ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

16 ಖಾಸಗಿ ಎಂಜಿನಿಯರಿಂಗ್‌ ಕಾಲೇಜುಗಳ ಅಭಿವೃದ್ಧಿ

‘ರೀತಿ’ ಯೋಜನೆಗೆ ಶಿವಮೊಗ್ಗದ ಪಿಇಎಸ್‌, ಪುತ್ತೂರಿನ ವಿವೇಕಾನಂದ, ಬೀದರ್‌ನ ಖಂಡ್ರೆ ಕಾಲೇಜು
Last Updated 21 ಜುಲೈ 2022, 7:58 IST
ಅಕ್ಷರ ಗಾತ್ರ

ಬೆಂಗಳೂರು: ‘ಪ್ರಾದೇಶಿಕ ಉತ್ಕೃಷ್ಟ ತಾಂತ್ರಿಕ ಶಿಕ್ಷಣ ವ್ಯವಸ್ಥೆ’ (ರೀತಿ) ಯೋಜನೆಯಡಿ 16 ಖಾಸಗಿ ಕಾಲೇಜುಗಳೂ ಸೇರಿದಂತೆ ಒಟ್ಟು 30 ಎಂಜಿನಿಯರಿಂಗ್‌ ಕಾಲೇಜುಗಳನ್ನು ರಾಜ್ಯ ಸರ್ಕಾರ ಅಭಿವೃದ್ಧಿಪಡಿಸಲಿದೆ.

ಬಿಜೆಪಿ ಶಾಸಕ ಬಿ.ಎಸ್‌. ಯಡಿಯೂರಪ್ಪ ಕುಟುಂಬದ ಒಡೆತನದ ಶಿವಮೊಗ್ಗದ ಪಿಇಎಸ್‌ ಎಂಜಿನಿಯರಿಂಗ್‌ ಕಾಲೇಜು, ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅಧ್ಯಕ್ಷರಾಗಿರುವ ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್‌ ಕಾಲೇಜು, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಅಧ್ಯಕ್ಷರಾಗಿರುವ ಭಾಲ್ಕಿಯ ಭೀಮಣ್ಣ ಖಂಡ್ರೆ ಎಂಜಿನಿಯರಿಂಗ್‌ ಕಾಲೇಜು ಸೇರಿದಂತೆ ಹಲವು ರಾಜಕೀಯ ಮುಖಂಡರ ಶಿಕ್ಷಣ ಸಂಸ್ಥೆಗಳು ಈ ಪಟ್ಟಿಯಲ್ಲಿವೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು), ಉದ್ಯಮ ಕ್ಷೇತ್ರ ಮತ್ತು ಆಯಾ ಕಾಲೇಜುಗಳ ಆಡಳಿತ ಮಂಡಳಿಗಳ ಸಹಭಾಗಿತ್ವದಲ್ಲಿ ಐದು ವರ್ಷಗಳ ಅವಧಿಯಲ್ಲಿ ಈ ಕಾಲೇಜುಗಳನ್ನು ಅಭಿವೃದ್ಧಿಪಡಿಸುವ ಗುರಿ ಇದೆ. ಮೂರೂ ವಲಯದವರು ತಲಾ ಶೇಕಡ 33ರಷ್ಟು ವೆಚ್ಚ ಹಂಚಿಕೆಯೊಂದಿಗೆ ಯೋಜನೆಯನ್ನು ಅನುಷ್ಠಾನಕ್ಕೆ ತರಲಿದ್ದಾರೆ.

ವಿಟಿಯು ಕುಲಪತಿ ಪ್ರೊ. ಕರಿಸಿದ್ದಪ್ಪ ನೇತೃತ್ವದ ಉನ್ನತಮಟ್ಟದ ಸಮಿತಿಯು ರೀತಿ ಯೋಜನೆಗೆ ಆಯ್ಕೆಯಾಗಿರುವ 30 ಕಾಲೇಜುಗಳಿಗೆ ಸಂಬಂಧಿಸಿದ ವರದಿಯನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥ ನಾರಾಯಣ ಅವರಿಗೆ ಮಂಗಳವಾರ ಸಲ್ಲಿಸಿತು. ಕಾಲೇಜು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ ಆಯುಕ್ತ ಪಿ.ಪ್ರದೀಪ್, ಸ್ಟಾರ್ಟಪ್ ವಿಷನ್ ಗ್ರೂಪ್ ಮುಖ್ಯಸ್ಥ ಪ್ರಶಾಂತ್ ಪ್ರಕಾಶ್, ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಮುಖ್ಯ ಕಾರ್ಯನಿರ್ವಾಹಕ ನಿರ್ದೇಶಕ ಗೋಪಾಲಕೃಷ್ಣ ಜೋಶಿ, ಉದ್ಯಮಿ ನಾರಾಯಣನ್ ರಾಮಸ್ವಾಮಿ, ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಸಲಹೆಗಾರ ಕಾರ್ತಿಕ್ ಕಿಟ್ಟು ಮತ್ತು ವಿಟಿಯು ಕುಲಸಚಿವ ಆನಂದ್ ದೇಶಪಾಂಡೆ ಅವರನ್ನೊಳಗೊಂಡ ಸಮಿತಿ ವರದಿ ಸಿದ್ಧಪಡಿಸಿದೆ.

ವರದಿ ಸ್ವೀಕರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅಶ್ವತ್ಥನಾರಾಯಣ, ‘ಜಿಲ್ಲೆಗೊಂದು ಅತ್ಯುತ್ತಮ ತಾಂತ್ರಿಕ ಶಿಕ್ಷಣ ಸಂಸ್ಥೆಯನ್ನು ಅಭಿವೃದ್ಧಿಪಡಿಸುವುದು ರೀತಿ ಯೋಜನೆಯ ಉದ್ದೇಶ. ಸರ್ಕಾರಿ ಎಂಜಿನಿಯರಿಂಗ್‌ ಕಾಲೇಜುಗಳು ಇಲ್ಲದ ಜಿಲ್ಲೆಗಳಲ್ಲಿ ಖಾಸಗಿ ಕಾಲೇಜುಗಳನ್ನು ಆಯ್ಕೆಮಾಡಲಾಗಿದೆ’ ಎಂದರು.

ಅಂತರರಾಷ್ಟ್ರೀಯ ಗುಣಮಟ್ಟದ ತಾಂತ್ರಿಕ ಶಿಕ್ಷಣವನ್ನು ಈ ಕಾಲೇಜುಗಳಲ್ಲಿ ನೀಡಲಾಗುವುದು. ಸ್ವಯಂ ಮೌಲ್ಯಮಾಪನ ಮತ್ತು ‘ಮೆಂಟರ್‌ ಆಡಿಟ್‌ ಮಾದರಿ’ಯನ್ನು ಈ ಕಾಲೇಜುಗಳಲ್ಲಿ ಜಾರಿಗೊಳಿಸಲಾಗುವುದು ಎಂದು ಹೇಳಿದರು.

ಯೋಜನೆಯ ಸ್ವರೂಪ:

ಈ ಯೋಜನೆಗೆ ಆಯ್ಕೆಯಾಗಿರುವ ಕಾಲೇಜುಗಳು ಮೂರು ವರ್ಷದೊಳಗೆ ‘ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು’ (ಎನ್‌ಐಆರ್‌ಎಫ್‌) ರ‍್ಯಾಂಕಿಂಗ್‌ ಪಡೆಯಬೇಕು. ಐದು ವರ್ಷಗಳೊಳಗೆ ಅಂತರರಾಷ್ಟ್ರೀಯ ಮಟ್ಟದ ಸಂಸ್ಥೆಗಳಿಂದ ಮಾನ್ಯತೆ ಪಡೆಯಬೇಕು. ಕೊನೆಯ ವರ್ಷದ ವೇಳೆಗೆ ತಮ್ಮ ಶೈಕ್ಷಣಿಕ ಯೋಜನೆಗಳಲ್ಲಿ ಕನಿಷ್ಠ ಶೇ 80ರಷ್ಟಕ್ಕೆ ‘ರಾಷ್ಟ್ರೀಯ ಮಾನ್ಯತಾ ಮಂಡಳಿ’ (ಎನ್‌ಬಿಎ) ಮಾನ್ಯತೆ ಹೊಂದಿರಬೇಕು ಎಂಬ ಷರತ್ತು ವಿಧಿಸಲಾಗಿದೆ.

ಅಂತಿಮ ವರ್ಷದ ಬಿ.ಇ ವಿದ್ಯಾರ್ಥಿಗಳಲ್ಲಿ ಕನಿಷ್ಠ ಶೇ 50ರಷ್ಟು ಮಂದಿಗೆ ಕೊನೆಯ ವರ್ಷದ ವೇಳೆಗೆ ಉದ್ಯೋಗಾವಕಾಶ ಲಭಿಸಿರಬೇಕು. ಶೇ 75ರಷ್ಟು ವಿದ್ಯಾರ್ಥಿಗಳಿಗೆ ಗುಣಮಟ್ಟದ ಇಂಟರ್ನ್‌ಶಿಪ್‌ ಮತ್ತು ಶೇ 100ರಷ್ಟು ವಿದ್ಯಾರ್ಥಿಗಳಿಗೆ ಉದ್ಯೋಗ ಲಭಿಸಬೇಕು. ವಿಟಿಯುನಿಂದ ಶಾಶ್ವತ ಮಾನ್ಯತೆ ಪಡೆಯಬೇಕು. ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಕನಿಷ್ಠ 10 ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸು ಮಾಡಲಾಗಿದೆ.

ಖಾಸಗಿ ಕಾಲೇಜುಗಳು

ಬೆಳಗಾವಿಯ ಅಂಗಡಿ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಅಂಡ್‌ ಮ್ಯಾನೇಜ್‌ಮೆಂಟ್‌, ತುಮಕೂರು ಜಿಲ್ಲೆ ಗುಬ್ಬಿಯ ಚನ್ನಬಸವೇಶ್ವರ ಎಂಜಿನಿಯರಿಂಗ್ ಕಾಲೇಜು, ಉಡುಪಿಯ ಶ್ರೀಮಧ್ವ ವಾದಿರಾಜ ಎಂಜಿನಿಯರಿಂಗ್ ಅಂಡ್‌ ಮ್ಯಾನೇಜ್‌ಮೆಂಟ್‌, ಮೈಸೂರಿನ ಜಿಎಸ್ಎಸ್ಎಸ್ ಮಹಿಳಾ ಎಂಜಿನಿಯರಿಂಗ್ ಅಂಡ್‌ ಟೆಕ್ನಾಲಜಿ ಸಂಸ್ಥೆ, ಕೆಜಿಎಫ್‌ನ ಡಾ.ಟಿ ತಿಮ್ಮಯ್ಯ ತಾಂತ್ರಿಕ ಶಿಕ್ಷಣ ಕಾಲೇಜು, ಬಾಗಲಕೋಟೆ ಜಿಲ್ಲೆ ಮುಧೋಳದ ಬಿಳುಗೂರು ಗುರುಬಸವ ಮಹಾಸ್ವಾಮೀಜಿ ಇನ್‌ಸ್ಟಿಟ್ಯೂಟ್‌, ವಿಜಯಪುರದ ಪಿ.ಜಿ.ಹಳಕಟ್ಟಿ ಕಾಲೇಜ್ ಆಫ್ ಎಂಜಿನಿಯರಿಂಗ್ ಅಂಡ್‌ ಟೆಕ್ನಾಲಜಿ, ಚಿಕ್ಕಮಗಳೂರಿನ ಆದಿಚುಂಚನಗಿರಿ ತಾಂತ್ರಿಕ ಕಾಲೇಜು, ಚಿಕ್ಕಬಳ್ಳಾಪುರದ ಎಸ್.ಜೆ.ಸಿ. ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ, ಬಳ್ಳಾರಿಯ ರಾವ್ ಬಹದ್ದೂರ್ ವೈ.ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು, ಶಿವಮೊಗ್ಗದ ಪಿಇಎಸ್ ತಾಂತ್ರಿಕ ಮತ್ತು ಮ್ಯಾನೇಜ್ಮೆಂಟ್‌ ಶಿಕ್ಷಣ ಸಂಸ್ಥೆ, ಬೀದರ್‌ ಜಿಲ್ಲೆ ಭಾಲ್ಕಿಯ ಭೀಮಣ್ಣ ಖಂಡ್ರೆ ತಾಂತ್ರಿಕ ಕಾಲೇಜು, ಗದಗದ ತೋಂಟದಾರ್ಯ ಎಂಜಿನಿಯರಿಂಗ್ ಕಾಲೇಜು, ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ವಿವೇಕಾನಂದ ಎಂಜಿನಿಯರಿಂಗ್ ಮತ್ತು ತಾಂತ್ರಿಕ ಶಿಕ್ಷಣ ಕಾಲೇಜು, ಹುಬ್ಬಳ್ಳಿಯ ಜೈನ್ ಎಂಜಿನಿಯರಿಂಗ್ ಕಾಲೇಜು ಮತ್ತು ಯಾದಗಿರಿ ಜಿಲ್ಲೆಯ ಶೋರಾಪುರದ ವೀರಪ್ಪ ನಿಷ್ಠಿ ಎಂಜಿನಿಯರಿಂಗ್ ಕಾಲೇಜು.

ಸರ್ಕಾರಿ ಕಾಲೇಜುಗಳು

ಚಾಮರಾಜನಗರ, ಚಳ್ಳಕೆರೆ, ಹಾಸನ, ಹಾವೇರಿ, ಕುಶಾಲನಗರ, ತಲಕಾಡು, ಕೃಷ್ಣರಾಜಪೇಟೆ, ರಾಯಚೂರು, ರಾಮನಗರ, ಕಾರವಾರ, ಹೂವಿನಹಡಗಲಿಗಳಲ್ಲಿರುವ ಸರ್ಕಾರಿ ಎಂಜಿನಿಯರಿಂಗ್ ಕಾಲೇಜುಗಳು, ಬೆಂಗಳೂರಿನ ಎಸ್.ಕೆ.ಎಸ್.ಜೆ.ಟಿ.ಐ., ದಾವಣಗೆರೆಯಲ್ಲಿರುವ ಯೂನಿವರ್ಸಿಟಿ ಬಿಡಿಟಿ ಕಾಲೇಜು ಮತ್ತು ಕಲಬುರ್ಗಿಯ ವಿಟಿಯು ಸ್ನಾತಕೋತ್ತರ ಅಧ್ಯಯನ ಕೇಂದ್ರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT