ಬುಧವಾರ, ಜುಲೈ 6, 2022
22 °C

ಮಹದಾಯಿ ಅನುಷ್ಠಾನ ಸರ್ಕಾರದ ಬದ್ಧತೆ: ಸಚಿವ ಕಾರಜೋಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಹದಾಯಿ ಯೋಜನೆ ಅನುಷ್ಠಾನ ನಮ್ಮ ಸರ್ಕಾರದ ಬದ್ಧತೆ. ಈ ಯೋಜನೆಯ ತ್ವರಿತ ಅನುಷ್ಠಾನಕ್ಕೆ ಅಗತ್ಯವಿರುವ ಎಲ್ಲ ಕ್ರಮಗಳನ್ನೂ ಸರ್ಕಾರ ಕೈಗೊಳ್ಳಲಿದೆ’ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ವಿಧಾನ ಪರಿಷತ್‌ನಲ್ಲಿ ಕಾಂಗ್ರೆಸ್‌ನ ಸಲೀಂ ಅಹ್ಮದ್‌ ಮಂಡಿಸಿದ ಗಮನ ಸೆಳೆಯುವ ಸೂಚನೆಗೆ ಉತ್ತರ ನೀಡಿದಸಚಿವರು, ‘ಮಹದಾಯಿ ನದಿ ನೀರನ್ನು ಬಳಸಿಕೊಂಡು ಕಳಸಾ ಬಂಡೂರಿ ನಾಲಾ ತಿರುವು ಕುಡಿಯುವ ನೀರಿನ ಯೋಜನೆ ಯನ್ನು ಆದಷ್ಟು ಬೇಗ ಜಾರಿಗೊಳಿಸ ಬೇಕು ಎಂಬುದು ಸರ್ಕಾರದ ನಿಲುವು. ಕೇಂದ್ರ ಜಲ ಆಯೋಗ ಹಾಗೂ ಕೇಂದ್ರ ಅರಣ್ಯ ಮತ್ತು ಪರಿಸರ ಇಲಾಖೆಯ ಅನುಮತಿಗಳು ಬಾಕಿ ಇವೆ. ಅವುಗಳು ದೊರೆತ ತಕ್ಷಣದಲ್ಲೇ ಕಾರ್ಯಪ್ರವೃತ್ತರಾಗುತ್ತೇವೆ’ ಎಂದರು.

ಪ್ರಸಕ್ತ ಬಜೆಟ್‌ನಲ್ಲಿ ಮಹದಾಯಿ ಯೋಜನೆಗೆ ₹ 1,000 ಕೋಟಿ, ಮೇಕೆದಾಟು ಯೋಜನೆಗೆ ₹ 1,000 ಕೋಟಿ, ಎತ್ತಿನಹೊಳೆ ಯೋಜನೆಗೆ ₹ 3,000 ಕೋಟಿ ಸೇರಿದಂತೆ ನೀರಾವರಿ ಯೋಜನೆಗಳಿಗೆ ದೊಡ್ಡ ಮೊತ್ತದ ಅನುದಾನ ನೀಡಲಾಗಿದೆ. ಬಿಜೆಪಿ ಸರ್ಕಾರಕ್ಕೆ ಈ ವಿಚಾರದಲ್ಲಿ ಬದ್ಧತೆ ಇರುವ ಕಾರಣದಿಂದ ಈ ಕೆಲಸ ಮಾಡಿದೆ. ಹಿಂದೆ ಕಾಂಗ್ರೆಸ್‌ ಐದು ವರ್ಷಗಳ ಕಾಲ ಅಧಿಕಾರದಲ್ಲಿದ್ದರೂ ನೀರಾವರಿ ವಿಷಯದಲ್ಲಿ ಕೊಟ್ಟ ಮಾತಿನಂತೆ ನಡೆದುಕೊಳ್ಳಲಿಲ್ಲ ಎಂದು ಟೀಕಿಸಿದರು.

‘ಹಿಂದಿನವರು ಏನೂ ಮಾಡಿಲ್ಲ ಎನ್ನಲಾಗದು’

‘ಹಿಂದೆ ಆಡಳಿತ ನಡೆಸಿದವರು ದೇಶಕ್ಕಾಗಿ ಏನೂ ಮಾಡಿಲ್ಲ ಎನ್ನಲಾಗದು. ಅಧಿಕಾರದಲ್ಲಿದ್ದವು ಅವರವರ ಕಾಲಕ್ಕೆ ಶಕ್ತಿಗನುಗುಣವಾಗಿ ದೇಶಕ್ಕೆ ಕೆಲಸ ಮಾಡಿದ್ದಾರೆ’ ಎಂದು ಜಲ ಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಹೇಳಿದರು.

ಮಹದಾಯಿ ಯೋಜನೆಗೆ ಸಂಬಂಧಿಸಿದ ಚರ್ಚೆಯ ವೇಳೆ, ‘ಭಾಷಾವಾರು ಪ್ರಾಂತ್ಯಗಳ ರಚನೆಗೂ ಮೊದಲು ಮುಂಬೈ ಸರ್ಕಾರ ಕೊಯ್ನಾ ಅಣೆಕಟ್ಟೆ ನಿರ್ಮಾಣ ವೆಚ್ಚದಲ್ಲಿ ಮೈಸೂರು ಪ್ರಾಂತ್ಯದಿಂದ ₹ 2.2 ಕೋಟಿ ಪಾಲು ಕೇಳಿತ್ತು. ಅಷ್ಟು ನಿಡಿದ್ದರೆ ಆಗಲೇ ಹಲವು ಜಿಲ್ಲೆಗಳಿಗೆ ನೀರು ಸಿಗುತ್ತಿತ್ತು. ಕೇಂದ್ರ, ಮೈಸೂರು, ಮುಂಬೈ ಎಲ್ಲ ಕಡೆಯೂ ಕಾಂಗ್ರೆಸ್‌ ಅಧಿಕಾರದಲ್ಲಿದ್ದರೂ ಮೈಸೂರು ಪ್ರಾಂತ್ಯ ಈ ಪ್ರಸ್ತಾವವನ್ನು ಒಪ್ಪಿರಲಿಲ್ಲ’ ಎಂದರು.

ಆಗ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ‘ಕರ್ನಾಟಕದಲ್ಲಿ 26 ಅಣೆಕಟ್ಟೆಗಳಿವೆ. ಅವುಗಳಲ್ಲಿ 20 ಕಾಂಗ್ರೆಸ್‌ ಆಡಳಿತದಲ್ಲಿ ನಿರ್ಮಾಣವಾಗಿದ್ದರೆ, ಒಂದು ಬ್ರಿಟಿಷರು ನಿರ್ಮಿಸಿದ್ದು. ಉಳಿದವು ಮಹಾರಾಜರು ಕಟ್ಟಿಸಿದ್ದು’ ಎಂದು ಹೇಳಿದರು.

‘ದೇಶಕ್ಕಾಗಿ 60 ವರ್ಷಗಳಲ್ಲಿ ಏನನ್ನೂ ಮಾಡಿಲ್ಲ ಎಂದು ಹೇಳುವುದು ಮೂರ್ಖತನವಾಗುತ್ತದೆ ಎಂದು ಅಟಲ್‌ ಬಿಹಾರಿ ವಾಜಪೇಯಿಯವರು ಮೊದಲ ಬಾರಿ ಪ್ರಧಾನಿ ಹುದ್ದೆಗೇರಿ ರಾಜೀನಾಮೆ ನೀಡುವಾಗ ಹೇಳಿದ್ದರು’ ಎಂದು ನೆನಪಿಸಿದರು.

ಆಗ ಉತ್ತರಿಸಿದ ಕಾರಜೋಳ, ‘ಹಿಂದಿನವರು ಕೆಲಸ ಮಾಡಿಲ್ಲ ಎಂದು ನಾನು ಹೇಳುವುದಿಲ್ಲ. ಯಾರು ಕೂಡ ಹಾಗೆ ಹೇಳಲು ಆಗುವುದಿಲ್ಲ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು