ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜದ ನಿರ್ನಾಮಕ್ಕೆ ಸರ್ಕಾರ ಕುಮ್ಮಕ್ಕು: ಎಚ್‌.ಡಿ. ಕುಮಾರಸ್ವಾಮಿ

ಹೋರಾಟದ ಎಚ್ಚರಿಕೆ ನೀಡಿದ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ
Last Updated 31 ಮಾರ್ಚ್ 2022, 17:49 IST
ಅಕ್ಷರ ಗಾತ್ರ

ಬೆಂಗಳೂರು:‘ಹಿಂದೂ ಪರ ಸಂಘಟನೆಗಳು ಶಾಂತಿ, ಸೌಹಾರ್ದ ಹದಗೆಡಿಸುವ ಕೆಲಸ ಮಾಡುತ್ತಿವೆ. ಸರ್ಕಾರದ ಮೌನವು ಈ ಎಲ್ಲ ಚಟುವಟಿಕೆಗಳಿಗೆ ಸಮ್ಮತಿ ನೀಡಿದೆ. ಸಮಾಜದ ನಿರ್ನಾಮಕ್ಕೆ ಅವಕಾಶ ಕೊಡುತ್ತಿರುವ ಸರ್ಕಾರದ ವಿರುದ್ಧ ಹೋರಾಟ ನಡೆಸಲು ನಿರ್ಧರಿಸಿದ್ದೇನೆ’ ಎಂದು ಜೆ.ಡಿ.ಎಸ್. ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಎಚ್ಚರಿಸಿದರು.

ಲೋಕನಾಯಕ ಜೆ.ಪಿ. ವಿಚಾರ ವೇದಿಕೆ ನಗರದಲ್ಲಿ ಗುರುವಾರ ಆಯೋಜಿಸಿದ ‘ಸರ್ವ ಜನಾಂಗದ ಶಾಂತಿಯ ತೋಟ: ಒಂದು ಭಾವೈಕ್ಯದ ಚರ್ಚೆ’ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದರು.

‘ಕುವೆಂಪು ಅವರ ವಿಶ್ವಮಾನವ ಪರಿಕಲ್ಪನೆಯನ್ನು ಭಜರಂಗದಳ ಹಾಗೂ ಬಿಜೆಪಿಯವರು ಧೂಳಿಪಟ ಮಾಡಲು ಹೊರಟಿದ್ದಾರೆ. ಶಾಂತಿ, ಸೌಹಾರ್ದ ಕೆಡಿಸುವ ಸಂದೇಶಗಳನ್ನುಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಡುವವರ ವಿರುದ್ಧ ಸರ್ಕಾರ ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಸರ್ವಜನಾಂಗದ ಶಾಂತಿಯ ತೋಟ ಪುನಃ ಪ್ರತಿಷ್ಠಾಪನೆಗೊಳ್ಳಲು ಸರ್ಕಾರಕ್ಕೆ ಒಂದು ತಿಂಗಳ ಗಡುವು ನೀಡಲಾಗುವುದು. ಇಲ್ಲವಾದರೆ ರಾಜ್ಯದಾದ್ಯಂತ ಪಾದಯಾತ್ರೆ ಕೈಗೊಳ್ಳುತ್ತೇನೆ’ ಎಂದರು.

‘ರಾಮನ ಹೆಸರಿನಲ್ಲಿ ಏನನ್ನು ಬೇಕಾದರೂ ಹೊಡೆಯಿರಿ. ಆದರೆ, ಜನರ ಬದುಕನ್ನು ಹಾಳು ಮಾಡಬೇಡಿ. ಕೋವಿಡ್ ಕಾಣಿಸಿಕೊಂಡ ಬಳಿಕ ಕರ್ನಾಟಕದಲ್ಲಿ 800 ಕಾರ್ಖಾನೆಗಳು ಮುಚ್ಚಿವೆ. 48 ಸಾವಿರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಅವರ ಬದುಕನ್ನು ಸರ್ಕಾರ ಹೇಗೆ ಕಟ್ಟಿಕೊಡುತ್ತದೆ’ ಎಂದು ಪ್ರಶ್ನಿಸಿದರು.

ತಾಲಿಬಾನ್ ಸಂಸ್ಕೃತಿ:ಸಾಹಿತಿಕುಂ. ವೀರಭದ್ರಪ್ಪ,‘ನಮ್ಮಲ್ಲಿ ನಾಥೂರಾಮ್ ಗೋಡ್ಸೆ, ಹೆಡಗೆವಾರ್‌ಸೇರಿದಂತೆ ಅನೇಕ ತರಹದ ದೆವ್ವಗಳಿವೆ. ಕೆಲವರು ದೆವ್ವಗಳು ಹೊಕ್ಕಾಗ ಮಾತ್ರ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ರೇಣುಕಾಚಾರ್ಯ, ತೇಜಸ್ವಿ ಸೂರ್ಯ, ಬಸನಗೌಡ ಯತ್ನಾಳ್ ಇವರೆಲ್ಲರೂ ದೆವ್ವಗಳು ಹೊಕ್ಕಾಗ ಮುಸ್ಲಿಂ ವಿರೋಧಿಗಳಾಗುತ್ತಾರೆ. ಹಿಜಾಬ್ ತಲೆ ಮೇಲಿನ ಒಂದು ವಸ್ತ್ರ. ಹಲಾಲ್ ಕಟ್ ಎನ್ನುವುದು ಖಾದ್ಯಕ್ಕೆ ಮಾಂಸ ಸಿದ್ಧಪಡಿಸುವ ಒಂದು ವಿಧಾನ. ಹಲಾಲ್ ಕಟ್ ಮತ್ತು ಹಿಜಾಬ್ ಇವೆರಡೂ ಈಗ ಭಯಂಕರ ವಿದ್ಯಮಾನವಾಗಿ ಬೆಳೆದು ನಿಂತಿದೆ. ಇದು ಜಾತೀಯತೆ ಮತ್ತು ಸರ್ವಾಧಿಕಾರದ ಮೊದಲ ಹೆಜ್ಜೆ. ರಾಜ್ಯದಲ್ಲಿ ತಾಲಿಬಾನ್ ಸಂಸ್ಕೃತಿ ಬರುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

ಹೈಕೋರ್ಟ್‌ ವಿಶ್ರಾಂತ ನ್ಯಾಯಮೂರ್ತಿ ಎಚ್‌.ಎನ್. ನಾಗಮೋಹನ್ ದಾಸ್, ‘ನಿರುದ್ಯೋಗ, ಭ್ರಷ್ಟಾಚಾರ, ಕೋಮುವಾದ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು. ಜನರ ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಬದುಕಿನ ವಿಷಯ ಎತ್ತಿಕೊಳ್ಳಬೇಕು. ಆಗ ಭಾವನಾತ್ಮಕ ವಿಷಯ ಹಿಂದೆ ಸರಿಯುತ್ತದೆ’ ಎಂದು ಹೇಳಿದರು.

ಆದಿ ಚುಂಚನಗುರಿ ಶಾಖಾ ಮಠದ ಸೌಮ್ಯಾನಂದನಾಥ ಸ್ವಾಮೀಜಿ,ಆರ್ಚ್‌ ಡಯಾಸಿಸ್ ಕಮ್ಯೂನಿಕೇಶನ್ ಸೆಂಟರ್‌ನ ನಿರ್ದೇಶಕ ಫಾದರ್ ಸಿರಿಲ್ ವಿಕ್ಟರ್ ಹಾಗೂ ಇಮಾಮ್ ಮತ್ತು ಇಸ್ಲಾಂ ಧಾರ್ಮಿಕ ವಿದ್ವಾಂಸ ಮುಫ್ತಿ ಮಹಮ್ಮದ್ ಅಲಿ ಮಿಸ್ಬಾಹಿ ಜಮಾಲಿ ನೂರಿ ಅವರು ಶಾಂತಿ ಸೌಹಾರ್ದದ ಸಂದೇಶ ಸಾರಿದರು.ಪತ್ರಕರ್ತ ಬಿ.ಎಂ. ಹನೀಫ್ ಇದ್ದರು.

ನಾನು ಹಿಂದೂ ಅಲ್ಲ: ಕುಂ.ವೀ

‘ಹಿಂದೂ ಎನ್ನುವುದು 1824ರಲ್ಲಿ ಬಳಕೆಗೆ ಬಂದ ಅತ್ಯಂತ ಅಪಾಯಕಾರಿ ಶಬ್ದ. ನಾನು ಹಿಂದೂ ಅಲ್ಲ. ಭಾರತ ವೈವಿಧ್ಯಮಯವಾದ ದೇಶ. ನಾವೆಲ್ಲ ಹಿಂದೂ ಎಂದು ಹೇಳುವುದು ಸರಿಯಲ್ಲ. ಲಿಂಗಾಯತನಾಗಿರುವ ನಾನು, ಬಸವಣ್ಣನ ಅನುಯಾಯಿ. ಹಿಂದೂ ಅಲ್ಲ ಎಂಬ ನನ್ನ ಹೇಳಿಕೆ ಮೇಲೆ ಪ್ರಕರಣ ದಾಖಲಿಸಿದರೂ ನಮ್ಮ ಪರವಾಗಿ ಹೋರಾಡಲು ನ್ಯಾಯಾಧೀಶರಿದ್ದಾರೆ. ಇತ್ತೀಚೆಗೆ ಬಂದಿರುವ ಹಿಂದೂ ಪದ ಅತ್ಯಂತ ಅಪಾಯಕಾರಿ’ ಎಂದು ಸಾಹಿತಿ ಕುಂ. ವೀರಭದ್ರಪ್ಪ ತಿಳಿಸಿದರು.

***

ರಾಜ್ಯದ ಇಂದಿನ ಭಯಂಕರ ಪರಿಸ್ಥಿತಿಗೆ ವಿಶ್ವ ಹಿಂದೂ ಪರಿಷತ್, ಭಜರಂಗದಳ ಕಾರಣ. ಅಮಾಯಕರು, ಹಿಂದುಳಿದವರ ದಿಕ್ಕು ತಪ್ಪಿಸಿ, ಸಮಾಜವನ್ನು ಹಾಳು ಮಾಡಲು ಹೊರಟಿವೆ

-ಎಚ್.ಡಿ. ಕುಮಾರಸ್ವಾಮಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ

***

ಮಾನವನ ಸಂಕಷ್ಟ ಪರಿಹಾರಕ್ಕೆ ಜಗತ್ತಿನಲ್ಲಿ ಧರ್ಮಗಳು ಹುಟ್ಟಿವೆ. ದಮನಕ್ಕೆ ಒಳಾಗದವರ ಧ್ವನಿಯೇ ಧರ್ಮ. ಹಾಗಾಗಿ, ಧರ್ಮವನ್ನು ವಿರೋಧಿಸ ಬೇಕಾಗಿಲ್ಲ. ಧರ್ಮ ಮೂಲಭೂತವಾದ ಆಗಬಾರದು

- ಎಚ್‌.ಎನ್. ನಾಗಮೋಹನ್ ದಾಸ್, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT