ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ರಾಮ ಸಂಗ್ರಾಮ’ ಆರಂಭ: ಮೊದಲ ಹಂತದ ಮತದಾನ ಇಂದು

ಪಕ್ಷಗಳ ನೆರಳಿನಲ್ಲಿ ಅಭ್ಯರ್ಥಿಗಳು
Last Updated 22 ಡಿಸೆಂಬರ್ 2020, 1:20 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮ ಪಂಚಾಯಿತಿ ಚುನಾವಣೆಯ ಮೊದಲ ಹಂತದ ಮತದಾನ ಮಂಗಳವಾರ ನಡೆಯಲಿದೆ. ಪ್ರಮುಖ ಮೂರು ರಾಜಕೀಯ ಪಕ್ಷಗಳು ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಲು ಈಗಾಗಲೇ ವಿವಿಧ ತಂತ್ರಗಳನ್ನು ಅನುಸರಿಸಿವೆ.

ಪ್ರಜಾತಂತ್ರದ ಬೇರು ಮಟ್ಟದಲ್ಲಿ ತಳವೂರಲು ಸಾಧ್ಯವಾದರೆ ಮುಂಬರುವ ಜಿಲ್ಲಾ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿಗಳಲ್ಲಿ ಪ್ರಾಬಲ್ಯ ಸಾಧಿಸಲು ಮತ್ತು ಪಕ್ಷಗಳ ನೆಲೆಯನ್ನು ಗಟ್ಟಿಗೊಳಿಸಲು ಸಾಧ್ಯ ಎಂಬ ಕಾರಣಕ್ಕೆ ತೆರೆಯ ಮರೆಯಲ್ಲೇ ಬಿಜೆಪಿ, ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಾಯಕರು, ಶಾಸಕರು ಹಾಗೂ ವಿಧಾನಸಭೆ ಚುನಾವಣೆಯಲ್ಲಿ ಸೋಲು ಕಂಡ ಅಭ್ಯರ್ಥಿಗಳು ಈ ಚುನಾವಣೆಯ ಅಭ್ಯರ್ಥಿಗಳಿಗೆ ಎಲ್ಲ ರೀತಿಯ ನೆರವನ್ನೂ ನೀಡಿದ್ದಾರೆ.

ರಾಜ್ಯದ ಅಧಿಕಾರಾರೂಢ ಬಿಜೆಪಿ, ಅಧಿಕ ಸ್ಥಾನಗಳನ್ನು ಗೆಲ್ಲಲು ಆಕ್ರಮಣಕಾರಿ ತಂತ್ರಗಳನ್ನು ಅನುಸರಿಸಿದೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕೂಡ ಹಿಂದೆ ಬಿದ್ದಿಲ್ಲ.

ಈ ಬಾರಿ ರಾಜ್ಯದ ಉದ್ದಗಲಕ್ಕೂ ಸಾಕಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಲಕ್ಷಾಂತರ ರೂಪಾಯಿಗಳಿಗೆ ಪಂಚಾಯಿತಿ ಸದಸ್ಯ ಸ್ಥಾನಗಳನ್ನು ಹರಾಜು ಹಾಕುವ ವ್ಯವಸ್ಥೆ ಬಹಿರಂಗವಾಗಿಯೇ ನಡೆಯಿತು. ಚುನಾವಣಾ ಆಯೋಗದ ಎಚ್ಚರಿಕೆಗೂ ಗ್ರಾಮಸ್ಥರು ಸೊಪ್ಪು ಹಾಕಲಿಲ್ಲ. ಅಲ್ಲದೆ, ಗ್ರಾಮದ ಅಭಿವೃದ್ಧಿ ಮತ್ತು ದೇವಸ್ಥಾನಗಳ ಅಭಿವೃದ್ಧಿಗೆ ಯಾರು ಹೆಚ್ಚು ಹಣ ಕೊಡುತ್ತಾರೋ ಅವರಿಗೇ ಮತ ಕೊಡುತ್ತೇವೆ ಎಂಬ ಷರತ್ತು ವಿಧಿಸಿದ್ದೂ ನಡೆಯಿತು.

ಒಟ್ಟು 5,761 ಗ್ರಾಮ ಪಂಚಾಯಿತಿಗಳಿಗೆ ಎರಡು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಎರಡನೇ ಹಂತದ ಮತದಾನ ಇದೇ 27ರಂದು ನಡೆಯಲಿದೆ. ಡಿ.30ರಂದು ಮತ ಎಣಿಕೆ ನಡೆಯಲಿದೆ.

ಮೊದಲ ಹಂತದ ಮತದಾನ: ಮೊದಲ ಹಂತದಲ್ಲಿ 117 ತಾಲ್ಲೂಕುಗಳ 3,019 ಗ್ರಾಮ ಪಂಚಾಯಿತಿಗಳ ಚುನಾವಣೆಗಾಗಿ ಒಟ್ಟು 23,625 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. 1,41,750 ಚುನಾವಣಾ ಸಿಬ್ಬಂದಿ ನೇಮಿಸಲಾಗಿದೆ. ಕೋವಿಡ್‌ ಇರುವುದರಿಂದ ಸುರಕ್ಷಿತ ಮತದಾನಕ್ಕಾಗಿ 45 ಸಾವಿರಕ್ಕೂ ಹೆಚ್ಚು ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಯನ್ನೂ ಬಳಸಿಕೊಳ್ಳಲಾಗುತ್ತಿದೆ. ಮತದಾರರು ಕಡ್ಡಾಯವಾಗಿ ಮಾಸ್ಕ್‌ ಧರಿಸಬೇಕು, ಕೈಗಳಿಗೆ ಸ್ಯಾನಿಟೈಸರ್‌ ಹಾಕಿಕೊಂಡ ಬಳಿಕವೇ ಮತಗಟ್ಟೆಯನ್ನು ಪ್ರವೇಶಿಸಬೇಕು ಎಂಬ ಸೂಚನೆಯನ್ನೂ ನೀಡಲಾಗಿದೆ.

ಮತದಾನ ಪ್ರಕ್ರಿಯೆಯಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಾಗಿದೆ. ಕೊರೊನಾ ಸೋಂಕಿತರಿಗೆ ಮತದಾನಕ್ಕೆ ಕೊನೆಯ ಒಂದು ಗಂಟೆ ಅವಕಾಶ ನೀಡಲಾಗಿದೆ ಎಂದು ಆಯೋಗ ತಿಳಿಸಿದೆ.

4,377 ಮಂದಿ ಅವಿರೋಧ ಆಯ್ಕೆ
ಮೊದಲ ಹಂತದಲ್ಲಿ 117 ತಾಲ್ಲೂಕುಗಳ 3,019 ಗ್ರಾಮ ಪಂಚಾಯತ್‌ಗಳ 48,048 ಸ್ಥಾನಗಳಿಗೆ ಮತದಾನ ನಡೆಯಲಿದೆ. ಬೀದರ್‌ ಜಿಲ್ಲೆಯಲ್ಲಿ ಮಾತ್ರ ಮತದಾನಕ್ಕೆ ಇವಿಎಂಗಳನ್ನು ಬಳಸಲಾಗುತ್ತದೆ. ಉಳಿದ ಕಡೆಗಳಲ್ಲಿ ಮತಪತ್ರಗಳನ್ನು ಬಳಸಲಾಗುತ್ತಿದೆ. ಮಂಗಳವಾರ 43,238 ಸ್ಥಾನಗಳಿಗೆ ಮತದಾನ ನಡೆಯಲಿದೆ. 4,377 ಮಂದಿ ಅವಿರೋಧ ಆಯ್ಕೆ ಆಗಿದ್ದಾರೆ.

* ಮತದಾನದ ಸಮಯ:ಬೆಳಿಗ್ಗೆ 7 ರಿಂದ ಸಂಜೆ 5ರವರೆಗೆ
* ಒಟ್ಟು ಗ್ರಾಮ ಪಂಚಾಯಿತಿ:5,761
* ಮೊದಲ ಹಂತ ಮತದಾನ:3,019
* ಒಟ್ಟು ಮತಗಟ್ಟೆ: 23,625
* ಮತದಾರರು: 1,53,84,509
* ಮತಗಟ್ಟೆ ಸಿಬ್ಬಂದಿ: 1,41,750
* ಸ್ವೀಕೃತ ನಾಮಪತ್ರ: 1,64,550
* ನಾಮಪತ್ರ ಸಲ್ಲಿಸದೇ ಖಾಲಿ ಉಳಿದ ಸ್ಥಾನಗಳು: 432
* ಕಣದಲ್ಲಿರುವ ಅಭ್ಯರ್ಥಿಗಳು: 1,17,383

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT