ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 11 ಪಾಲಿಕೆ ವ್ಯಾಪ್ತಿಯಲ್ಲಿ ಸಂಜೆ ಕಾಲೇಜು

Last Updated 26 ಆಗಸ್ಟ್ 2021, 22:15 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ 11 ಮಹಾನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ ಸರ್ಕಾರಿ ಪ್ರಥಮ ದರ್ಜೆ (ಪದವಿ) ಕಾಲೇಜುಗಳಲ್ಲಿ 2021–22ನೇ ಸಾಲಿನಿಂದ ಸಂಜೆ ಕಾಲೇಜುಗಳನ್ನು ಆರಂಭಿಸಲು ಉನ್ನತ ಶಿಕ್ಷಣ ಇಲಾಖೆ ಅನುಮೋದನೆ ನೀಡಿದೆ.

ಕೆಲವು ಷರತ್ತುಗಳೊಂದಿಗೆ ಇಲಾಖೆಯು ಸಂಜೆ ಕಾಲೇಜು ಆರಂಭಕ್ಕೆ ಆಡಳಿತಾತ್ಮಕ ಒಪ್ಪಿಗೆ ಸೂಚಿಸಿದೆ.ಈ ಕಾಲೇಜುಗಳಲ್ಲಿ ಈಗಿರುವ ಮೂಲಸೌಕರ್ಯವನ್ನೇ ಉಪಯೋಗಿಸಿಕೊಂಡು ವಿದ್ಯಾರ್ಥಿಗಳಿಂದ ಹೆಚ್ಚು ಬೇಡಿಕೆ ಇರುವ ಹಾಗೂ ಉತ್ತಮ ಉದ್ಯೋಗಾವಕಾಶಗಳು ದೊರೆಯಲು ಸಾಧ್ಯವಾಗುವ ಬಿ.ಕಾಂ ಮತ್ತು ಬಿಸಿಎ ಕೋರ್ಸುಗಳನ್ನು ‘ಸಂಧ್ಯಾ ಶಕ್ತಿ’ ಯೋಜನೆಯಡಿ ಪ್ರಾರಂಭಿಸಬೇಕು ಎಂದೂ ಸೂಚಿಸಿದೆ.

ಅಗತ್ಯವಿರುವ ಹುದ್ದೆಗಳನ್ನು ಸೃಷ್ಟಿಸಲು ಪ್ರತ್ಯೇಕ ಪ್ರಸ್ತಾವ ಸಲ್ಲಿಸಬೇಕು.ಇದಕ್ಕೆ ತಗಲುವ ವೆಚ್ಚವನ್ನು ಇಲಾಖೆಗೆ ಒದಗಿಸಿರುವ ಅನುದಾನದಿಂದ ಭರಿಸಬೇಕು ಎಂದು ರಾಜ್ಯ ಸರ್ಕಾರ ಸೂಚನೆ ನೀಡಿದೆ.

ಬಜೆಟ್‌ನಲ್ಲಿ ಘೋಷಣೆ:

ಸಂಜೆ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಈ ಬಾರಿಯ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಈ ಸಂಬಂಧ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತರು ಸರ್ಕಾರಕ್ಕೆ ಕಳೆದ ಜೂನ್‌ನಲ್ಲಿ ಪ್ರಸ್ತಾವ ಸಲ್ಲಿಸಿದ್ದರು.

ಬೆಂಗಳೂರು, ತುಮಕೂರು, ಮೈಸೂರು, ಬೆಳಗಾವಿ, ಶಿವಮೊಗ್ಗ, ದಾವಣಗೆರೆ, ಮಂಗಳೂರು, ಧಾರವಾಡ, ವಿಜಯಪುರ, ಕಲಬುರ್ಗಿ ಮತ್ತು ಬಳ್ಳಾರಿ ಮಹಾನಗರ ಪಾಲಿಕೆಗಳ ವ್ಯಾಪ್ತಿಯ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸಂಜೆ ಕಾಲೇಜು ಆರಂಭಿಸಲು ಅನುಮತಿ ಕೋರಿದ್ದರು.

ಪ್ರತಿ ಕಾಲೇಜಿಗೆ 13 ಸಿಬ್ಬಂದಿ:

ಪ್ರತಿ ಸಂಜೆ ಕಾಲೇಜಿಗೆ ಒಬ್ಬ ಪ್ರಾಚಾರ್ಯ, 7 ಬೋಧಕರು ಸೇರಿದಂತೆ ಒಟ್ಟು 13 ಸಿಬ್ಬಂದಿ ಒದಗಿಸಲಾಗುತ್ತದೆ ಮತ್ತು ಪ್ರತಿ ವರ್ಷ ₹6.30 ಕೋಟಿ ಅನುದಾನ ನೀಡಲಾಗುತ್ತದೆ. ಇದರಂತೆ, ಆರ್ಥಿಕ ಇಲಾಖೆಯು ಆಯ್ದ ಕಾಲೇಜುಗಳಲ್ಲಿ ಸಂಜೆ ಕಾಲೇಜು ಆರಂಭಿಸಲು ಅನುಮತಿ ನೀಡಿದ್ದು, ಅಗತ್ಯ ಹುದ್ದೆಗಳ ಸೃಷ್ಟಿಗೆ ಪ್ರತ್ಯೇಕ ಪ್ರಸ್ತಾವ ಸಲ್ಲಿಸಲು ತಿಳಿಸಿದೆ ಎಂದು ಉನ್ನತ ಶಿಕ್ಷಣ ಇಲಾಖೆ ಆದೇಶದಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT