ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುರುಲಿಂಗ ಕಾಪಸೆ ಅವರಿಗೆ ಜಿಎಸ್ಸೆಸ್ ಪ್ರಶಸ್ತಿ ಪ್ರದಾನ

Last Updated 1 ಮಾರ್ಚ್ 2022, 16:30 IST
ಅಕ್ಷರ ಗಾತ್ರ

ಬೆಂಗಳೂರು: ‘ಮಧುರಚೆನ್ನ, ಕುವೆಂಪು, ದ.ರಾ.ಬೇಂದ್ರೆ ಅವರಂತೆ ಜಿ.ಎಸ್.ಶಿವರುದ್ರಪ್ಪ ಅವರೂ ಪ್ರೀತಿಯ ಉಪಾಸಕರು’ ಎಂದು ಸಾಹಿತಿ ಡಾ. ಗುರುಲಿಂಗ ಕಾಪಸೆ ಹೇಳಿದರು.

ಡಾ.ಜಿಎಸ್ಸೆಸ್ ವಿಶ್ವಸ್ತ ಮಂಡಳಿ ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಡಾ.ಜಿಎಸ್ಸೆಸ್‌ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ‘ಪ್ರೀತಿಯನ್ನು ವಸ್ತುವನ್ನಾಗಿಸಿಕೊಂಡು ಹಲವು ಪದ್ಯಗಳನ್ನು ಇವರು ಬರೆದಿದ್ದಾರೆ’ ಎಂದರು.

‘ಕುವೆಂಪು ಮತ್ತು ಬೇಂದ್ರೆ ಅವರಿಗೆ ಬಿ.ಎಂ.ಶ್ರೀಕಂಠಯ್ಯ ಅವರು ಗುರುಗಳಾಗಿದ್ದರು. ಆದ್ದರಿಂದ ಅವರನ್ನು ಗುರುಪಿತಾಮಹರೆಂದು ಕರೆಯಬಹುದು. ಕುವೆಂಪು ಮತ್ತು ಬೇಂದ್ರೆಯವರಿಗೆ ಜಿ.ಎಸ್.ಶಿವರುದ್ರಪ್ಪ, ಚೆನ್ನವೀರ ಕಣವಿ ಮತ್ತು ನಾನು ಶಿಷ್ಯರು. ಗುರು–ಶಿಷ್ಯರ ಸಾಹಿತ್ಯಿಕ ಸಂಬಂಧ ಎಲ್ಲದಕ್ಕೂ ಮೀರಿ ಬೆಳೆದಿತ್ತು’ ಎಂದರು.

‘ಶಿವರುದ್ರಪ್ಪ ಅವರು ತ.ಸು.ಶಾಮರಾಯರ ಶಿಷ್ಯ ಎಂಬುದು ಎಲ್ಲರಿಗೂ ತಿಳಿದಿದೆ. ಕವಿತೆ ಬರೆಯುತ್ತಿದ್ದ ಶಿವರುದ್ರಪ್ಪ ಅವರ ತೊಂದರೆ ನೋಡಿದ್ದ ಗುರುಗಳು, ಮೈಸೂರಿನ ಸುತ್ತೂರು ಮಠಕ್ಕೆ ತಮ್ಮ ಶಿಷ್ಯನನ್ನು ಕರೆದೊಯ್ದು ಶಿಕ್ಷಣಕ್ಕೆ ಆಶ್ರಯ ಕೋರುತ್ತಾರೆ. ಈ ಇಬ್ಬರ ಸಂಬಂಧ ನಡುವೆ ಜಾತಿಯ ಗೋಡೆ ಇರಲಿಲ್ಲ. ಅದಕ್ಕೂ ಮೀರಿದ ಪ್ರೀತಿಯನ್ನು ಕಂಡು ಮಠದ ಹಿಂದಿನ ಸ್ವಾಮೀಜಿಯವರೇ ಮೆಚ್ಚುಗೆ ವ್ಯಕ್ತಪಡಿಸಿದ್ದರು’ ಎಂದು ಸ್ಮರಿಸಿಕೊಂಡರು.

‘ಗುರು–ಶಿಷ್ಯರ ಸಂಬಂಧ ಎಂದರೆ ಅಲ್ಲಿ ಜಾತಿಯ ಬೇಲಿ ಇರಲು ಸಾಧ್ಯವೇ ಇಲ್ಲ. ಬುದ್ಧಿವಂತಿಕೆ ಮತ್ತು ವಿದ್ಯಾರ್ಥಿಯ ಬೆಳವಣಿಗೆಯಷ್ಟೇ ಗುರುವಿಗೆ ಮುಖ್ಯವಾಗುತ್ತದೆ’ ಎಂದರು.

‘ಶಿವರುದ್ರಪ್ಪ ಅವರ ಸರಳತೆ ಹಲವರಿಗೆ ಪ್ರೇರಣೆಯಾಗಿದೆ. ಅವರು ಸಾಹಿತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅನನ್ಯವಾದುದು. ಅವರ ಪ್ರಭಾವ ಮತ್ತು ಪ್ರೇರಣೆ ನನ್ನ ಬರವಣಿಗೆ ಮೇಲೂ ಆಗಿದೆ’ ಎಂದು ಹೇಳಿದರು.

ಡಾ.ಜಿಎಸ್ಸೆಸ್ ವಿಶ್ವಸ್ತ ಮಂಡಳಿಯ ಗೌರವಾಧ್ಯಕ್ಷ ಬಸವರಾಜ ಕಲ್ಗುಡಿ ಮಾತನಾಡಿ, ‘ಸತ್ಯ, ಶಿವ ಮತ್ತು ಸೌಂದರ್ಯದ ಪರಮಾರ್ಥ ಎಂದರೆ ಪ್ರೀತಿ ಎಂದು ಜಿಎಸ್ಸೆಸ್ ಸಾರಿದ್ದಾರೆ. ಅವರ ಗೆಳೆಯರಾದ ಗುರುಲಿಂಗ ಕಾಪಸೆ ಅವರಿಗೆ ಈ ಪ್ರಶಸ್ತಿ ನೀಡಿರುವುದು ಅರ್ಥಪೂರ್ಣವಾಗಿದೆ’ ಎಂದರು.

ಲೇಖಕಿ ಡಾ.ಎಂ.ಎಸ್. ಆಶಾದೇವಿ ಅಭಿನಂದನಾ ಭಾಷಣ ಮಾಡಿದರು. ಮಂಡಳಿಯ ಅಧ್ಯಕ್ಷ ಡಾ.ನಟರಾಜ ಬೂದಾಳು ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT