ಗುರುವಾರ , ಜನವರಿ 28, 2021
28 °C

ಬೆಳಗಾವಿ ಕನ್ನಡ ವಿರೋಧಿ ಪುಂಡರ ವಿರುದ್ಧ ಕ್ರಮ ಕೈಗೊಳ್ಳಲಿ; ಎಚ್.ಡಿ. ಕುಮಾರಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಬೆಂಗಳೂರು: ಬೆಳಗಾವಿ ಪಾಲಿಕೆ ಎದುರಿನಲ್ಲಿರುವ ಕನ್ನಡ ಧ್ವಜ ತೆರವು ಮಾಡದಿದ್ದರೆ ಗಲ್ಲಿಗಳಲ್ಲಿ ಭಗವಾಧ್ವಜ ಹಾರಿಸುವುದಾಗಿ ಎಂಇಎಸ್ ಬೆದರಿಸಿದೆ. ಕನ್ನಡ ಧ್ವಜವನ್ನು ತೆಗೆಯಬೇಕೆಂಬುದೇ ಅಪರಾಧ. ಇನ್ನು ಬೆದರಿಕೆ ಹಾಕುವುದು ಅಕ್ಷಮ್ಯ ಎಂದು ಜೆಡಿಎಸ್ ವಿಧಾನಸಭೆ ವಿರೋಧ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, ಅಷ್ಟಕ್ಕೂ ಕನ್ನಡ ಧ್ವಜವೆಂಬುದೇನಾದರೂ ಭಗವಾಧ್ವಜಕ್ಕೆ ವಿರುದ್ಧಾರ್ಥಕವೇ? ಕನ್ನಡಿಗನಿಗೆ ಕನ್ನಡ ಧ್ವಜ ಭಗವಾಧ್ವಜಕ್ಕೂ ಮಿಗಿಲು ಎಂದಿದ್ದಾರೆ.

ಬೆಳಗಾವಿಯಲ್ಲಿ ಕನ್ನಡ ಧ್ವಜದ ವಿಚಾರದಲ್ಲಿ ನಡೆಯುತ್ತಿರುವ ಕಿತಾಪತಿಗಳನ್ನು ಸರ್ಕಾರ ನೋಡಿಯೂ ಸುಮ್ಮನಿದೆಯೇ? ಅಥವಾ 'ಕನ್ನಡಿಗರಿಗೆ ಸರ್ಕಾರ ಹೆದರಬಾರದು' ಎಂದು ಬಿಜೆಪಿ ಶಾಸಕರೊಬ್ಬರು ಹಿಂದೆ ಹೇಳಿದ್ದ ಮಾತನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆಯೇ? ಬೆಳಗಾವಿಯ ಕನ್ನಡ ವಿರೋಧಿ ಪುಂಡರ ವಿರುದ್ಧ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. 

'ರಾಷ್ಟ್ರೀಯ ಪಕ್ಷಗಳು ಮರ್ಯಾದೆ ಉಳಿಸಿಕೊಳ್ಳಲಿ'

ಮತ್ತೊಂದು ಟ್ವೀಟ್‌ನಲ್ಲಿ, ಗ್ರಾಮ ಪಂಚಾಯಿತಿ ಚುನಾವಣೆ ನಂತರದ ಬೆಳವಣಿಗೆಗಳು ಆಘಾತಕಾರಿಯಾಗಿವೆ. ಮೀಸಲಾತಿ, ಬೆದರಿಕೆ ಮೂಲಕ ಜೆಡಿಎಸ್ ಬೆಂಬಲಿತ ಸದಸ್ಯರನ್ನು ಸೆಳೆಯುವ ಪ್ರಯತ್ನಗಳು ಅಲ್ಲಲ್ಲಿ ನಡೆಯುತ್ತಿವೆ. ಅದಕ್ಕೆ ನಮ್ಮವರೂ ತಿರುಗೇಟು ನೀಡುತ್ತಿದ್ದಾರೆ. ಆದರೆ ಅತಿ ಹೆಚ್ಚು ಸ್ಥಾನ ಗಳಿಸಿದೆವು ಎಂದು ಹೇಳಿಕೊಳ್ಳುವ ರಾಷ್ಟ್ರೀಯ ಪಕ್ಷಗಳಿಗೆ ಯಾಕೆ ಇಂಥ ಗತಿ? ತಿಳಿಯದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರೀಯ ಪಕ್ಷಗಳು ಜೆಡಿಎಸ್ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರ ಕಾಲುಗಳನ್ನು ಹಿಡಿಯುತ್ತಿವೆ, ಅವರ ಮನೆ ಬಾಗಿಲಿಗೆ ಅಲೆಯುತ್ತಿವೆ ಎಂದರೆ, ಕನ್ನಡಿಗರು ಜೆಡಿಎಸ್ಗೆ ಎಷ್ಟು ಬಲ ತುಂಬಿದ್ದಾರೆ ಎಂಬುದು ಯಾರಿಗಾದರೂ ಗೊತ್ತಾಗುವ ವಿಚಾರ. ರಾಷ್ಟ್ರೀಯ ಪಕ್ಷಗಳು ನಮ್ಮ ಮುಖಂಡರ ಕಾಲು ಹಿಡಿಯುವುದನ್ನು ನಿಲ್ಲಿಸಿ, ಮರ್ಯಾದೆ ಉಳಿಸಿಕೊಳ್ಳಬೇಕು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು