ಶನಿವಾರ, ಸೆಪ್ಟೆಂಬರ್ 18, 2021
28 °C
ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಹೇಳಿಕೆ

ರೋಗಗ್ರಸ್ತ ಕಾರ್ಖಾನೆಗಳ ಬಂಡವಾಳ ಹಿಂತೆಗೆತ: ಮುರುಗೇಶ್ ನಿರಾಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಿರಂತರ ನಷ್ಟದಿಂದ ರೋಗಗ್ರಸ್ತವಾಗಿರುವ ರಾಜ್ಯ ಸರ್ಕಾರಿ ಸ್ವಾಮ್ಯದ ನಿಗಮಗಳನ್ನು ಪುನಶ್ಚೇತನಗೊಳಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ಆರ್‌. ನಿರಾಣಿ ತಿಳಿಸಿದರು.

ವಿಧಾನಸೌಧದಲ್ಲಿರುವ ತಮ್ಮ ಕಚೇರಿಗೆ ಶುಕ್ರವಾರ ಪೂಜೆ ಸಲ್ಲಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಲಬುರ್ಗಿಯ ಸಿಮೆಂಟ್‌ ಕಾರ್ಪೋರೇಷನ್‌, ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ, ಮಂಡ್ಯದ ಮೈಷುಗರ್ಸ್‌ ಸಕ್ಕರೆ ಕಾರ್ಖಾನೆ ಸೇರಿದಂತೆ ಸರ್ಕಾರಿ ಸ್ವಾಮ್ಯದ ಹಲವು ಉದ್ದಿಮೆಗಳು, ನಿಗಮಗಳು ರೋಗಗ್ರಸ್ತವಾಗಿವೆ. ಅವುಗಳಿಂದ ಸರ್ಕಾರದ ಬಂಡವಾಳ ಹಿಂಪಡೆದು, ಪುನಶ್ಚೇತನಗೊಳಿಸಿ ಲಾಭದತ್ತ ಕೊಂಡೊಯ್ಯುವ ಚಿಂತನೆ ನಡೆದಿದೆ’ ಎಂದರು.

ಎರಡು ದಿನಗಳ ಹಿಂದೆ ದೆಹಲಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಸರ್ಕಾರಿ ಸ್ವಾಮ್ಯದ ನಿಗಮಗಳು ಮತ್ತು ಉದ್ದಿಮೆಗಳ ಪುನಶ್ಚೇತನಕ್ಕೆ ಇರುವ ಅವಕಾಶಗಳ ಕುರಿತು ಕೇಂದ್ರ ಕೈಗಾರಿಕಾ ಸಚಿವರ ಜತೆ ಚರ್ಚೆ ನಡೆಸಲಾಗಿದೆ. ಶೀಘ್ರದಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು ಎಂದರು ಹೇಳಿದರು.

ಕೈಗಾರಿಕಾ ಉದ್ದೇಶಕ್ಕಾಗಿ ಮಂಜೂರು ಮಾಡಿರುವ ಜಮೀನುಗಳನ್ನು ಅನ್ಯ ಉದ್ದೇಶಕ್ಕೆ ಬಳಸುವಂತಿಲ್ಲ. ಷರತ್ತು ಉಲ್ಲಂಘಿಸಿ ಅನ್ಯ ಉದ್ದೇಶಕ್ಕೆ ಜಮೀನು ಬಳಸುವವರ ವಿರುದ್ಧ ಕ್ರಮ ಜರುಗಿಸಲಾಗುವುದು. ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಯಾವ ಉದ್ದೇಶಕ್ಕೆ ಜಮೀನು ಹಂಚಿಕೆ ಮಾಡಿದೆಯೊ ಅದೇ ಉದ್ದೇಶಕ್ಕೆ ಬಳಕೆ ಮಾಡಬೇಕು. ಅನ್ಯ ಉದ್ದೇಶಕ್ಕೆ ಬಳಸಿರುವುದು ಕಂಡುಬಂದರೆ ಅಂತಹವರ ವಿರುದ್ಧ ತನಿಖೆಗೆ ಆದೇಶಿಸಲಾಗುವುದು ಎಂದರು.

ಕೆಜಿಎಫ್‌ನಲ್ಲಿ ಚಿನ್ನದ ಗಣಿಗಾರಿಕೆ ಸ್ಥಗಿತಗೊಂಡಿರುವ ಪ್ರದೇಶದಲ್ಲಿನ 3,200 ಎಕರೆ ಜಮೀನನ್ನು ಪಡೆದುಕೊಂಡು, ಉಪನಗರ ನಿರ್ಮಿಸುವ ಪ್ರಸ್ತಾವವಿದೆ. ರಾಜ್ಯದಲ್ಲಿ ಯಾವುದೇ ಕೈಗಾರಿಕೆಗಳು ಬಾಗಿಲು ಮುಚ್ಚಲು ಅವಕಾಶ ನೀಡುವುದಿಲ್ಲ. ದಿನದ 24 ಗಂಟೆಯೂ ಕೈಗಾರಿಕಾ ಚಟುವಟಿಕೆ ನಡೆಸುವುದಕ್ಕೆ ಪೂರಕವಾದ ವಾತಾವರಣ ಕಲ್ಪಿಸಲಾಗುವುದು ಎಂದು ತಿಳಿಸಿದರು.

‘ಫೆಬ್ರುವರಿಯಲ್ಲಿ ನಡೆಯಬೇಕಿದ್ದ ಹೂಡಿಕೆದಾರರ ಸಮ್ಮೇಳನ ಕೋವಿಡ್‌ ಕಾರಣದಿಂದ ವಿಳಂಬವಾಗಿದೆ. ಇನ್ನೂ ದಿನಾಂಕ ನಿಗದಿಯಾಗಿಲ್ಲ. ಮುಖ್ಯಮಂತ್ರಿಯವರ ಜತೆ ಚರ್ಚಿಸಿದ ಬಳಿಕ ಈ ಕುರಿತು ನಿರ್ಧಾರ ಕೈಗೊಳ್ಳಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು