ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಣಿಜ್ಯ ತೆರಿಗೆ ಇಲಾಖೆ: 18 ಮಂದಿ ಅಮಾನತು

ಜಿಎಸ್‌ಟಿ ವಂಚನೆಯಲ್ಲಿ ಶಾಮೀಲಾಗಿರುವ ಆರೋಪ
Last Updated 2 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಂಚನೆಯಲ್ಲಿ ಶಾಮೀಲಾದ ಆರೋಪದ ಮೇಲೆ ವಾಣಿಜ್ಯ ತೆರಿಗೆ ಇಲಾಖೆಯ ಜಂಟಿ ಆಯುಕ್ತೆ, ಮೂವರು ಸಹಾಯಕ ಆಯುಕ್ತರು ಸೇರಿದಂತೆ 18 ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ಜಿಎಸ್‌ಟಿ ವಂಚಿಸಲು ಅನುಕೂಲವಾಗುವಂತೆ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲು ಲಂಚ ಪಡೆಯುತ್ತಿದ್ದ ಆರೋಪ ಈ ಎಲ್ಲರ ಮೇಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆಯಂತೆ 18 ಮಂದಿಯನ್ನೂ ಅಮಾನತುಗೊಳಿಸಿ ಇತ್ತೀಚೆಗೆ ಆದೇಶ ಹೊರಡಿಸಲಾಗಿದೆ.

ವಾಣಿಜ್ಯ ತೆರಿಗೆ ಇಲಾಖೆಯ ಮೈಸೂರು ವಲಯದ ಜಾರಿ ವಿಭಾಗದ ಜಂಟಿ ಆಯುಕ್ತೆ ಎಸ್‌.ಜಿ. ಸವಿತಾ, ಜಾರಿ ವಿಭಾಗದ ಸಹಾಯಕ ಆಯುಕ್ತರಾದ ವಿ. ಉಮಾದೇವಿ (ಚಿಕ್ಕಬಳ್ಳಾಪುರ), ಕೆ.ಜಿ. ಶ್ರೀರಂಗಪ್ಪ (ಚಿತ್ರದುರ್ಗ), ಬಿ.ಎಲ್‌. ಕೇಶವಮೂರ್ತಿ (ಮಡಿಕೇರಿ) ಅಮಾನತುಗೊಂಡಿರುವ ಹಿರಿಯ ಅಧಿಕಾರಿಗಳು.

ಇಲಾಖೆಯ ಜಾರಿ ವಿಭಾಗದ ವಾಣಿಜ್ಯ ತೆರಿಗೆ ಅಧಿಕಾರಿಗಳಾದ ನಳಿನಾಕುಮಾರಿ, ಗಾಯತ್ರಿ ಎನ್‌.ಟಿ. (ಮೈಸೂರು), ಜಯರಾಂ ಎಸ್‌., ಜನಾರ್ದನ್‌ ಆರ್‌., ಅಪ್ಪು ಪೂಜಾರಿ (ಬೆಂಗಳೂರು), ವಾಣಿಜ್ಯ ತೆರಿಗೆ ನಿರೀಕ್ಷಕರಾದ ಸಿ.ಎನ್‌. ಪಾಟೀಲ್‌ (ಬೆಳಗಾವಿ), ವಾಸುದೇವ್‌ ಎಚ್‌.ಎಸ್‌. (ಮಡಿಕೇರಿ), ಯೋಗಾನಂದ್‌ ಕೆ. (ಮೈಸೂರು), ರಂಗಸ್ವಾಮಿ ಆರ್‌., ವಿಜಯ್‌ಕುಮಾರ್‌ ಜೆ. (ಚಿತ್ರದುರ್ಗ), ಶ್ರೀಧರ್‌ ಎಸ್‌., ದಿನೇಶ್‌ ಎಸ್‌. ಮತ್ತು ಉಮೇಶ್‌ ಆರ್‌. (ಬೆಂಗಳೂರು ಕೇಂದ್ರ ಕಚೇರಿ) ಹಾಗೂ ಮಡಿಕೇರಿಯ ಜಾರಿ ವಿಭಾಗದ ಸಹಾಯಕ ಆಯುಕ್ತರ ಕಚೇರಿಯ ಪ್ರಥಮ ದರ್ಜೆ ಸಹಾಯಕ ಧನರಾಜ್‌ ಎಂ.ಕೆ. ಅವರನ್ನು ಅಮಾನತು ಮಾಡಲಾಗಿದೆ.

ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಲಂಚದ ಆಸೆಗೆ ಜಿಎಸ್‌ಟಿ ವಂಚಿಸಿ ಸರಕು ಸಾಗಣೆ ಮಾಡಲು ಅವಕಾಶ ಕಲ್ಪಿಸುತ್ತಿರುವ ಕುರಿತು ‘ಸುವರ್ಣ ನ್ಯೂಸ್‌’ ಸುದ್ದಿವಾಹಿನಿ ಕುಟುಕು ಕಾರ್ಯಾಚರಣೆ ನಡೆಸಿತ್ತು. ಲಂಚ ನೀಡಿದರೆ ಜಿಎಸ್‌ಟಿ ಪಾವತಿಸದೇ ಸರಕು ಸಾಗಿಸಲು ಅವಕಾಶ ಮಾಡಿಕೊಡುವುದಾಗಿ ಈ ಎಲ್ಲ ಅಧಿಕಾರಿಗಳು ಹಾಗೂ ಸಿಬ್ಬಂದಿ ಒಪ್ಪಿಕೊಂಡಿರುವುದು ರಹಸ್ಯ ಕ್ಯಾಮೆರಾಗಳಲ್ಲಿ ಸೆರೆಯಾಗಿತ್ತು. ಈ ಸಂಬಂಧ ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತರ ಆದೇಶದಂತೆ ಇಲಾಖೆಯ ಅಧಿಕಾರಿಗಳು ಪ್ರಾಥಮಿಕ ವಿಚಾರಣೆ ನಡೆಸಿದ್ದರು.

‘ಅಕ್ರಮದಲ್ಲಿ ಶಾಮೀಲಾಗಿರುವ ರೀತಿಯಲ್ಲಿ 18 ಮಂದಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಮಾತನಾಡಿರುವ ವಿಡಿಯೊ ಸಾಕ್ಷ್ಯ ಆಧರಿಸಿ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಆರೋಪಗಳು ದೃಢಪಟ್ಟರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ವಾಣಿಜ್ಯ ತೆರಿಗೆ ಇಲಾಖೆ ಆಯುಕ್ತೆ ಸಿ. ಶಿಖಾ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT