ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್ಸೆಸ್ಸೆಲ್ಸಿ: ಶೇ 20ರಷ್ಟು ಪಠ್ಯ ಕಡಿತ- ಸಚಿವ ಬಿ.ಸಿ. ನಾಗೇಶ್‌

ಡಿಎಸ್‌ಇಆರ್‌ಟಿಯಿಂದ ಶೀಘ್ರ ವಿವರ ಪ್ರಕಟ
Last Updated 26 ನವೆಂಬರ್ 2021, 16:31 IST
ಅಕ್ಷರ ಗಾತ್ರ

ಬೆಂಗಳೂರು: ಈ ಬಾರಿಯ ಎಸ್ಸೆಸ್ಸೆಲ್ಸಿ ಪಠ್ಯಕ್ರಮವನ್ನು ಶೇಕಡ 20ರಷ್ಟು ಕಡಿತಗೊಳಿಸಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.

ಕೋವಿಡ್‌ನಿಂದಾಗಿ ಶಾಲೆಗಳು ತಡವಾಗಿ ಆರಂಭವಾಗಿರುವುದನ್ನು ಪರಿಗಣಿಸಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಪ್ರಸಕ್ತ ಶೈಕ್ಷಣಿಕ ವರ್ಷದ ಅವಧಿಯಲ್ಲಿ ಶೇಕಡ 100ರಷ್ಟು ಪಠ್ಯಕ್ರಮ ಬೋಧನೆ ಮಾಡುವುದು ಕಷ್ಟಸಾಧ್ಯ ಎಂದು ಶಿಕ್ಷಕರ ವಲಯದಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದ್ದವು.

ಪ್ರತಿ ವರ್ಷ 240ಕ್ಕೂ ಹೆಚ್ಚು ಬೋಧನಾ ದಿನಗಳು ಲಭಿಸುತ್ತಿದ್ದವು. ಆದರೆ, ಈ ಬಾರಿ 180 ಬೋಧನಾ ದಿನಗಳು ಮಾತ್ರ ದೊರೆತಿವೆ. ಇದರಿಂದ ವಿದ್ಯಾರ್ಥಿಗಳಿಗೆ ಪಠ್ಯ ಬೋಧನೆಯ ಪುನರಾವರ್ತನೆ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದರು.

ಪಠ್ಯ ಕಡಿತಗೊಳಿಸುವ ವಿವರಗಳನ್ನು ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್‌ಇಆರ್‌ಟಿ) ಶೀಘ್ರದಲ್ಲೇ ಪ್ರಕಟಿಸಲಿದೆ.

ಪಠ್ಯ ಕಡಿತಗೊಳಿಸುವ ನಿರ್ಧಾರ ಕೈಗೊಂಡಿರುವುದರಿಂದ ಮಾರ್ಚ್‌–ಏಪ್ರಿಲ್‌ನಲ್ಲೇ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ನಡೆಯುವ ಸಾಧ್ಯತೆಗಳಿವೆ. ಇದರಿಂದ, ಮೊದಲಿನಂತೆಯೇ ಶೈಕ್ಷಣಿಕ ವರ್ಷಗಳನ್ನು ಆರಂಭಿಸಲು ಅನುಕೂಲವಾಗುತ್ತದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಕೋವಿಡ್‌ನಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ಕಡಿತವಾಗಿರುವ ಪಠ್ಯವನ್ನು ಪರೀಕ್ಷೆಗಳ ನಂತರ ಬೋಧನೆ ಮಾಡುವಂತೆ ಶಿಕ್ಷಕರಿಗೆ ಸೂಚಿಸಲಾಗುವುದು. ಇದರಿಂದ, ಪಿಯು ತರಗತಿಯ ಪಠ್ಯದ ಅಧ್ಯಯನ ಮಾಡಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟದ ಮೇಲೆ ಪರಿಣಾಮ ಬೀರುತ್ತದೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT