ಗುರುವಾರ , ಸೆಪ್ಟೆಂಬರ್ 23, 2021
20 °C
ಜ್ಯೋತಿಪಾಳ್ಯದಲ್ಲಿ ಭೂಮಿ ಪೂಜೆ ನೆರವೇರಿಸಿದ ಶಾಸಕ ಎ.ಮಂಜುನಾಥ್‌

‘ಅಜ್ಜಿ ಕಲಿಕಾ ಕೇಂದ್ರ’ ಕಾಮಗಾರಿಗೆ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಾಗಡಿ: ತಾಲ್ಲೂಕಿನ ಜ್ಯೋತಿಪಾಳ್ಯದ ಹದ್ದಿನ ಕಲ್ಲು ಬೆಟ್ಟದ ತಪ್ಪಲಿನ ವನಸಿರಿಯ ನಡುವೆ ಅಜ್ಜಿ ಕಲಿಕಾ ಕೇಂದ್ರದ ಕಟ್ಟಡಕ್ಕೆ ಭಾನುವಾರ ಭೂಮಿಪೂಜೆ ನೆರವೇರಿತು.

ಗ್ರಾಮೀಣ ಮಕ್ಕಳಿಗೆ ಪಠ್ಯೇತರ ಕೌಶಲ ಅಭಿವೃದ್ಧಿ ಕಲೆಗಳನ್ನು ಕಲಿಸುವ ಅಜ್ಜಿ ಕಲಿಕಾ ಕೇಂದ್ರವು ದೆಹಲಿಯ ನಿವೃತ್ತ ಕಲಾಶಿಕ್ಷಕಿ ಸಬಿಹಾ ಹಷ್ಮಿ ಮತ್ತು ತಂಡದವರಿಂದ ಆರಂಭವಾಗಲಿದೆ.

ಅಜ್ಜಿ ಕಲಿಕಾ ಕೇಂದ್ರದ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕ ಎ.ಮಂಜುನಾಥ್, ‘ಅಜ್ಜಿ ಕಲಿಕಾ ಕೇಂದ್ರದಲ್ಲಿ ಸ್ಥಳೀಯ ಯುವಜನತೆಗೆ ಅಜ್ಜಿ ಕಲಿಕಾ ಗ್ರಂಥಾಲಯ ಹಾಗೂ ಸಂಶೋಧನಾ ಕೇಂದ್ರವಿರಲಿದೆ. ಮಕ್ಕಳಿಗೆ ಓದುವ ಹವ್ಯಾಸ ಮತ್ತು ಕಂಪ್ಯೂಟರ್ ತರಬೇತಿ, ಕ್ರಿಯಾತ್ಮಕ ಚಟುವಟಿಕೆಗಳಾದ ಕಥಾಲೇಖನ, ಚಿತ್ರಕಲೆ, ರೇಖಾ ವಿನ್ಯಾಸ, ಸ್ಕ್ರೀನ್ ಪ್ರಿಂಟಿಂಗ್, ಕೊಲಾಜ್ ತಯಾರಿಕೆ, ಬಟ್ಟೆ ಮತ್ತು ರಟ್ಟಿನಿಂದ ಪುನರ್‌ ಬಳಕೆಯ ಕರಕುಶಲ ವಸ್ತು ತಯಾರಿಕೆ ಹಾಗೂ ಜೇಡಿಮಣ್ಣಿನಿಂದ ವಿವಿಧ ನಮೂನೆಯ ಕೌಶಲಯುಕ್ತ ವಸ್ತು ತಯಾರಿಕೆಗೆ ತರಬೇತಿ ದೊರೆಯುತ್ತಿರುವುದು ತುಂಬಾ ಸಂತೋಷ ತಂದಿದೆ’ ಎಂದರು.

‘ಅಜ್ಜಿ ಕಲಿಕಾ ಕೇಂದ್ರಕ್ಕೆ ಬೇಕಾದ ಸಕಲ ಸವಲತ್ತುಗಳನ್ನು ಒದಗಿಸಿಕೊಟ್ಟು, ಇದೊಂದು ಅಂತರರಾಷ್ಟ್ರೀಯ ಮಟ್ಟದ ಕಲಿಕಾ ಕೇಂದ್ರವಾಗುವಂತೆ ಅಭಿವೃದ್ಧಿಪಡಿಸಲಾಗುವುದು. ಅಜ್ಜಿ ಕಲಿಕಾ ಕೇಂದ್ರ ಕೆಂಪೇಗೌಡರ ನಾಡಿಗೆ ಕಳಸಪ್ರಾಯವಾಗಲಿದೆ. ಜ್ಯೋತಿ ಪಾಳ್ಯದ ಗ್ರಾಮದ ಸಂಪರ್ಕ ರಸ್ತೆಗೆ ಒಂದು ತಿಂಗಳ ಒಳಗೆ ಕಾಂಕ್ರೀಟ್ ಹಾಕಿಸಿಕೊಡುವೆ. ಅಜ್ಜಿ ಕಲಿಕಾ ಕೇಂದ್ರದಲ್ಲಿನ ಸವಲತ್ತುಗಳನ್ನು ಬಳಸಿಕೊಳ್ಳಲು ತಾಲ್ಲೂಕಿನ ಯುವಜನತೆ ಮುಂದಾಗಬೇಕು’ ಎಂದರು.

ಅಕ್ಷರ ವಂಚಿತ ಸಮುದಾಯಗಳ ಬಾಲಕಿಯರಿಗೆ ಕೇಂದ್ರದಲ್ಲಿ ವಿಶೇಷವಾಗಿ ಒತ್ತು ನೀಡುತ್ತಿರುವುದು ಮೆಚ್ಚುಗೆಯಾಯಿತು. 40 ವರ್ಷಗಳ ಕಾಲ ಕಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿ ತಮ್ಮ ಅಪಾರ ಅನುಭವವನ್ನು ಮಾಗಡಿ ಸೀಮೆಯ ಮಕ್ಕಳಿಗೆ ಕಲಿಸುತ್ತಿರುವ ಸಬಿಹಾ ಹಷ್ಮಿ ಅವರನ್ನು ತಾಲ್ಲೂಕಿನ ಜನತೆಯ ಪರವಾಗಿ ಅಭಿನಂದಿಸುತ್ತೇನೆ. ನಮ್ಮಿಂದ ಆಗುವ ಎಲ್ಲಾ ನೆರವನ್ನು ಕೇಂದ್ರಕ್ಕೆ ನೀಡುತ್ತೇನೆ. ತಾಲ್ಲೂಕಿನ ಯುವಜನತೆ ಕಲಿಕಾ ಕೇಂದ್ರಕ್ಕೆ ಬರಬೇಕು’ ಎಂದರು.

ಪ್ರಗತಿಪರ ಚಿಂತಕ ಕಲ್ಕೆರೆ ಶಿವಣ್ಣ ಮಾತನಾಡಿ, ‘ಉತ್ತರ ಪ್ರದೇಶದ ಆಲಿಗಡದಲ್ಲಿ ಜನಿಸಿದ ಸಬಿಹಾ ಹಷ್ಮಿ ಅವರು ಗ್ರಾಮೀಣ ಭಾಗದ ಬಾಲಕಿಯರಿಗೆ ಕರಕುಶಲ ಕಲೆಗಳನ್ನು ಕಲಿಸಿ ಭಾರತೀಯ ಭಾವೈಕ್ಯ ಪರಂಪರೆಯನ್ನು ಮುಂದುವರೆಸುತ್ತಿರುವುದು ಸಂತಸ ತಂದಿದೆ. ನಾವೆಲ್ಲರೂ ಸಬಿಹಾ ಹಷ್ಮಿ ಅವರ ನೆರವಿಗೆ ನಿಂತು ಅಜ್ಜಿ ಕಲಿಕಾ ಕೇಂದ್ರದ ಸವಲತ್ತುಗಳನ್ನು ಬಳಸಿಕೊಳ್ಳೋಣ’ ಎಂದರು.

ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್ (ಟಿಪಿಎಂಎಲ್) ಸಂಸ್ಥೆಯ ನಿರ್ದೇಶಕರಾದ ಪಾರೂಲ್ ಷಾ ಅವರು ಅಜ್ಜಿ ಕಲಿಕಾ ಕೇಂದ್ರದ ಸಂಸ್ಥಾಪಕಟ್ರಸ್ಟಿ ಸಬಿಹಾ ಹಷ್ಮಿ ಅವರೊಂದಿಗೆ ಅಜ್ಜಿ ಕಲಿಕಾ ಕೇಂದ್ರದ ಅಭಿವೃದ್ಧಿ ಬಗ್ಗೆ ಚರ್ಚಿಸಿದರು. ಮ್ಯಾನೇಜಿಂಗ್ ಟ್ರಸ್ಟಿಗಳಾದ ಡಾ.ಪ್ರಸನ್ನ ಶಂಕರ್‌, ಮಂಜು ಬಾಲಸುಬ್ರಮಣ್ಯ, ಎಜುಕೇಟರ್‌ ಸುಜ ಸ್ವಾಮಿನಾಥನ್‌, ಟ್ರಸ್ಟಿ ಸಚ್ಚಿನ್‌ ತಿವಾರಿ, ಆರ್ಟ್‌ ಎಜುಕೇಟರ್‌ ಗಂಗಾಜೋಷಿ, ಟ್ರಸ್ಟಿ ಹಾಗೂ ಸಾಮಾಜಿಕ ಕಾರ್ಯಕರ್ತೆ ಶಬನಂ ಹಷ್ಮಿ, ಬಾಚೇನಹಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ಜಯಮ್ಮ ಕೆಂಚಪ್ಪ, ಮರಲಗೊಂಡಲದ ವಿ.ವೆಂಕಟೇಶ್, ಗೋವಿಂದಪ್ಪ, ರಂಗೇಗೌಡ, ರಾಮಣ್ಣ, ಬಾಪುರಾವ್, ಪ್ರೇಮಾಬಾಯಿ, ಪಲ್ಲವಿ, ಸುಷ್ಮಾ, ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ, ಕಲಿಕಾ ಕೇಂದ್ರದ ವಿಜಯಸಿಂಹ, ಶೈಲೇಶ್, ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ಅಳಲಕುಪ್ಪೆ ಗುಡ್ಡೇಗೌಡ ಹಾಗೂ ಜ್ಯೋತಿಪಾಳ್ಯ, ಮರಲಗೊಂಡಲ, ರಂಗನಾಥ ಪುರ, ವೆಂಗಳಪ್ಪನ ತಾಂಡ್ಯದ ನಿವಾಸಿಗಳು ಇದ್ದರು. ಕಲಿಕಾಕೇಂದ್ರದ ಆವರಣದಲ್ಲಿ ಶಾಸಕ ಎ.ಮಂಜುನಾಥ್ ಇತರರು ಸಸಿಗಳನ್ನು ನೆಟ್ಟು ನೀರೆರೆದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು