ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲಾಲ್‌ ಕುರಿತು ಸರ್ಕಾರದ ನಿಲುವು ಸ್ಪಷ್ಟಪಡಿಸಲು ಸಿಎಂ ನಕಾರ

ಯಾವುದಕ್ಕೆ ಪ್ರತಿಕ್ರಿಯೆ ಕೊಡಬೇಕು ಗೊತ್ತಿದೆ: ಬೊಮ್ಮಾಯಿ
Last Updated 30 ಮಾರ್ಚ್ 2022, 18:13 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಹಲಾಲ್‌ಗೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಸರ್ಕಾರದ ನಿಲುವು ಸ್ಪಷ್ಟಪಡಿಸಲು ನಿರಾಕರಿಸಿದಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ಯಾವುದಕ್ಕೆ ಪ್ರತಿಕ್ರಿಯೆ ಕೊಡಬೇಕೊ ಅದಕ್ಕೆ ಕೊಡುತ್ತೇವೆ. ಯಾವುದಕ್ಕೆ ಕೊಡಬೇಕು, ಕೊಡಬಾರದು ಎಂದು ಗೊತ್ತಿದೆ’ ಎಂದರು.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ‌ಪ್ರತಿಕ್ರಿಯಿಸಿದ ಅವರು, ‘ಹಲಾಲ್ ವಿರುದ್ಧ ಅಭಿಯಾನ ವಿಚಾರವಾಗಿ ಸರ್ಕಾರದ ನಿಲುವು ಏನೆಂದು ಮುಂದೆ ತಿಳಿಸುತ್ತೇವೆ. ಎಲ್ಲ ಸಂಘಟನೆಗಳು ಹಲವಾರು ವಿಚಾರದಲ್ಲಿ ವಿರೋಧ ಮಾಡುತ್ತಲೇ ಇರುತ್ತವೆ. ಆದರೆ, ಇದಕ್ಕೆಲ್ಲ ಸರ್ಕಾರ ತನ್ನ ನಿಲುವು ಹೇಳುತ್ತಾ ಇರಲು ಆಗುವುದಿಲ್ಲ. ಯಾವಾಗ ನಿಲುವು ವ್ಯಕ್ತಪಡಿಸಬೇಕೊ ಆಗ ವ್ಯಕ್ತಪಡಿಸುತ್ತೇವೆ’ ಎಂದು ಹೇಳಿದರು.

ಪ್ರಗತಿಪರರು, ಸಾಹಿತಿಗಳು ಪತ್ರ ಬರೆದಿರುವ ಕುರಿತು ಕೇಳಿದ ಪ್ರಶ್ನೆಗೆ, ‘ಪತ್ರದಲ್ಲಿರುವ ಅಂಶಗಳನ್ನು ಅಧ್ಯಯನ ಮಾಡಿ ಯಾವ ವಿಚಾರದ ಬಗ್ಗೆ ಏನು ಹೇಳಿದ್ದಾರೆ, ವಾಸ್ತವಾಂಶ ಏನಿದೆ? ಅವರು ಹೇಳಿರುವ ವಿಚಾರವನ್ನು ಪರಿಗಣಿಸಿ, ಎತ್ತಿರುವ ವಿಚಾರಗಳನ್ನು ಯಾವ ರೀತಿ ನಿಭಾಯಿಸಬೇಕು ಎಂದು ತೀರ್ಮಾನ ಮಾಡುತ್ತೇವೆ’ ಎಂದರು.

ಬಲಪಂಥೀಯ ಸಂಘಟನೆಗಳಿಂದ ಪ್ರಚೋದನೆ ವಿಚಾರವಾಗಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ನಮ್ಮ ಸರ್ಕಾರ ಅಭಿವೃದ್ಧಿ ಕಡೆಗೆ ಮಾತ್ರ ಗಮನ ಕೊಡುತ್ತಿದೆ. ಬಲಪಂಥೀಯ, ಎಡಪಂಥೀಯ ಎನ್ನುವುದು ಇಲ್ಲ. ನಾವು ಶಾಂತಿ, ಸಾಮಾನ್ಯ ಜನರ ಭದ್ರತೆ, ಅಭಿವೃದ್ಧಿಗಳಂಥ ಸಿದ್ಧಾಂತಗಳನ್ನು‌ ನಂಬುತ್ತೇವೆ’ ಎಂದು ತಿಳಿಸಿದರು.

ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ಕೈಬಿಡುವ ವಿಚಾರಕ್ಕೆ ಪ್ರತಿಕ್ರಿಯೆ ‌ನೀಡಲು ನಿರಾಕರಿಸಿದ ಮುಖ್ಯಮಂತ್ರಿ, ಪ್ರಶ್ನೆ ಕೇಳಿಸಿಕೊಂಡರೂ ಕೇಳಿಸಿಕೊಳ್ಳದಂತೆ ತೆರಳಿದರು.

‘ಇದುವರೆಗೆ ಬಜೆಟ್ ಅನುಷ್ಠಾನಕ್ಕೆ ಅನುಮೋದನೆ ಸೆಪ್ಟೆಂಬರ್, ಅಕ್ಟೋಬರ್ ಆಗುತ್ತಿತ್ತು. ಇದರಿಂದ ಯೋಜನೆಗಳ ಅನುಷ್ಠಾನ ವಿಳಂಬವಾಗುತ್ತಿತ್ತು. ಹೀಗಾಗಬಾರದು ಎಂದುಏಪ್ರಿಲ್‌ ತಿಂಗಳಾಂತ್ಯದಲ್ಲಿ ಸಿದ್ಧತೆ ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT