ಶುಕ್ರವಾರ, ಮೇ 27, 2022
30 °C

ನೈಸ್‌ ವಿರುದ್ಧ ಕ್ರಮಕ್ಕೆ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸರಿಯಾದ ರಸ್ತೆಯನ್ನೇ ನಿರ್ಮಿಸದೇ ಜನರಿಂದ ಬೇಕಾಬಿಟ್ಟಿ ಟೋಲ್‌ ವಸೂಲಿ ಮಾಡುತ್ತಿರುವ ನಂದಿ ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ ಎಂಟರ್‌ಪ್ರೈಸಸ್‌ (ನೈಸ್‌) ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ಹೋರಾಟ ಆರಂಭಿಸುತ್ತೇನೆ’ ಎಂದು ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ. ದೇವೇಗೌಡ ಹೇಳಿದರು.

ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ಅನುಮತಿ ಇಲ್ಲದೆ ಟೋಲ್‌ ದರ ಹೆಚ್ಚಳ ಮಾಡಿದೆ. ಸರ್ಕಾರದ ಎಲ್ಲ ನಿಯಮಗಳು ಮತ್ತು ಒಪ್ಪಂದದ ಷರತ್ತುಗಳನ್ನು ಉಲ್ಲಂಘಿಸಿ ನೈಸ್‌ ಕಂಪನಿ ಟೋಲ್‌ ಸಂಗ್ರಹಿಸುತ್ತಿದೆ. ಇದರ ವಿರುದ್ಧ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರಿಗೆ ಪತ್ರ ಬರೆದಿದ್ದೇನೆ’ ಎಂದರು.

ನೈಸ್‌ ಸಂಸ್ಥೆಯ ಅಕ್ರಮಗಳ ಕುರಿತು ವಿಧಾನ ಪರಿಷತ್‌ನಲ್ಲಿ ಚರ್ಚೆ ನಡೆದಿತ್ತು. ಆದರೆ, ಯಾವುದೇ ಸಚಿವರಿಂದ ಸ್ಪಷ್ಟವಾದ ಉತ್ತರ ಬಂದಿಲ್ಲ. ಈ ವಿಚಾರದಲ್ಲಿ ತುರ್ತಾಗಿ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಹಾಗೂ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆಯಲಾಗಿದೆ. ಮುಖ್ಯಮಂತ್ರಿಯವರಿಗೆ ಸಮಯ ಇಲ್ಲದೇ ಇರಬಹುದು. ಸಚಿವರಿಗಾದರೂ ಆ ಜವಾಬ್ದಾರಿ ವಹಿಸಲಿ ಎಂದು ಒತ್ತಾಯಿಸಿದರು.

ಸಮಿತಿ ಬದಲಾವಣೆಗೆ ಅಸಮಾಧಾನ: ‘ಬೆಂಗಳೂರು– ಮೈಸೂರು ಇನ್‌ಫ್ರಾಸ್ಟ್ರಕ್ಚರ್‌ ಕಾರಿಡಾರ್‌ನಲ್ಲಿನ ಲೋಪಗಳ ಕುರಿತು ಪರಿಶೀಲನೆಗೆ ನೇಮಿಸಿದ್ದ ಸದನ ಸಮಿತಿಯಲ್ಲಿ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಇದ್ದರು. ನೈಸ್‌ ಕಂಪನಿ ತಪ್ಪು ಮಾಡಿದೆ ಎಂದು ಅವರು ಹೇಳಿದ್ದರು. ಈಗ ಮಾಧುಸ್ವಾಮಿ ಅವರನ್ನೇ ಸಮಿತಿಯಿಂದ ಕೈಬಿಡಲಾಗಿದೆ’ ಎಂದು ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.

ರಸ್ತೆ ನಿರ್ಮಿಸದೇ ಟೋಲ್‌ ಸಂಗ್ರಹ ಮಾಡಲಾಗುತ್ತಿದೆ ಎಂದು ಸದನ ಸಮಿತಿ ವರದಿಯಲ್ಲಿ ತಿಳಿಸಿದೆ. ರಸ್ತೆ ನಿರ್ಮಾಣವನ್ನು ಪೂರ್ಣಗೊಳಿಸಿಲ್ಲ. ಉಪನಗರಗಳ ನಿರ್ಮಾಣವೂ ಆಗಿಲ್ಲ. ಒಪ್ಪಂದದಲ್ಲಿನ ಯಾವುದೇ ಷರತ್ತನ್ನೂ ಕಂಪನಿ ಪಾಲಿಸುತ್ತಿಲ್ಲ. ಆದರೆ, ನಿತ್ಯವೂ ₹ 2 ಕೋಟಿಯಿಂದ ₹ 3 ಕೋಟಿಯಷ್ಟು ಟೋಲ್‌ ಸಂಗ್ರಹ ಮಾಡಲಾಗುತ್ತಿದೆ. 2016 ರಿಂದ ಅಕ್ರಮವಾಗಿ ಟೋಲ್‌ ಸಂಗ್ರಹಿಸುವುದು ನಡೆಯುತ್ತಿದೆ ಎಂದು ದೂರಿದರು.

ಕೊಮ್ಮಘಟ್ಟದ ಬಳಿ ಬಿಎಂಐಸಿ ರಸ್ತೆ ನಿರ್ಮಾಣಕ್ಕೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ನೀಡಿದ್ದ  ಜಮೀನನ್ನು ನೈಸ್‌ ಕಂಪನಿ ಮೆಟ್ರೊ ರೈಲು ನಿಗಮಕ್ಕೆ ₹ 14 ಕೋಟಿಗೆ ಮಾರಾಟ ಮಾಡಿದೆ. ಇನ್ನೂ ₹ 100 ಕೋಟಿ ಮೌಲ್ಯದ ಜಮೀನು ಮಾರಲು ಮುಂದಾಗಿದೆ. ಕೊಮ್ಮಘಟ್ಟ ಬಳಿಯ 41 ಎಕರೆ ಜಮೀನಿನ ಕ್ರಯಪತ್ರ ರದ್ದು ಮಾಡುವಂತೆ ಮುಖ್ಯಮಂತ್ರಿಗೆ ಪತ್ರ ಬರೆಯಲಾಗಿದೆ ಎಂದರು.

ಯಾರೂ ಕ್ರಮ ಜರುಗಿಸಲಿಲ್ಲ: ‘ಇದು ನನ್ನದೇ ಕನಸಿನ ಯೋಜನೆಯಾಗಿತ್ತು. ಒಳ್ಳೆಯ ಉದ್ದೇಶದಿಂದ ಈ  ಯೋಜನೆ ತಂದಿದ್ದೆ. ಆದರೆ, ನೈಸ್‌ ಕಂಪನಿ ರೈತರನ್ನು ಸಂಕಷ್ಟಕ್ಕೆ ದೂಡಿತು. ಅವರಿಗೆ ಸರಿಯಾದ ಪರಿಹಾರವನ್ನೇ ನೀಡಿಲ್ಲ’ ಎಂದು ಹೇಳಿದರು.

‘ಎಚ್‌.ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನೈಸ್‌ ವಿಷಯದಲ್ಲಿ ಸುಪ್ರೀಂಕೋರ್ಟ್‌ ಆದೇಶ ಪಾಲಿಸುವಂತೆ ಹೇಳಿದ್ದೆ. ನೈಸ್‌ ವಿರುದ್ಧ ಕ್ರಮ ಜರುಗಿಸುವಂತೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ, ಬಿ.ಎಸ್‌. ಯಡಿಯೂರಪ್ಪ ಅವರಿಗೂ ಪತ್ರ ಬರೆದಿದ್ದೆ. ಯಾರೂ ಕ್ರಮ ಕೈಗೊಳ್ಳಲಿಲ್ಲ’ ಎಂದು ದೂರಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು