ಬುಧವಾರ, ಸೆಪ್ಟೆಂಬರ್ 29, 2021
21 °C
ಸಹಕಾರ ಬ್ಯಾಂಕ್‌ ವಂಚನೆ ಪ್ರಕರಣ

ಗುರುರಾಘವೇಂದ್ರ ಬ್ಯಾಂಕ್ ಪ್ರಕರಣದ ಸಿಬಿಐ ತನಿಖೆಗೆ ಅಭ್ಯಂತರವಿಲ್ಲ: ಸೋಮಶೇಖರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ’ಬಸವನಗುಡಿಯ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ವಂಚನೆಯ ಪ್ರಕರಣವನ್ನು ಸಿಬಿಐಗೆ ವಹಿಸಲು ಯಾವುದೇ ಅಭ್ಯಂತರವಿಲ್ಲ. ಈ ಸಂಬಂಧ ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಅಧಿಕಾರಿಗಳೊಂದಿಗೆ ಚರ್ಚಿಸಿ, ತಜ್ಞರ ಸಮಿತಿ ರಚನೆಗೂ ಕ್ರಮ ಕೈಗೊಳ್ಳಲಾಗುವುದು’ ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದರು. 

ವಿಧಾನಪರಿಷತ್ತಿನಲ್ಲಿ ಕಾಂಗ್ರೆಸ್‌ನ ಯು.ಬಿ. ವೆಂಕಟೇಶ್‌ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ‘ಪ್ರಕರಣದ ಕುರಿತು ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದೆ. ಹೈಕೋರ್ಟ್‌ ಮತ್ತು ಆರ್‌ಬಿಐ ಮೇಲ್ವಿಚಾರಣೆ ನಡೆಸುತ್ತಿವೆ. ಬ್ಯಾಂಕಿನಲ್ಲಿ ಹಣ ದುರುಪಯೋಗಕ್ಕೆ ಕಾರಣರಾದ ಸಿಬ್ಬಂದಿ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ’ ಎಂದೂ ಮಾಹಿತಿ ನೀಡಿದರು. 

‘2014ರಿಂದ 2018–19ರವರೆಗೆ
ಪುನರ್‌ ಲೆಕ್ಕಪರಿಶೋಧನಗೆ
ಆದೇಶಿಸಲಾಗಿದೆ. 2019–20ನೇ ಸಾಲಿನ
ಲೆಕ್ಕ ಪರಿಶೋಧನೆ ಪೂರ್ಣಗೊಂಡಿದ್ದು, ಬ್ಯಾಂಕ್‌ ₹1,923 ಕೋಟಿ ನಷ್ಟ ಹೊಂದಿದೆ. ಏಳು ವರ್ಷಗಳ ಪುನರ್‌ ಲೆಕ್ಕ ಪರಿಶೋಧನೆ ಕಾರ್ಯ ಪೂರ್ಣಗೊಂಡ ನಂತರ ವಾಸ್ತವಿಕ ಅಂಶಗಳು ಬೆಳಕಿಗೆ ಬರಲಿವೆ’ ಎಂದರು. 

‘ಬ್ಯಾಂಕಿನ ಲೆಕ್ಕಪರಿಶೋಧಕರನ್ನು ಕಪ್ಪು ಪಟ್ಟಿಗೆ ಸೇರಿಸಿ, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ. ವಂಚನೆ ಪ್ರಕರಣದಲ್ಲಿ ಭಾಗಿಯಾದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆಯೂ ನಡೆಯುತ್ತಿದೆ‘ ಎಂದರು. 

ಬಂಧನ ಏಕಿಲ್ಲ: ‘46 ಸಾವಿರ ಠೇವಣಿದಾರರನ್ನು ವಂಚಿಸಲಾಗಿದೆ. ಜಾಸ್ತಿ ಬಡ್ಡಿ ಸಿಗುತ್ತದೆ ಎಂಬ ಕಾರಣಕ್ಕೆ ಬೇರೆ ಬೇರೆ ಸಹಕಾರ ಬ್ಯಾಂಕ್‌ನವರೂ ಈ ಬ್ಯಾಂಕ್‌ನಲ್ಲಿ ಠೇವಣಿ ಇಟ್ಟಿದ್ದಾರೆ. ಕೇವಲ 24 ಜನರಿಗೆ ₹1,500 ಕೋಟಿಗೂ ಹೆಚ್ಚು ಸಾಲ ವಿತರಿಸಲಾಗಿದೆ. ಆದರೆ, ಈ ಬಗ್ಗೆ ಬ್ಯಾಂಕ್‌ನಲ್ಲಿ ದಾಖಲೆಗಳೇ ಇಲ್ಲ ಎನ್ನುತ್ತಿದ್ದಾರೆ. ಈ ಹಗರಣದಲ್ಲಿ ಸರ್ಕಾರದ ಪಾತ್ರವೂ ಇರಬಹುದು ಎಂಬ ಅನುಮಾನ ಮೂಡುತ್ತಿದೆ‘ ಎಂದು ಯು.ಬಿ. ವೆಂಕಟೇಶ್‌ ಹೇಳಿದರು.

‘ತಪ್ಪಿತಸ್ಥ ಲೆಕ್ಕಪರಿಶೋಧಕರನ್ನು ಕೇವಲ ಕಪ್ಪು ಪಟ್ಟಿಗೆ ಸೇರಿಸಿ ಸುಮ್ಮನಾಗಿದ್ದಾರೆ. ಅವರನ್ನು ಈವರೆಗೆ ಏಕೆ ಬಂಧಿಸಿಲ್ಲ’ ಎಂದು ಪ್ರಶ್ನಿಸಿದರು. 

‘ತನಿಖೆಯ ಪ್ರಗತಿ ಮತ್ತು ಬ್ಯಾಂಕಿನ ಸ್ಥಿತಿ–ಗತಿ ಕುರಿತು ಠೇವಣಿದಾರರಿಗೆ ನಿಯ
ಮಿತವಾಗಿ ಮಾಹಿತಿ ನೀಡಬೇಕು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು’ ಎಂದೂ ಅವರು ಒತ್ತಾಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು