಳಿಸಿದರು.

‘ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ ಆರಂಭವಾಗಿದೆ. ಮಲಪ್ರಭಾದಲ್ಲಿ 25 ಸಾವಿರ ಕ್ಯುಸೆಕ್ ನೀರು ಹರಿಯುತ್ತಿದೆ. ಇವತ್ತಿನ ಮಳೆ ಪ್ರಮಾಣ ನೋಡಿದರೆ ಪ್ರವಾಹದ ಭೀತಿ ತೀವ್ರವಾಗಿದೆ. ಕಳೆದ ವರ್ಷ ಸರ್ಕಾರ ಮುಂಜಾಗ್ರತಾ ಕ್ರಮ ಕೈಗೊಂಡಿರಲಿಲ್ಲ. ಬೋಟ್ ವ್ಯವಸ್ಥೆ, ಪುನರ್ ವಸತಿ ವ್ಯವಸ್ಥೆ ಮಾಡಿರಲಿಲ್ಲ. ಈ ವರ್ಷ ಹಾಗಾಗಬಾರದು. ಸರ್ಕಾದ ಮುಂಜಾಗ್ರತೆ ವಹಿಸಬೇಕು’ ಎಂದೂ ಅವರು ಹೇಳಿದರು.

‘ಸೈಕಲ್‌ನಲ್ಲಿ ಶವ ತೆಗೆದುಕೊಂಡು ಹೋಗಲು ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’ ಎಂದೂ ಪಾಟೀಲ ಆಗ್ರಹಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು