ಶನಿವಾರ, ಮೇ 28, 2022
31 °C
ಹೆಚ್ಚು ಉದ್ಯೋಗ ಕೊಟ್ಟವರಿಗೆ ಜಾಸ್ತಿ ಪ್ರೋತ್ಸಾಹ

ರಾಜ್ಯದಲ್ಲಿ ಶೀಘ್ರವೇ ಉದ್ಯೋಗ ನೀತಿ: ಬೊಮ್ಮಾಯಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ‘ರಾಜ್ಯದಲ್ಲಿ ಶೀಘ್ರದಲ್ಲೇ ಉದ್ಯೋಗ ನೀತಿ ಜಾರಿಗೊಳಿಸಲಾಗುವುದು’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕೌಶಲ ಅಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಮತ್ತು ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದಿಂದ  ರೂಪಿಸಿರುವ ‘ಸರ್ವರಿಗೂ ಉದ್ಯೋಗ’ ಕಾರ್ಯಕ್ರಮ ಮತ್ತು ಇಲ್ಲಿನ ಉದ್ಯಮಬಾಗ್‌ನ ಜಿಐಟಿಯಲ್ಲಿ ಆಯೋಜಿಸಿದ್ದ ‘ಬೆಳಗಾವಿ ಉದ್ಯೋಗ ಮೇಳ’ಕ್ಕೆ ಚಾಲನೆ ನೀಡಿ ಗುರುವಾರ ಅವರು ಮಾತನಾಡಿದರು.

ಇದನ್ನೂ ಓದಿ: 

‘ಉದ್ಯೋಗ ಮಾರ್ಗದರ್ಶನ, ವ್ಯಕ್ತಿತ್ವ ವಿಕಸನ ಹಾಗೂ ಕೌಶಲ ತರಬೇತಿ ಇಂದಿನ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ, ರಚನಾತ್ಮಕ ಉದ್ಯೋಗ ನೀತಿ ಬೇಕು. ಇತರ ರಾಜ್ಯಗಳಲ್ಲಿ ಕೈಗಾರಿಕಾ ನೀತಿಯಷ್ಟೆ ಇದೆ. ದೇಶದಲ್ಲೇ ಮೊದಲ ಬಾರಿಗೆ ಉದ್ಯೋಗ ನೀತಿ ತರಲಿದ್ದೇವೆ. ಇದುವರೆಗೂ ಉದ್ಯೋಗದಾತರಿಗೆ ಸಾಮಾನ್ಯ ಸೂತ್ರದಡಿ ಪ್ರೋತ್ಸಾಹ ಹಾಗೂ ಉತ್ತೇಜನ ಕೊಡಲಾಗುತ್ತಿತ್ತು. ಇನ್ಮುಂದೆ, ಹೆಚ್ಚು ಉದ್ಯೋಗ ‌ಕೊಟ್ಟವರಿಗೆ ಹೆಚ್ಚಿನ‌ ಪ್ರೋತ್ಸಾಹ ನೀಡಲಾಗುವುದು’ ಎಂದು ಪ್ರಕಟಿಸಿದರು.

‘ಗ್ರಾಮೀಣ ಯುವಜನರಿಗೆ ಕೌಶಲ ತರಬೇತಿ ಅಲ್ಪಾವಧಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. 7, 8ನೇ ತರಗತಿ ಫೇಲಾದವರಿಗೂ ಉದ್ಯೋಗ ಸಿಗುವಂತಾಗಬೇಕು. ಪಠ್ಯಕ್ರಮ ಪರಿಷ್ಕರಣೆ ಹಾಗೂ ಬೋಧನಾ ಪದ್ಧತಿಯಲ್ಲೂ ಸುಧಾರಣೆಗೆ ಕ್ರಮ ವಹಿಸಬೇಕು’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರಿಗೆ ಸೂಚಿಸಿದರು.

‘ನನ್ನ ಸರ್ಕಾರ ರಾಜ್ಯದ ಜನರ‌ ಭವಿಷ್ಯ ರೂಪಿಸುವ ಉದ್ದೇಶ ಹೊಂದಿದೆ. ಅದನ್ನು ಎಲ್ಲ ಕಾರ್ಯಕ್ರಮಗಳಲ್ಲೂ‌ ನಿರೂಪಿಸಿ ತೋರಿಸುತ್ತೇವೆ. ಎಲ್ಲೆ ಜಿಲ್ಲೆಗಳಲ್ಲೂ ಉದ್ಯೋಗ ಮೇಳ ನಡೆಸಲಾಗುವುದು’ ಎಂದರು.

‘ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಪ್ರಕಾರ, ಶಿಕ್ಷಣ ಕ್ರಮವನ್ನು ಔದ್ಯೋಗಿಕ ಸಂಸ್ಥೆಗಳೊಂದಿಗೆ ಬೆಸೆಯಲಾಗಿದೆ. ಉನ್ನತ ಶಿಕ್ಷಣ ಮತ್ತು ವೃತ್ತಿಪರ ಶಿಕ್ಷಣ ಸಂಸ್ಥೆಗಳನ್ನು ಜೋಡಿಸಲಾಗುತ್ತಿದೆ. ಇದಕ್ಕಾಗಿ ಉನ್ನತ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿ ಇಲಾಖೆಗಳು ಹತ್ತಾರು ಒಡಂಬಡಿಕೆಗಳನ್ನು ಮಾಡಿಕೊಂಡಿವೆ’ ಎಂದು ಹೇಳಿದರು.

‘ಅಮೃತ ಕೌಶಲ ಅಭಿವೃದ್ಧಿ ಕಾರ್ಯಕ್ರಮ’ದಲ್ಲಿ ವರ್ಷದಲ್ಲಿ 75ಸಾವಿರ ಒಬಿಸಿ ಹಾಗೂ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಕೌಶಲ ತರಬೇತಿ ನೀಡಲಾಗುವುದು’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು