ಮಂಗಳವಾರ, ಜೂನ್ 22, 2021
22 °C

ಎಸ್‌ಡಿಪಿಐ, ಪಿಎಫ್‌ಐ ನಿಷೇಧಕ್ಕೆ ಮಾಹಿತಿ ಕೋರಿದ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಡಿ.ಜಿ.ಹಳ್ಳಿ ಗಲಭೆಯ ಹಿನ್ನೆಲೆಯಲ್ಲಿ ಕೆಲವು ಸಂಘಟನೆಗಳನ್ನು(ಎಸ್‌ಡಿಪಿಐ, ಪಿಎಫ್‌ಐ) ನಿಷೇಧಿಸುವ ಸಂಬಂಧ ಪೊಲೀಸ್‌ ಇಲಾಖೆಯಿಂದ ಹೆಚ್ಚಿನ ಸಾಕ್ಷ್ಯ ಮತ್ತು ಮಾಹಿತಿ ಕೇಳಲಾಗಿದ್ದು, ಅದರ ಆಧಾರದ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ವಿಸ್ತ್ರೃತ ಚರ್ಚೆ ನಡೆದಿದೆ. ಆದರೆ, ಸಭೆಯಲ್ಲಿ ಯಾವುದೇ ನಿರ್ದಿಷ್ಟ ತೀರ್ಮಾನವನ್ನು ತೆಗೆದುಕೊಂಡಿಲ್ಲ ಎಂದು ಅವರು ಹೇಳಿದರು.

ಸಂಘಟನೆಗಳ ನಿಷೇಧ ಮತ್ತು ಗಲಭೆಕೋರರಿಂದ ದಂಡವನ್ನು ವಸೂಲಿ ಮಾಡುವ ಸಂಬಂಧ ಕಾಯ್ದೆಗೆ ಅಗತ್ಯ ತಿದ್ದುಪಡಿ ಮಾಡಲು ಸಿದ್ಧರಿದ್ದೇವೆ. ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ ಮಾಡಿದರೆ, ದಂಡ ವಸೂಲಿ ಮಾಡುವ ಬಗ್ಗೆ 1981 ರಲ್ಲಿ ಕಾಯ್ದೆಗೆ ತಿದ್ದುಪಡಿ ಮಾಡಲಾಗಿತ್ತು. ಕ್ಲೇಮ್‌ ಕಮಿಷನರ್‌ ನೇಮಕ ಆದ ಬಳಿಕ ಅವರಿಗೆ ಕಾಯ್ದೆಯನ್ನು ಒದಗಿಸಲಾಗುವುದು. ಈ ಸಂಬಂಧ ಉತ್ತರ ಪ್ರದೇಶ ರಾಜ್ಯದಲ್ಲಿ ಉತ್ತಮ ಕಾಯ್ದೆಯೊಂದನ್ನು ರೂಪಿಸಿದ್ದಾರೆ. ಅದನ್ನೂ ಅಧ್ಯಯನ ನಡೆಸಿ ಅಗತ್ಯವಿದ್ದರೆ, ಕಾಯ್ದೆಗೆ ತಿದ್ದುಪಡಿ ಮಾಡಲಾಗುವುದು ಎಂದು ಹೇಳಿದರು.

ಗಲಭೆಯಲ್ಲಿ ಆಸ್ತಿಪಾಸ್ತಿ ಕಳೆದುಕೊಂಡವರಿಗೆ ಪರಿಹಾರ ನೀಡಲು ಗಲಭೆಕೋರರಿಂದಲೇ ದಂಡ ವಸೂಲಿ ಮಾಡಲಾಗುವುದು. ಗಲಭೆಯಲ್ಲಿ ನೇರವಾಗಿ ಭಾಗಿಯಾದರು ಮತ್ತು ಹಿಂದೆ ನಿಂತು ಪ್ರಚೋದಿಸಿದರಿಂದಲೂ ವಸೂಲಿ ಮಾಡುವ ಬಗ್ಗೆ ಚರ್ಚೆ ನಡೆದಿದೆ. ಇನ್ನು ಒಂದು ವಾರದೊಳಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಮಾಧುಸ್ವಾಮಿ ಹೇಳಿದರು.

ಎಸ್‌ಡಿಪಿಐ ಮತ್ತು ಪಿಎಫ್‌ಐ ನಿಷೇಧಿಸಲು ಸಚಿವ ಸಂಪುಟ ಸಭೆಯಲ್ಲಿ ಬಹುತೇಕ ಸಚಿವರು ಒತ್ತಡ ಹೇರಿದರು. ಡಿ.ಜಿ.ಹಳ್ಳಿ ಗಲಭೆ, ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ, ಮಂಗಳೂರು ಗಲಭೆಯಲ್ಲಿ ಈ ಸಂಘಟನೆಗಳ ಕೈವಾಡ ಇರುವುದು ಬೆಳಕಿಗೆ ಬಂದಿದೆ. ಆದ್ದರಿಂದ ನಿಷೇಧ ಮಾಡುವಂತೆ ಕೋರಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು ಸಚಿವರಾದ ಕೆ.ಎಸ್‌.ಈಶ್ವರಪ್ಪ, ಸಿ.ಟಿ.ರವಿ, ಆರ್‌.ಅಶೋಕ, ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು ಎಂದು ಮೂಲಗಳು ತಿಳಿಸಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು