ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ. ಚುನಾವಣೆ | ಮೀಸಲಾತಿ ಪಟ್ಟಿಯಲ್ಲಿ ಅಕ್ರಮ: ಸುಂದರೇಶ್ ಆರೋಪ

Last Updated 27 ಆಗಸ್ಟ್ 2020, 10:16 IST
ಅಕ್ಷರ ಗಾತ್ರ

ಶಿವಮೊಗ್ಗ: ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಸಲು ಕ್ಷೇತ್ರಗಳಿಗೆ ಸರ್ಕಾರ ನಿಗದಿ ಮಾಡಿದ ಮೀಸಲಾತಿ ಪಟ್ಟಿ ಅಕ್ರಮವಾಗಿದೆ ಮೀಸಲಾತಿ ನಿಗದಿ ಮಾಡುವಾಗ ‘ರೋಸ್ಟರ್‌’ ಉಲ್ಲಂಘಿಸಲಾಗಿದೆ ಎಂದು ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಸ್.ಸುಂದರೇಶ್ ಆರೋಪಿಸಿದರು.

ರಾಜೀವ್‌ಗಾಂಧಿ ಅವರು ದೇಶದ ಪ್ರಧಾನ ಮಂತ್ರಿಯಾಗಿದ್ದ ಸಮಯದಲ್ಲಿ ಎಲ್ಲ ಜಾತಿಯ ಜನರಿಗೂ ನ್ಯಾಯ ಒದಗಿಸಲು ಪಂಚಾಯತ್ ರಾಜ್ ವ್ಯವಸ್ಥೆ ಜಾರಿಗೆ ತಂದಿದ್ದರು. ತಳ ಸಮುದಾಯದ ಜನರೂ ಜನಪ್ರತಿನಿಧಿಗಳಾಗಲು ಅವಕಾಶ ಮಾಡಿಕೊಟ್ಟಿದ್ದರು. ಇಂತಹ ವ್ಯವಸ್ಥೆಯನ್ನು ಬಿಜೆಪಿ ಸರ್ಕಾರ ಹಾಳು ಮಾಡುತ್ತಿದೆ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

ಮೀಸಲಾತಿ ಪಟ್ಟಿ ಪರಿಶೀಲಿಸಿದರೆ ರಾಜ್ಯ ಸರ್ಕಾರ ನೇರ ಹಸ್ತಕ್ಷೇಪ ಸ್ಪಷ್ಟವಾಗುತ್ತದೆ. ಪಕ್ಷಕ್ಕೆ ಅನುಕೂಲವಾಗುವಂತೆ ಭಾರಿ ಬದಲಾವಣೆ ಮಾಡಿದೆ. ಪರಿಶಿಷ್ಟ ಜಾತಿ ಜನರು ಅಧಿಕ ಸಂಖ್ಯೆಯಲ್ಲಿ ನೆಲೆಸಿರುವ ಕ್ಷೇತ್ರಗಳಲ್ಲೂ ಸಾಮಾನ್ಯ ವರ್ಗಕ್ಕೆ ಮೀಸಲು ನಿಗದಿ ಮಾಡಲಾಗಿದೆ. ಮಹಿಳೆಯರ ಪ್ರಬಾಲ್ಯ ಇರುವ ಕ್ಷೇತ್ರಗಳಲ್ಲಿ ಪುರುಷ ವರ್ಗಕ್ಕೆ ಮೀಸಲಿಡಲಾಗಿದೆ ಎಂದು ಆರೋಪಿಸಿದರು.

ಈಗ ಪ್ರಕಟಿಸಿರುವ ಮೀಸಲಾತಿ ಪಟ್ಟಿ ವಿರುದ್ಧ ಕಾಂಗ್ರೆಸ್‌ ಕೋರ್ಟ್‌ ಮೊರೆ ಹೋಗುತ್ತಿದೆ. ಸರ್ಕಾರ ತಕ್ಷಣ ಪಟ್ಟಿ ಪುನರ್ ಪರಿಶೀಲನೆ ನಡೆಸಬೇಕು. ನೂತನ ಪಟ್ಟಿ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ಕೊರೊನಾದಿಂದ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಆರ್ಥಿಕ ಸುಧಾರಣೆ ಪ್ರಯತ್ನಿಸದೇ ತಮ್ಮನ್ನೇ ಬಿಂಬಿಸಿಕೊಳ್ಳುವುದರಲ್ಲಿ ಕಾಲ ಕಳೆಯುತ್ತಿದ್ದಾರೆ. ಕೊರೊನಾಶ ಸಂಕಷ್ಟಕ್ಕೆ ಒಳಗಾದವರಿಗೆ ಪ್ರಕಟಿಸಿದ್ದ ಪರಿಹಾರದ ಪ್ಯಾಕೇಜ್‌ನಲ್ಲಿ ಶೇ 20ರಷ್ಟು ಜನರಿಗೆ ತಲುಪಿದೆ. ಈ ಪ್ಯಾಕೇಜ್ ಜನರ ಮೂಗಿಗೆ ತುಪ್ಪ ಸವರುವ ತಂತ್ರ ಎಂದು ಟೀಕಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಕಲಗೋಡು ರತ್ನಾಕರ, ಮುಖಂಡರಾದ ಡಾ.ಶ್ರೀನಿವಾಸ್, ಸಿ.ಎಸ್.ಚಂದ್ರಭೂಪಾಲ್, ಚಂದನ್, ಚಂದ್ರಶೇಖರ್, ಬಾಬು, ಪ್ರಭಾಕರ ಗೌಡ ಇನ್ನಿತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT