ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಣಬಿ, ಹಾಲಕ್ಕಿ ಒಕ್ಕಲಿಗರ ಬೇಡಿಕೆಗೆ ಸರ್ಕಾರದ ಬೆಂಬಲ

Last Updated 14 ಫೆಬ್ರುವರಿ 2023, 16:24 IST
ಅಕ್ಷರ ಗಾತ್ರ

ಬೆಂಗಳೂರು: ಕುಣಬಿ ಮತ್ತು ಹಾಲಕ್ಕಿ ಒಕ್ಕಲಿಗ ಸಮುದಾಯಗಳನ್ನು ಪರಿಶಿಷ್ಟ ಪಂಗಡಗಳ (ಎಸ್‌.ಟಿ) ಪಟ್ಟಿಗೆ ಸೇರಿಸಬೇಕೆಂಬ ಬೇಡಿಕೆಗೆ ರಾಜ್ಯ ಸರ್ಕಾರದ ಪೂರ್ಣ ಬೆಂಬಲಿವಿದೆ. ಈ ವಿಚಾರದಲ್ಲಿ ಇರುವ ತೊಡಕುಗಳ ನಿವಾರಣೆಗೆ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ವಿಧಾನಸಭೆಯಲ್ಲಿ ಮಂಗಳವಾರ ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್‌ನ ಆರ್‌.ವಿ. ದೇಶಪಾಂಡೆ, ‘ಸಂಪೂರ್ಣವಾಗಿ ಬುಡಕಟ್ಟು ಸಮುದಾಯದ ಗುಣ ಲಕ್ಷಣಗಳನ್ನು ಹೊಂದಿರುವ ಕುಣಬಿ, ಹಾಲಕ್ಕಿ ಒಕ್ಕಲಿಗ ಮತ್ತು ಗೌಳಿ ಸಮುದಾಯಗಳನ್ನು ಎಸ್‌.ಟಿ ಪಟ್ಟಿಗೆ ಸೇರಿಸಬೇಕು. ಗೋವಾ ರಾಜ್ಯದಲ್ಲಿ ಈ ಸಮುದಾಯಗಳು ಎಸ್‌.ಟಿ ಪಟ್ಟಿಯಲ್ಲಿವೆ. ರಾಜ್ಯದಲ್ಲೂ ಅದೇ ರೀತಿ ಕ್ರಮ ಕೈಗೊಂಡು ನ್ಯಾಯ ಒದಗಿಸಬೇಕು’ ಎಂದು ಆಗ್ರಹಿಸಿದರು.

ಬಿಜೆಪಿಯ ರೂಪಾಲಿ ನಾಯ್ಕ, ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಕೂಡ ಈ ಬೇಡಿಕೆಯನ್ನು ಬೆಂಬಲಿಸಿದರು. ಕುಲಶಾಸ್ತ್ರೀಯ ಅಧ್ಯಯನದಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸುವುದು ಮತ್ತು ಕೇಂದ್ರ ಸರ್ಕಾರದ ಹಂತದಲ್ಲಿ ನಿರಂತರವಾಗಿ ಪ್ರಯತ್ನ ನಡೆಸುವುದನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಇಬ್ಬರೂ ಹೇಳಿದರು.

‘ಕುಣಬಿ ಸಮುದಾಯವನ್ನು ಎಸ್‌.ಟಿ ಪಟ್ಟಿಗೆ ಸೇರಿಸುವಂತೆ 2022ರ ಜೂನ್‌ನಲ್ಲೇ ಶಿಫಾರಸು ಮಾಡಿದ್ದು, ಪ್ರಸ್ತಾವ ಕೇಂದ್ರ ಸರ್ಕಾರದಲ್ಲಿ ಬಾಕಿ ಇದೆ. ಹಾಲಕ್ಕಿ ಒಕ್ಕಲಿಗರಿಗೆ ಸಂಬಂಧಿಸಿದಂತೆ ಕುಲಶಾಸ್ತ್ರೀಯ ಅಧ್ಯಯನ ವರದಿಯಲ್ಲಿನ ಮಾಹಿತಿಯೊಂದು ವ್ಯತಿರಿಕ್ತ ಅಭಿಪ್ರಾಯ ಬರಲು ಕಾರಣವಾಗಿದೆ. ಪುನಃ ಕುಲಶಾಸ್ತ್ರೀಯ ಅಧ್ಯಯನ ನಡೆಸಿ ವರದಿ ನೀಡುವಂತೆ ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆಗೆ 2022ರ ಮಾರ್ಚ್‌ನಲ್ಲಿ ಪತ್ರ ಬರೆಯಲಾಗಿದೆ. ಈವರೆಗೂ ಅವರಿಂದ ಪ್ರತಿಕ್ರಿಯೆ ಬಂದಿಲ್ಲ’ ಎಂದು ಮಾಧುಸ್ವಾಮಿ ಉತ್ತರಿಸಿದರು.

ಗೌಳಿ ಸಮುದಾಯದ ವಿಚಾರದಲ್ಲಿ ಹೆಚ್ಚು ಮಾಹಿತಿ ಇಲ್ಲ. ಕಾಡುಗೊಲ್ಲರನ್ನು ಎಸ್‌.ಟಿ ಪಟ್ಟಿಗೆ ಸೇರಿಸುವ ಶಿಫಾರಸು ಕೂಡ ಬಾಕಿ ಇದೆ. ಹಿಂದೂ ಧರ್ಮದಲ್ಲಿನ ಜಾತಿಗಳ ಜತೆಗಿನ ಸಾಮ್ಯತೆಯ ಕಾರಣದಿಂದ ಹೀಗಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT