ಸೋಮವಾರ, ಮೇ 10, 2021
25 °C

ಕೋವಿಡ್ ವಿರುದ್ಧ ಗ್ರಾಮಗಳಲ್ಲಿ ಗ್ರಾ.ಪಂ. ಕಾರ್ಯಪಡೆಗಳು ಸಿದ್ಧವಾಗಲಿ: ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿರುವುದರಿಂದ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಇದರ ವಿರುದ್ಧ ಸಮರೋಪಾದಿಯಲ್ಲಿ ಹೋರಾಟ ನಡೆಸುವ ತುರ್ತುಸ್ಥಿತಿ ಬಂದಿದ್ದು, ಗ್ರಾಮ ಪಂಚಾಯತಿ ಕಾರ್ಯಪಡೆಗಳು ಸಿದ್ಧವಾಗಬೇಕು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ತಿಳಿಸಿದ್ದಾರೆ.

ಈ ಸಂಬಂಧ ಅವರು ಎಲ್ಲ ಗ್ರಾಮ, ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿಗಳ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಕಳೆದ ವರ್ಷ ಗ್ರಾಮ ಪಂಚಾಯಿತಿ ಕಾರ್ಯಪಡೆಗಳು ಹೆಚ್ಚು ಕ್ರಿಯಾಶೀಲವಾಗಿ ಕಾರ್ಯ ನಡೆಸಿದ್ದವು. ಈ ಬಾರಿಯೂ ಅದೇ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ಸಭೆ, ಮದುವೆಗಳಲ್ಲಿ ಭಾಗವಹಿಸದಿರಲಿ: ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರು ಸಭೆ, ಸಮಾರಂಭಗಳು ಮತ್ತು ಮದುವೆಗಳಲ್ಲಿ ಭಾಗವಹಿಸದೇ ಇರಲು ಮನವೊಲಿಸಬೇಕು ಎಂದು ಈಶ್ವರಪ್ಪ ಸಲಹೆ ನೀಡಿದ್ದಾರೆ.

ಅರ್ಹ ವ್ಯಕ್ತಿಗಳು ಲಸಿಕೆ ಹಾಕಿಸಿಕೊಳ್ಳಲು, ಜನರು ತಪ್ಪದೇ ಮಾಸ್ಕ್‌ ಧರಿಸಲು, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮತ್ತು ಸರ್ಕಾರ ಈ ಸಂಬಂಧ ಹೊರಡಿಸಿರುವ ಮಾರ್ಗಸೂಚಿಯನ್ನು ಪಾಲಿಸಲು ಮನವೊಲಿಸಬೇಕು. ಒಂದು ವೇಳೆ ಕೊರೊನಾ ಕಾಣಿಸಿಕೊಂಡರೆ ಕೂಡಲೇ ಪರೀಕ್ಷೆ ಮಾಡಿಸಿ, ಕ್ವಾರಂಟೈನ್‌ಗೆ ಒಳಪಡಿಸಿ, ಚಿಕಿತ್ಸೆ ಕೊಡಿಸಲು ಕ್ರಮವಹಿಸಬೇಕು ಎಂದು ಸೂಚನೆ ನೀಡಿದ್ದಾರೆ.

ಗ್ರಾ.ಪಂ ಕಾರ್ಯಪಡೆ: ರಾಜ್ಯದ ಎಲ್ಲ ಗ್ರಾಮಪಂಚಾಯಿತಿಗಳಲ್ಲೂ ಕಾರ್ಯಪಡೆಯನ್ನು ರಚಿಸಲಾಗಿದ್ದು, ಇದಕ್ಕೆ ಗ್ರಾಮ ಪಂಚಾಯಿತಿ ಅಧ್ಯಕ್ಷರೇ ಅಧ್ಯಕ್ಷರಾಗಿರುತ್ತಾರೆ. ಏಳು ಮಂದಿ ಸದಸ್ಯರನ್ನು ಕಾರ್ಯಪಡೆ ಹೊಂದಿರುತ್ತದೆ. ಇದಲ್ಲದೇ ಪ್ರತಿಯೊಂದು ಗ್ರಾಮ ಮಟ್ಟದಲ್ಲೂ ಕಾರ್ಯಪಡೆ ಇರುತ್ತದೆ.

38 ಲಕ್ಷ ಜನಕ್ಕೆ ಲಸಿಕೆ: ರಾಜ್ಯದಲ್ಲಿ ವಿವಿಧ ವಯೋಮಾನಗಳ 38,00,146 ಜನರಿಗೆ ಲಸಿಕೆ ನೀಡಲಾಗಿದೆ. 60 ವರ್ಷ ಮೇಲ್ಪಟ್ಟ 17,68,825 ಮಂದಿಗೆ ಮೊದಲ ಡೋಸ್‌ ನೀಡಲಾಗಿದೆ. ಈ ವರ್ಗದಲ್ಲಿ ಎರಡನೇ ಡೋಸ್‌ ಪಡೆದವರ ಸಂಖ್ಯೆ 2,74,448. 45 ರಿಂದ 59 ವರ್ಷ ವಯಸ್ಸಿನ 15,60,272 ಮಂದಿಗೆ ಮೊದಲ ಡೋಸ್‌, 1,96,601 ಮಂದಿ ಎರಡನೇ ಡೋಸ್‌ ಪಡೆದಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು