ಮಂಗಳವಾರ, ಡಿಸೆಂಬರ್ 1, 2020
26 °C
ಗ್ರಾ. ಪಂ.‌ ಚುನಾವಣೆ: ವಿಡಿಯೊ ಸಂವಾದದಲ್ಲಿ ಜಿಲ್ಲಾಧಿಕಾರಿಗಳು, ಸಿಇಒಗಳು, ಎಸ್ಪಿಗಳ ಸಲಹೆ

ಎರಡು ಹಂತಗಳಲ್ಲಿ ನಡೆಸಲು ಆಯೋಗ ಒಪ್ಪಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗ್ರಾಮ ಪಂಚಾಯಿತಿ‌ ಚುನಾವಣೆಯನ್ನು ಎರಡು ಹಂತದಲ್ಲಿ ನಡೆಸುವ ಬಗ್ಗೆ ಜಿಲ್ಲಾಡಳಿತಗಳು ಸಲಹೆ ನೀಡಿದ್ದು, ಅದಕ್ಕೆ ರಾಜ್ಯ ಚುನಾವಣಾ ಆಯೋಗ ಒಪ್ಪಿಗೆ ನೀಡಿದೆ.

ರಾಜ್ಯದಲ್ಲಿ ಕೊರೊನಾ ಸೋಂಕು ಇನ್ನೂ ಪೂರ್ಣವಾಗಿ ನಿವಾರಣೆ ಆಗದ ಕಾರಣ ಎರಡು ಹಂತಗಳಲ್ಲಿ ಚುನಾವಣೆ ನಡೆಸುವುದು ಸೂಕ್ತ ಎಂದು ಚುನಾವಣಾ ಆಯೋಗದ ಆಯುಕ್ತ ಬಿ.ಬಸವರಾಜು ಅವರು ನಡೆಸಿದ ವಿಡಿಯೊ ಸಂವಾದದಲ್ಲಿ ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಸಿಇಒಗಳು ಮತ್ತು ಎಸ್ಪಿಗಳು ಸಲಹೆ ನೀಡಿದ್ದಾರೆ.

‘ಚುನಾವಣೆ ನಡೆಸುವ ಸಂಬಂಧ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಎರಡು ಹಂತಗಳ ಚುನಾವಣೆ ಎಂದರೆ, ಒಂದು ಜಿಲ್ಲೆಯಲ್ಲಿ ಆರು ತಾಲ್ಲೂಕುಗಳಿದ್ದರೆ, ಮೊದಲ ಹಂತದಲ್ಲಿ ಮೂರು ತಾಲ್ಲೂಕುಗಳಲ್ಲಿ ಚುನಾವಣೆ ನಡೆಸಿದರೆ, ನಂತರ ಹಂತದಲ್ಲಿ ಉಳಿದ ತಾಲ್ಲೂಕುಗಳಲ್ಲಿ ಚುನಾವಣೆ ನಡೆಸಲಾಗುತ್ತದೆ’ ಎಂದು ಬಸವರಾಜು ಸಭೆಯಲ್ಲಿ ತಿಳಿಸಿದರು.

ಮುಖ್ಯವಾಗಿ, ಕೋವಿಡ್‌ ಇರುವುದರಿಂದ ಸುರಕ್ಷಿತ ವಾತಾವರಣದಲ್ಲಿ ಚುನಾವಣೆ ನಡೆಸಲು ಸಾಧ್ಯ. ಅಲ್ಲದೆ, ಪೊಲೀಸ್‌ ಮತ್ತು ಚುನಾವಣೆ ಸಿಬ್ಬಂದಿಯನ್ನು ಸಮರ್ಪಕವಾಗಿ ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಚುನಾವಣಾ ಸಿಬ್ಬಂದಿಯ ಕೊರತೆ ಇದ್ದು, ಎರಡು ಹಂತದಲ್ಲಿ ಚುನಾವಣೆ ನಡೆಸುವುದರಿಂದ ಸಿಬ್ಬಂದಿ ಕೊರತೆ ನಿಭಾಯಿಸಬಹುದು ಎಂದು ಹೇಳಿದರು.

‘ವಿಡಿಯೊ ಸಂವಾದದ ಮೂಲಕ ಚುನಾವಣಾ ನಡೆಸುವ ಬಗ್ಗೆ ಅಭಿಪ್ರಾಯವನ್ನು ಸಂಗ್ರಹಿಸಲಾಯಿತು. ಅದರ ಆಧಾರದ ಮೇಲೆ ಅಧಿಸೂಚನೆ ಹೊರಡಿಸಲಾಗುವುದು. ಅದರಲ್ಲಿ ಚುನಾವಣಾ ಮಾರ್ಗಸೂಚಿ ಇರಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಚುನಾವಣೆ ಮುಂದೂಡಿಕೆಗೆ ಜನರ ಒತ್ತಾಯ

ಕೋವಿಡ್‌ ಹಬ್ಬುವ ಅಪಾಯ ಇರುವುದರಿಂದ ಗ್ರಾಮ ಪಂಚಾಯತ್‌ ಚುನಾವಣೆಯನ್ನು ಕೆಲವು ತಿಂಗಳ ಕಾಲ ಮುಂದೂಡುವಂತೆ ಬಹಳಷ್ಟು ಜನ ನಿತ್ಯವೂ ಒತ್ತಾಯ ಮಾಡುತ್ತಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಸಚಿವ ಕೆ.ಎಸ್‌.ಈಶ್ವರಪ್ಪ ತಿಳಿಸಿದರು.

‘ಆದರೆ, ಚುನಾವಣೆ ನಡೆಸುವಂತೆ ಹೈಕೋರ್ಟ್‌ ತಿಳಿಸಿದೆ. ಚುನಾವಣಾ ಆಯೋಗವೂ ಸಿದ್ಧತೆ ನಡೆಸಿದೆ. ನಾವು ಈಗ ಏನೂ ಮಾಡುವ ಸ್ಥಿತಿಯಲ್ಲಿ ಇಲ್ಲ. ಯಾರಾದರೂ ಖಾಸಗಿ ವ್ಯಕ್ತಿಗಳು ಸುಪ್ರೀಂಕೋರ್ಟ್‌ ಮೊರೆ ಹೋದರೆ ಏನಾದರೂ ಆಗಬಹುದು’ ಎಂದು ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೂ ಗ್ರಾಮಪಂಚಾಯತಿ ಚುನಾವಣೆಗೂ ವ್ಯತ್ಯಾಸವಿದೆ. ಗ್ರಾಮ ಪಂಚಾಯತಿಗಳಲ್ಲಿ ಮತ ಕೇಳಲು ಗುಂಪುಗುಂಪಾಗಿ ಮನೆ ಮನೆಗಳಿಗೆ ಹೋಗುತ್ತಾರೆ. ಹೀಗಾಗಿ ಈಗ ಕಡಿಮೆ ಆದಂತಿರುವ ಕೋವಿಡ್‌ ಮತ್ತೆ ಹೆಚ್ಚಾದರೆ ಸಮಸ್ಯೆ ಆಗುತ್ತದೆ ಎಂಬ ಆತಂಕ ಕಾಡುತ್ತಿದೆ ಎಂದು ಹೇಳಿದರು.

‘ಮರಾಠ ಅಭಿವೃದ್ಧಿ ನಿಗಮ ಘೋಷಣೆ ಮಾಡಿದ್ದರಲ್ಲಿ ತಪ್ಪೇನು ಇಲ್ಲ. ಹಾಗೆಂದು ಕುರುಬ ಅಭಿವೃದ್ಧಿ ನಿಗಮ ಮಾಡಿ ಎಂದು ಬೇಡಿಕೆ ಇಡುವುದಿಲ್ಲ. ಜಾತಿಗೊಂದು ನಿಗಮ ರಚನೆ ಮಾಡುವುದು ಎಷ್ಟರಮಟ್ಟಿಗೆ ಸರಿ ಅಥವಾ ತಪ್ಪು ಎನ್ನುವುದರ ಚರ್ಚೆ ಆಗಬೇಕು’ ಎಂದು ಈಶ್ವರಪ್ಪ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಜಕ್ಕೂರಿನಲ್ಲಿ ಪಾರಂಪರಿಕ ಗ್ರಾಮದ ಪಕ್ಕದಲ್ಲೇ ಕೊಳಚೆ ನೀರು ಹರಿಯುವ ನಾಲೆ ಇದ್ದು, ಕಲುಷಿತ ನೀರನ್ನು ಶುದ್ಧೀಕರಿಸಿ ಕೆರೆಗೆ ಬಿಡುವ ಸಂಬಂಧ ಘಟಕ ಸ್ಥಾಪನೆಗೆ ಜಲಮಂಡಳಿಗೆ ಒಂದು ಎಕರೆ ಜಮೀನು ನೀಡಲು ಇಂದು ನಡೆದ ಅಧಿಕಾರಿಗಳ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ಹೇಳಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು