ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

1 ಕೋಟಿ ಮನೆಗೆ ಭರವಸೆ ಕಾರ್ಡ್‌: ಕಾಂಗ್ರೆಸ್‌ ಪ್ರಚಾರ ಕಾರ್ಯತಂತ್ರ

Last Updated 5 ಫೆಬ್ರುವರಿ 2023, 21:38 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಿ, ಮತದಾರರನ್ನು ನೇರವಾಗಿ ತಟ್ಟುವ ವಿಷಯಗಳನ್ನು ಮುಂದಿಟ್ಟು ಮತಬೇಟೆಗಿಳಿಯಲು ಕಾಂಗ್ರೆಸ್‌ ತಯಾರಿ ನಡೆಸಿದೆ.

‘ಅಲ್ಲದೆ, ತನ್ನ ‘ಭರವಸೆ’ಯ ಕಾರ್ಡ್‌ಗಳನ್ನು ಒಂದು ಕೋಟಿ ಮನೆಗಳಿಗೆ ತಲುಪಿಸಲು ಮುಂದಾಗಿದೆ. ಈ ಕಾರ್ಡ್‌ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಸಹಿ ಇರಲಿದೆ.

‌‘ಮೂರು ‘ಸಿ’ಗಳ (ಕ್ಯಾಂಡಿಡೇಟ್‌, ಕಾಸ್ಟ್‌, ಕ್ಯಾಶ್‌) ನಡುವೆಯೇ ಈ ಬಾರಿ ಚುನಾವಣೆ ಎಂಬ ಜನಸಾಮಾನ್ಯರ ಅಭಿ
ಪ್ರಾಯದ ಜೊತೆಗೆ ಹೆಜ್ಜೆ ಇಡುತ್ತಲೇ, ಭ್ರಷ್ಟಾಚಾರ, ಬೆಲೆ ಏರಿಕೆ, ಸರ್ಕಾರದ ಆಡಳಿತ ವೈಫಲ್ಯವನ್ನು ಮತದಾರರ ಮುಂದಿಡಲು ಪಕ್ಷದಲ್ಲಿ ತಯಾರಿ ನಡೆದಿದೆ. ಮತದಾರರ ನಾಡಿಮಿಡಿತ ಅರಿತು, ಪ್ರಣಾಳಿಕೆ ರೂಪಿಸಲು ಮತ್ತು ಪ್ರಚಾರ ಕಾರ್ಯತಂತ್ರ ರೂಪಿಸಲು ಚರ್ಚೆ ನಡೆದಿದೆ’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ಹೇಳಿದರು.

‘2018ರ ಚುನಾವಣೆಯಲ್ಲಿ ಮಾಡಿದ್ದ ತಪ್ಪುಗಳನ್ನು ಈ ಬಾರಿ ತಿದ್ದಿಕೊಳ್ಳಬೇಕು. ಮುಖ್ಯವಾಗಿ ಅಭ್ಯರ್ಥಿಗಳ ಆಯ್ಕೆ, ವರ್ಚಸ್ಸು, ಚುನಾವಣೆ ಎದುರಿಸಲು ಎಲ್ಲ ರೀತಿಯಲ್ಲೂ ‘ಸಾಮರ್ಥ್ಯ’ ಇರುವವರಿಗೆ ಟಿಕೆಟ್‌ ನೀಡಬೇಕು. ಅಲ್ಪಸಂಖ್ಯಾತರು ಬೇಡಿಕೆ ಇಡುವ ಕ್ಷೇತ್ರವನ್ನು ನೀಡಿದ ಪರಿಣಾಮ ಕ್ಷೇತ್ರ ಕಳೆದುಕೊಂಡಿರುವುದು, ಸೋಲುಕಂಡ ಅಭ್ಯರ್ಥಿಗಳಿಗೆ ನಿರಂತರ ಅವಕಾಶ ನೀಡದಿರುವುದರಿಂದ ಎದುರಾಗಿರುವ ಅಭ್ಯರ್ಥಿ ಕೊರತೆ, ಸಾಮೂಹಿಕ ನಾಯಕತ್ವದಿಂದ ಆಗಬಹುದಾದ ಲಾಭ... ಈಎಲ್ಲವನ್ನು ಗಮನದಲ್ಲಿಟ್ಟುಕೊಂಡು ಈ ಬಾರಿ ಟಿಕೆಟ್‌ ಹಂಚಿಕೆ ಮಾಡಲು ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ ನಡುವೆ ಚರ್ಚೆಯಾಗಿದೆ ಎಂದೂ ತಿಳಿಸಿದರು.

‘ಹಳೆ ಮೈಸೂರು ಭಾಗದಲ್ಲಿ ಡಿ.ಕೆ.ಶಿವಕುಮಾರ್ ಅವರ ವರ್ಚಸ್ಸು ಹೆಚ್ಚಿಸಿ, ಅವರ ನಾಯಕತ್ವದ ದಾಳ ಉರುಳಿಸಿ ಜೆಡಿಎಸ್ ಮತ ಸೆಳೆಯಲು ಕೂಡಾ ತಂತ್ರಗಾರಿಕೆ ರೂಪಿಸಲಾಗುತ್ತಿದೆ. ಇದರಿಂದ ಜೆಡಿಎಸ್ ಗಳಿಸಬಹುದಾದ ಸ್ಥಾನ ಸಂಖ್ಯೆ ಕುಸಿಯಬಹುದು. ಜೊತೆಗೆ, ಉತ್ತರ ಕರ್ನಾಟಕ ಭಾಗದಲ್ಲಿ ಲಿಂಗಾಯತ ಸಮುದಾಯವನ್ನು ಓಲೈಸಲು ಕೂಡಾ ಕಾರ್ಯತಂತ್ರವೂ ರೂಪಿಸಲಾಗುತ್ತಿದೆ. ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ, ಪಂಚಮಸಾಲಿ, ಒಕ್ಕಲಿಗರು ಸೇರಿದಂತೆ ವಿವಿಧ ಸಮುದಾಯಗಳ ಮೀಸಲಾತಿ ಬೇಡಿಕೆ ಬಗ್ಗೆ ಸರ್ಕಾರದ ನಿಲುವು ಮತದಾರರ ಮೇಲೆ ಉಂಟು ಮಾಡಬಹುದಾದ ಪರಿಣಾಮ, ಕಾಂಗ್ರೆಸ್‌ ಈಗಾಗಲೇ ನೀಡಿದ ಭರವಸೆಗಳಿಗೆ ಮತದಾರರ ಸ್ಪಂದನೆ ಇಂಥ ವಿಚಾರಗಳ ಬಗ್ಗೆಯೂ ಅವಲೋಕನ ನಡೆಯುತ್ತಿದೆ’ ಎಂದರು.

‘ಸರ್ವೆಗಳು ಪಕ್ಷಕ್ಕೆ ಸ್ಪಷ್ಟ ಬಹುಮತ (136 ಸೀಟು) ತೋರಿಸಿವೆ. ಮತದಾರರ ವಿಶ್ವಾಸವನ್ನು ಸರ್ವೆಗಳು ವ್ಯಕ್ತಪಡಿಸಿವೆ. ಆದರೆ, ಖಾಸಗಿ ಸಂಸ್ಥೆಯ ಸರ್ವೆಯನ್ನಷ್ಟೇ ಪೂರ್ಣ ನೆಚ್ಚಿಕೊಳ್ಳದೆ, ಕಾರ್ಯಕರ್ತರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬೂತ್‌ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಿಸುವ ಕೆಲಸ ನಡೆದಿದೆ. ಮತದಾರರಲ್ಲಿ ಭರವಸೆ ಮೂಡಿಸಲು ಸಾಕಷ್ಟು ಕೆಲಸ ಮಾಡಿದೆ. ಹೀಗಾಗಿ, ಪಕ್ಷದ ಪರವಾದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಮುಂದೆ ಇನ್ನೂ ಕೆಲ ಮಹತ್ವದ ಭರವಸೆಗಳನ್ನು ನೀಡಲು ಉದ್ದೇಶಿಸಲಾಗಿದೆ’ ಎಂದೂ ನಾಯಕರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT