ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ ಕುಡಿದಿದ್ದ ನಿವೃತ್ತ ನೌಕರ ಸಾವು; ಪ್ರತಿಭಟನೆ ಕೈಬಿಟ್ಟ ನೌಕರರು

Last Updated 25 ಫೆಬ್ರುವರಿ 2023, 2:09 IST
ಅಕ್ಷರ ಗಾತ್ರ

ಬೆಂಗಳೂರು: ‘ಪಿಂಚಣಿ ಸೌಲಭ್ಯ ಕಲ್ಪಿಸಬೇಕು’ ಎಂದು ಒತ್ತಾಯಿಸಿ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸಲಾಗುತ್ತಿದ್ದ ಪ್ರತಿಭಟನೆಯಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ ಸಿದ್ದಯ್ಯ ಹಿರೇಮಠ (67) ಎಂಬುವವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶುಕ್ರವಾರ ಮೃತಪಟ್ಟಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಪಟ್ಟದಕಲ್ಲು ನಿವಾಸಿ ಸಿದ್ದಯ್ಯ, ಸ್ಥಳೀಯ ಶಾಲೆಯಲ್ಲಿ ಕೆಲಸ ಮಾಡಿ ನಿವೃತ್ತರಾಗಿದ್ದರು. ಅವರಿಗೆ ಪುತ್ರ ಹಾಗೂ ನಾಲ್ವರು ಪುತ್ರಿಯರಿದ್ದಾರೆ. ರಾಜ್ಯ ಅನುದಾನಿತ ಶಾಲಾ ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮೊದಲ ದಿನದಿಂದಲೇ ಪಾಲ್ಗೊಂಡಿದ್ದರು.

ಪ್ರತಿಭಟನೆ ಸ್ಥಳದಲ್ಲಿ ಗುರುವಾರ ಹಾಜರಿದ್ದ ಸಿದ್ದಯ್ಯ ಹಿರೇಮಠ ಹಾಗೂ ವೆಂಕಟರಾಜು, ‘ಸರ್ಕಾರ ನಮ್ಮ ಬೇಡಿಕೆ ಈಡೇರಿಸುತ್ತಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿ ವಿಷ ಕುಡಿದಿದ್ದರು. ಅವರಿಬ್ಬರನ್ನೂ ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದರು. ಇದೀಗ ಸಿದ್ದಯ್ಯ ಮೃತಪಟ್ಟಿದ್ದು, ವೆಂಕಟರಾಜು ಆರೋಗ್ಯ ಸ್ಥಿತಿಯೂ ಗಂಭೀರವಾಗಿದೆ.

ಪ್ರತಿಭಟನೆ ಕೈಬಿಟ್ಟ ನೌಕರರು: 141 ದಿನಗಳಿಂದ ನಡೆಸುತ್ತಿದ್ದ ಪ್ರತಿಭಟನೆಯನ್ನು ನೌಕರರು ಶುಕ್ರವಾರ ಕೈಬಿಟ್ಟಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಸಂಘದ ಮುಖಂಡರ ನಿಯೋಗ ಭೇಟಿ ಆಗಿತ್ತು. ಪಿಂಚಣಿ ನೀಡುವ ಬಗ್ಗೆ ಬೊಮ್ಮಾಯಿ ಭರವಸೆ ನೀಡಲಿಲ್ಲ. ಇದರಿಂದ ಆಕ್ರೋಶಗೊಂಡ ನೌಕರರು, ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಹೊರಟಿದ್ದರು.

ಉದ್ಯಾನದ ಬಳಿ ನೌಕರನ್ನು ತಡೆದ ಪೊಲೀಸರು, ವಶಕ್ಕೆ ಪಡೆದು ಸಿಎಆರ್ ಮೈದಾನಕ್ಕೆ ಕರೆದೊಯ್ದರು. ಕೆಲ ಗಂಟೆಗಳ ಬಳಿಕ ಎಲ್ಲರನ್ನೂ ಬಿಟ್ಟು ಕಳುಹಿಸಿದರು.

‘ಪಿಂಚಣಿ ನೀಡಲು ಆಗುವುದಿಲ್ಲವೆಂದು ಮುಖ್ಯಮಂತ್ರಿ ನೇರವಾಗಿ ಹೇಳಿದ್ದಾರೆ. ಪ್ರತಿಭಟನೆ ಕೈಬಿಟ್ಟು ಜಾಗ ಖಾಲಿ ಮಾಡುವಂತೆ ಪೊಲೀಸರೂ ಒತ್ತಡ ಹಾಕುತ್ತಿದ್ದರು. ಹೀಗಾಗಿ, ಪ್ರತಿಭಟನೆ ಕೈಬಿಡುವ ಅನಿವಾರ್ಯತೆ ಬಂತು’ ಎಂದು ಸಂಘದ ಅಧ್ಯಕ್ಷ ಜಿ. ಹನುಮಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT